ಕತ್ತಲ ರಾತ್ರಿಯಲಿ
ಎಲ್ಲವ ತೊಡೆದು
ಹೋಗುವಾಗ
ನೆನಪಾಗಲಿಲ್ಲವೆ
ನಿನ್ನಕ್ಕ ತಂಗಿಯರು
ಮಡದಿ ಕಂದಮ್ಮರು
ಸಾಧನೆಯ ಶಿಖರವನೇರಿ
ದಿವ್ಯ ದೃಷ್ಟಿಯ ಬೀರಿ
ಪ್ರವಚನದ ಸಾಲುಗಳ ಸಾರಿ
ಹುಡುಕು
ಅನಾಥ ಕಂದ
ಅಮ್ಮ ಎಲ್ಲಿಹರೆಂದು
ಹೌದು ನಿನ್ನನುಯಾಯಿಗಳ
ಸಾಲು
ದೊಂದಿ ಬೆಳಕಿನಲಿ
ಹುಡುಕುತಿಹರು
ಶತ ಶತಮಾನಗಳುರುಳಿದರೂ
ಸಿಗಲಿಲ್ಲ ನೋಡು ಸಾಸಿವೆ
ಇನ್ನೂ ರಟ್ಟಾಗಲಿಲ್ಲ
ನಿನ್ನ ಸಂಜೀವಿನಿ ವಿದ್ಯೆ
ನನಗಿನ್ನೂ ಸಂದೇಹವಿದೆ
ನೀ ನಡುರಾತ್ರಿಯಲೇ
ಮನೆತೊರೆದ ಗುಟ್ಟೇನು
ವೈರಾಗ್ಯದಿ
ಮನಸುಟ್ಟ ಪ್ರಶ್ನೆ ಏನು
ನೀ ಹಲುಬಿದೆ ಹುಡುಕಿದೆ
ಸೊರಗಿದೆ ಕಂಗೆಟ್ಟೆ
ಏನೆಂದು ಆಸೆ ಪಟ್ಟೆ
ಕೊನೆಗೆ ನೆರವೇರಿದ್ದು
ನಿನ್ನಾಸೆಯಂತೆ
ಆಸೆಯೆ ದುಃಖಕ್ಕೆ ಮೂಲ
ನಿನ್ನಾಸೆಗೆ ತೊರೆದೆ ಅಂತಸ್ತಧಿಕಾರ
ನೋಯಿಸಿ ಬೇಯಿಸಿದೆ
ಸತಿ ಸುತ ಪುರ ಜನರ
ಆಗುತ್ತಿರಲಿಲ್ಲವೇ ನಿನಗೆ
ಜವಾಬ್ದಾರಿಗಳೊಂದಿಗೆ
ಸಾಕ್ಷಾತ್ಕಾರ?
ನಿನ್ನ ಮೊಂಡಾಟಗಳೆಲ್ಲ
ನೀ ಪಡೆದ
ಫಲದ ಮುಂದೆ ಮಸಕು
ಬೆಳಕಿದ್ದಷ್ಟು ಕತ್ತಲೂ ಗಾಢ
ಕತ್ತಲ ದೂಡಲು
ಮತ್ತೆ ಬೇಕು ನಿನ್ನ ತತ್ವ
ದೀಪಕ್