ಶುಕ್ರವಾರ, ಮೇ 14, 2021

ತಕರಾರಿ ಹರಟೆ

ತಕರಾರಿ ಹರಟೆ

ನಿನ್ನೆ ಮಧ್ಯಾಹ್ನ ups ನ ಪ್ಲಾಸ್ಟಿಕ್ ಹೊರ ಕವಚ ಮುರಿದಿದ್ದನ್ನು ನೋಡಿದೆ. ಲಾಕ್ ಡೌನ್ ಕಾರಣ ಆದನ್ನು ಸರಿಮಾಡಲು ಫೆವಿಕ್ವಿಕ್ ದೊರೆಯಲಿಲ್ಲ. ಬೆಳಿಗ್ಗೆ 5.30ಕ್ಕೆ ಎದ್ದವನೆ ಕಾಫಿ ಕುಡಿದು ಅಂಗಡಿಗೆ ಹೊರಟೆ. ಫೆವಿಕ್ವಿಕ್ ಕೇಳಿದರೆ ಪರಿಚಿತ ಅಂಗಡಿಯವನು ಎರಡು ಬೇಕಲ್ಲವೇ ಎಂದು ಕೊಡಹೋದ. ಒಂದೇ ಸಾಕೆಂದು ಹತ್ತು ರೂ ನೀಡಿದ್ದಕ್ಕೆ ತಡಕಾಡಿ ಒಂದು ರೂಪಾಯಿಯ ಐದು ನಾಣ್ಯಗಳನ್ನ ನೀಡಿದರು. ಇನ್ನೂ ಸ್ವಲ್ಪ ದೂರ ನಡೆಯೋಣ ಎನಿಸಿತು. ಮುಂದುವರೆದೆ, ವೃತ್ತದ ಸಮೀಪ ಫರಂಗಿ ಹಣ್ಣನ್ನು 30ರೂ ಕಿಲೋ ಎಂದು ಮಾರುತ್ತಿದ್ದರು, "ತಕ್ಕಡಿ ಇಲ್ಲವೇನಪ್ಪ" ಎಂದು ಕೇಳಿದ್ದಕ್ಕೆ ಆಲ್ಲೇ ತರಕಾರಿ ಮಾರುವವರ ಪಕ್ಕದಲ್ಲಿದ್ದ ಹಣ್ಣಿನಂಗಡಿಯಿಂದ ತಕ್ಕಡಿ ತೆಗೆದು ಗಾಡಿಯಲ್ಲಿರಿಸಿಕೊಂಡು ಹಣ್ಣನ್ನು ತೂಗಿ  ನನಗೆ ಮಾರಿದ. ತರಕಾರಿ ಬೇಕೆಂದು ಹಿಂದಿನ ದಿನ ಬಿಗ್ ಬ್ಯಾಸ್ಕೆಟ್ ನಲ್ಲಿಹಣ್ಣು ತರಕಾರಿಗಳನ್ನು ಆರಿಸಿ ಹಣ ಪಾವತಿಸಲು ಹೋದಾಗ all available slots are booked we will be back soon  ಎಂಬ ಸಂದೇಶ ನೋಡಿ ಕೊರೊನಾ ಆರ್ಭಟ ಎಷ್ಟಿದೆಯಲ್ಲ, ಎಲ್ಲರೂ ಮನೆಯ ಬಾಗಿಲಿಗೆ ತರಕಾರಿ ತರಿಸಿಕೊಳ್ಳುತ್ತಾರೆ ಈಗ, ಅದೂ ಚೌಕಾಸಿ ಇಲ್ಲದೆ ಎಂದುಕೊಂಡು ಸುಮ್ಮನಾಗಿದ್ದೆ.   

     ಕೈಯಲ್ಲೊಂದು ಚೀಲವಿದ್ದಿದ್ದರೆ ಎಲ್ಲ ತರಕಾರಿಯನ್ನು ಕೊಂಡೊಯ್ಯಬಹುದಿತ್ತು ಎಂದು ಅತ್ತಿತ್ತ ನೋಡಿದಾಗ, ತರಕಾರಿ ಅಂಗಡಿಯಾಕೆ ಒಂದು ಈರುಳ್ಳಿ ಚೀಲವನ್ನು ಮಡಿಚಿಡುತ್ತಿದ್ದಳು. 
"ಗಜ್ಜರಿ ಹೇಗೆ?"ಎಂದು ಕೇಳಿದೆ, ನನ್ನತ್ತ ಒಮ್ಮೆ ನೋಡಿ 40ರೂ ಎಂದಳು,ಅರ್ಧ ಕಿಲೋ ಕೊಡಿ ಎಂದೆ. ಹಾಗೆ ಆ ಈರುಳ್ಳಿ ಚೀಲವನ್ನು ಇಸಿದುಕೊಂಡೆ.
 "ಹೀರೆಕಾಯಿ?" 
ಮತ್ತದೇ 40, "ಅರ್ಧ ಕಿಲೋ ಕೊಡಿ" ಎಂದೆ, 
"ಮೂಲಂಗಿ?" 
ಮತ್ತೆ 40 ಎಂದಳು. 
"ಬೀನ್ಸ್ ?"
40ರೂ ಅರ್ಧ ಕಿಲೋ ಎಂದಳು ಖಿಲಾಡಿ, ಬೇಡ ಎಂದ ನಾನು "ನುಗ್ಗೆ ಹೇಗೆ?" ಎಂದು ಕೇಳಿದೆ. 60 ರೂ ಕಿಲೋ ಎಂದವಳಿಗೆ "ಕಾಲು ಕಿಲೋ ಕೊಡಿ" ಎಂದೆ. 
ಹಿಂದೆ ನಾನು ಸಣ್ಣವನಿದ್ದಾಗ ಮನೆ ಮುಂದೆ ಇರುತ್ತಿದ್ದ ನುಗ್ಗೆ ಗಿಡದಲ್ಲಿ ಕಾಯಿಗಳನ್ನ ಕೇಳಿದವರಿಗೆ ಕಿತ್ತುಕೊಂಡು ಹೋಗಿ ಎಂದು ಉಚಿತವಾಗಿ ಕೊಡುತ್ತಿದ್ದದ್ದು ನೆನಪಾಗಿ ಆಕೆಗೆ ಹೇಳಿದೆ, "ಅದಾನ್ಯರು ತಿಂತಿದ್ರು ಮೊದ್ಲು ಬರೀ ಸೊಪ್ಪು ಉಪಯೋಗಿಸ್ತಿದ್ದುದ್ದು " ಎಂದಳಾಕೆ. 
ಸೊಪ್ಪಿನ ಗುಡ್ಡೆಯತ್ತ ಬೆಟ್ಟು ಮಾಡಿ "ಹೇಗೆ" ಎಂದಾದಕ್ಕೆ "ಕೊತ್ತಂಬರಿ ಐದು,ಸಪ್ಸಿಗೆ ಐದು ಪುದಿನ ಎಂಟು ಉಳಿದದ್ದೆಲ್ಲ ಹತ್ತು ರೂಗೆ ಮೂರು ಕಟ್ಟು"
ಒಂದಷ್ಟು ಸೊಪ್ಪು ತೆಗೆದುಕೊಂಡೆ. "ಟೊಮ್ಯಾಟೋ ಹೇಗೆ?" ಅಂದದಕ್ಕೆ "10ರೂ ಕಿಲೋ ಕೊಡಲೇ" ಎಂದಳು. "10 ರೂಗೆ ಎರಡು ಕಿಲೋ ಕೊಡ್ತಾರಲ್ಲ?" ಎಂದದಕ್ಕೆ ತಗೊಳಿ ಎಂದು ಒಂದುಕಾಲು ಕಿಲೋ ತೂಗಿ ಅವಳೇ ಕೊಟ್ಟಿದ್ದ ಚೀಲಕ್ಕೆ ಹಾಕಿದಳು. "ಕೋಸು ಹೇಗೆ?" ಎಂದಾದಕ್ಕೆ "ಎಲೆಕೋಸು 15 ಗೆಡ್ಡೆ 40"ಎಂದವಳಿಗೆ ಎಲೆಕೋಸು ಕೊಡು ಎಂದು ತೆಗೆದುಕೊಂಡೆ. "ನಿಂಬೆಹಣ್ಣು ಬೇಡವೇ?" ಎಂದು ಚೀಲದಿಂದ 5ನಿಂಬೆಹಣ್ಣು ತೆಗೆದು ಇಪ್ಪತ್ತು ರೂ ಎಂದಳು.
"ಹತ್ತು ರೂ ಗೆ ಕೊಡಮ್ಮ ಸಾಕು"ಎಂದಾದಕ್ಕೆ ಎರಡು ನಿಂಬೆ ಹಣ್ಣು ಕೊಟ್ಟಾಗ 
"ಅವಾಗ ಒಂದು ಹೆಚ್ಚ ಕೊಡ್ತಿದ್ದೆ ಇವಾಗ ಇಲ್ಲವಾ?" ಅಂದ ನನಗೆ "ಏನೋ ಜಾಸ್ತಿ ತಗೊಂಡರಿ ಅಂತ ಕೊಡೋಕ್ಬಂದೆ" ಅಂದಳು.
 ಒಟ್ಟು ಎಷ್ಟಾಯಿತು ಎಂದು ನನ್ನಿಂದಲೇ ಲೆಕ್ಕ ಹಾಕಿಸಿ ಹಣ ಇಸಿದುಕೊಂಡಳು.

 ಮನೆಗೆ ತೆರಳಿದೆ. 
ತರಕಾರಿಯನ್ನು ಪರಿಶೀಲಿಸುತ್ತಾ ಮನೆಯಾಕೆ ಇದೆಷ್ಟು, ಇದು, ಎಂದು ನನ್ನ ವಿಚಾರಣೆ ಶುರುವಾಯಿತು. ಓ ಬಿಗ್ ಬ್ಯಾಸ್ಕೆಟ್ ನಲ್ಲೂ ಅಷ್ಟೇ ಇದೆ ಎನ್ನೋ ಉದ್ಗಾರ. 
ತರಕಾರಿ ಫ್ರೆಶ್ ಆಗಿ ಚೆನ್ನಾಗಿದೆ,  ಕೊತ್ತಂಬರಿ ಸೊಪ್ಪು ಸಣ್ಣ ಕಟ್ಟಿದೆ, ಐದು ರೂ ಜಾಸ್ತಿ ಆಯ್ತು, ಟೊಮ್ಯಾಟೋ ಸ್ವಲ್ಪ ಹಳೆಯದಿದ್ದಂತಿದೆ, ನಿಂಬೆಹಣ್ಣು ಕೊಳೆಯೋಕ್ ಶುರುವಾಗಿದೆ ಯಾಕೆ ನೋಡ್ಕೊಂಡ್ ತರಲಿಲ್ವಾ? ಈ ತರಕಾರಿ ಅಂಗಡಿಯವರು ಸ್ವಲ್ಪ ನೋಡೋದಿಲ್ಲ ಅಂತ ಗೊತ್ತಾದ್ರೆ ಹ್ಯಾಮಾರಿಸಿ ಬಿಡ್ತಾರೆ, ನನಗೊಂದುಸಲ ಮಾವಿನ ಹಣ್ಣಲ್ಲಿ ಹೀಗೆ ಮಾಡಿದ್ರು ಎಂದು ಹೇಳತೊಡಗಿದಳು.  "ಅಂತೂ ಬೆಳಿಗ್ಗೆ ಬೆಳಿಗ್ಗೆ ಹೋಗಿ ದಂಡಕ್ಕೆ ದುಡ್ಡಿತ್ತು ಬಂದೆ ಅನ್ಸತ್ತೆ" ಎಂದ ನನಗೆ, "ಅದ್ಯಾಕೆ ಹಾಗ್ ಹೇಳ್ತೀರಾ ಚೆನ್ನಾಗಿದೆ ಎಂದೂ ಹೇಳಿದೆನಲ್ಲ" ಎಂದು ನನ್ನೆದುರು ಕೈಯಲ್ಲಿ ಸೌಟು ಹಿಡಿದು ಟೊಂಕಕ್ಕೆ ಕೈಕೊಟ್ಟು ನಿಂತಾಗ "ನಿನಗೇನು ಹೇಳಲಿಲ್ಲ ನಾನು, ನನಗೆ ಹಾಗನ್ನಿಸಿತು ಅಷ್ಟೇ" ಎಂದು ಬಚಾವಾದೆ. 
ನಿತ್ಯ ಏರುತ್ತಿರುವ ಬೆಲೆಗಳು ಲಾಕ್ ಡೌನ್, ಸಿಗದ ಮಾರುಕಟ್ಟೆ, ಬಿಗ್ ಬಾಸ್ಕೆಟ್ನಂತಹ ಮಾರುಕಟ್ಟೆ ತಂತ್ರಜ್ಞರ ಮುಂದೆ ಒಂದು ಕೊಳೆತ ನಿಂಬೆಹಣ್ಣು ಲೆಕ್ಕವೇ?

 ನಂತರ ನಾನು ತಿಂಡಿ ತಿನ್ನುತ್ತಿದ್ದಾಗ
ಮಧ್ಯಾಹ್ನ ಚಿತ್ರಾನ್ನ ಮಾಡಿಬಿಡುವೆ ಜಾಸ್ತಿ ದಿನ ಇಟ್ಟರೆ ನಿಂಬೆಹಣ್ಣು ಕೊಳೆತು ಹೋಗುತ್ತದೆ ಎಂದು ನಾನು ತರಕಾರಿಯಲ್ಲಿ ತಂದ ನಿಂಬೆಹಣ್ಣಿಗೆಉಪಸಂಹಾರದ ಸಮಾಧಾನಕರ ಮಾತೊಂದು ಉದುರಿತು, (ಆಯುಧ ಪೂಜೆಯಂದು ಇದೆ ನಿಂಬೆಹಣ್ಣಿನ ಮೇಲೆ ಕಾರನ್ನು ಚಲಾಯಿಸುವಾಗ ಏನು ಅನಿಸುವುದಿಲ್ಲವೇನೋ?) 
"ಚಾಕು ತಗೊಂಡು ಕೊಳೆತ ಭಾಗ ಕತ್ತರಿಸಿ ಬಿಸಾಡು, ನೀನು ಅದನ್ನು ಉಪಯೋಗಿಸೋವರೆಗೂ ಅದು ಕೆಡಲ್ಲ" ಎಂದು ನಿಂಬೆ ಹಣ್ಣಿಗೆ ಶಾಸ್ತ್ರಚಿಕಿತ್ಸೆಮಾಡಿ ಬೆಳಗಿನ ತಿಂಡಿಯನ್ನು ಮುಗಿಸಿ, ಚಿಕಿತ್ಸಾಲಯಕ್ಕೆ ಹೊರಟೆ.

ಶುಕ್ರವಾರ, ಮೇ 7, 2021

ಪ್ರೇಮಿಸುವುದೆಂದರೆ 
ಸಾವಿನ ನಂತರವೂ 
ಬದುಕುವುದು!

ಬ್ಲಾಗ್ ಆರ್ಕೈವ್

Its blog I have created to enter my day to day search & feel like sharing the same with like minded people. I solicit a comment from all my friends.