ಅಳು ಸಮುದ್ರವಾಗುವ
ಮುನ್ನ
ಅತ್ತು ಬಿಡಬೇಕೊಮ್ಮೆ
ಹೆಪ್ಪುಗಟ್ಟಿಹ ನೋವು ಕಲ್ಲಾಗುವ ಮುನ್ನ
ಹಿಂಗಿ ಹೆಕ್ಕಳದಂತೆದೆಗ಼ಂಟುವ ಮುನ್ನ
ಚಣಚಣವೂ ಭೂತವಾಗಿ
ಹೃದಯ ಕೊಲ್ಲುವಮುನ್ನ
ಪದಪದವೂ ಈಟಿಯಾಗಿ ಜೀವವಿರಿಯುವ ಮುನ್ನ
ಗಳಿಗೆಗಳು ವರುಷವಾಗಿ ಕಾರ್ಮೋಡವಾಗುವ ಮುನ್ನ
ಕಣ್ಣೋಟ ಕೆಂಡವಾಗಿ ಜೀವ ಸುಡುವ ಮುನ್ನ
ಹಿತರಾತ್ರಿಗಳು
ವಿರಹಕ್ಕೆದೂಡುವಮುನ್ನ
ಚುಂಬನಗಳು ವಿಷವಾಗುವ ಮುನ್ನ
ಅಪ್ಪುಗೆಗಳು ಧೃತರಾಷ್ಟ್ರ ಆಲಿಂಗನವಾಗುವಮುನ್ನ
ಅತ್ತುಬಿಡಬೇಕೊಮ್ಮೆ...
-ಕಂದನ ನೋಡಿದೊಡೆ
ನಕ್ಕು ಬಿಡಬೇಕೊಮ್ಮೆ
ಆಟದಲಿ ಘಾಸಿಯಾದಾಗ
ಗೆಳತಿ ಕಾಯ್ದು ಸುಣ್ಣವಾದಾಗ
ಮಗ್ಗಿಯ ಲೆಕ್ಕ ತಪ್ಪಿದಾಗ
ಅಮ್ಮನ ಮುದ್ದು ನೆನಪಾದಾಗ
ಜೀವ ಘೋರತೆಯು ಕವಿದಾಗ
ನಡು ರಾತ್ರಿಯೊಳು ಹಾದಿ ತಪ್ಪಿದಾಗ
ಹೃದಯದ ಗೆಳೆಯರು ಭೆಟ್ಟಿಯಾದಾಗ
ಹಣಕೊಡದೆ ಪೀಡಿಸಿದಾಗ
ಕೆಲಸನಡು ನಿಂತಾಗ
ತೂತು ಜೇಬಾದಾಗ
ದುಃಖದಿ ಎದೆ ತುಂಬಿ ಬಂದಾಗ
ಅತ್ತು ,,,
ನಕ್ಕಿ ಬಿಡಬೇಕೊಮ್ಮೆ
--ದೀಪಕ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ