ಹೆಸರಿಡದ ನನ್ನ ಕಂದ
ಹವಾನಿಯಂತ್ರಿತ ಆಸ್ಪತ್ರೆಯಲ್ಲಿ
ಬೆಚ್ಚಗೆ ಮಲಗಿದೆ
ನೋಡಿ
ನಾಲ್ಕು ದಶಕಗಳಲ್ಲಿ ನಾನರಿಯಾದ
ಕೊಳವೆಗಳನ್ನು
ಮೂಗು ಬಾಯಿ ಹೊಟ್ಟೆಗೆ
ತೂರಿಸಿಕೊಂಡು
ಆಟವಾಡುತ್ತಿದೆ
ನೋಡಿ
ತನ್ನೆದೆಗೂಡಿನ
ಚಿತ್ತಾರಗಳೊಂದಿಗೆ
ಮೆರೆಯುತ್ತಿದೆ
ನೋಡಿ
ಬೆನ್ನ ಶೂಲಕೆ
ಬೇನೆ ತೋರದೆ
ಬೋರಲು ಮಲಗಿಹಳು
ನೋಡಿ
ಮಾತನ್ನೇ ಕಲಿಯದೆ
ತಾಳ್ಮೆ ಪಾಠವನೆಲ್ಲರಿಗೂ
ಕಳಿಸುತಿಹಳು
ನೋಡಿ
ಯಾವ ಸೇನಾ ಶಿಬಿರವ
ಸೇರದೆ
ಹೊರಡುತಿಹ
ಈ ಕಿನ್ನರಿಯ
ನೋಡಿ
ಮಗುವೇ
ನಿನ್ನ ಬದುಕುವ
ಪರಮೇಚ್ಛೆಯ ಮುಂದೆ
ನಮದೇನು ಇಲ್ಲ
ಎಲ್ಲ ನೀ ಬದುಕಿದಂತೆ
ನೀ ಮಾಡಿದಂತೆ
ಪ್ರಯತ್ನಗಳ
ಸಾಕಾರಗೊಳಿಸು
ಬದುಕು ಬಾ
ನಗುತ ಬಾ
ನಿನ್ನ ಗೆಲುವೇ
ಎಲ್ಲರ ಗೆಲುವು
ದೀಪಕ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ