ಶನಿವಾರ, ನವೆಂಬರ್ 24, 2018

ಮಗು ನಗು

ಇನ್ನೂ  ಯೋಚಿಸುತ್ತಿರುವೆ
ನಿನ್ನ ನಗುವಿನಲ್ಲಿ ನಾ ಮರೆಯದ್ದೇನಿದೆ ?
***

ಶನಿವಾರ, ನವೆಂಬರ್ 17, 2018

ಹಾವಿನ ಸಂರಕ್ಷಣೆ ಹಾಗೂ ತಿಳುವಳಿಕೆ ಮಾನವ ಉರಗ ಸಂಘರ್ಷಣೆಯನ್ನು ಕಡಿಮೆ ಮಾಡುತ್ತದೆ

ಹಾವುಗಳೊಂದಿಗಿನ ವ್ಯವಹಾರ ಅಪಾಯಕಾರಿಯೇ, ಹೌದೆಂದಾದರೆ ಅಪಾಯವನ್ನು ಹೇಗೆ ಕಡಿಮೆ ಮಾಡಬಹುರ್ಪ ಸಂಘರ್ಷವನ್ನು ಹೇಗೆ  ತಗ್ಗಿಸಬಹುದು ?

ಮೇಲಿನ ಪ್ರಶ್ನೆಯನ್ನು ನನ್ನ ಅನುಭವದ ಮೇಲೆ ಉತ್ತರಿಸಲು ಪ್ರಯತ್ನಿಸಿದ್ದೇನೆ . ಹಾವು ಮಾನವನ ಪರಿಸರದಲ್ಲಿದೆ ಎಂದಾಕ್ಷಣ ಆ ಎಲ್ಲಾ ಹಾವುಗಳನ್ನು  ಹಿಡಿದು ಕಾಡು, ಊರಾಚೆಯ ಪ್ರದೇಶದಲ್ಲಿ ಬಿಡುವುದು ಮಾನವ ಹಾವು ಸಂಘರ್ಷಕ್ಕೆ ಪ್ರತಿ ಬಾರಿಯೂ ಉತ್ತರವಲ್ಲ. ಪ್ರತಿಬಾರಿ ಮಾನವ ಕಾಡು ಪ್ರಾಣಿಗಳ ಸಂಘರ್ಷದಲ್ಲಿ ಪರಿಣಿತರ ಮಧ್ಯಪ್ರವೇಶ ಅನಿವಾರ್ಯ . ಮುಖ್ಯವಾದ ವಿಷಯ ಏನೆಂದರೆ ಪರಿಣಿತ ವ್ಯಕ್ತಿ ಯು ಸಂಶೋಧಿತ, ಪರಿಶೀಲಿತ, ಪ್ರಮಾಣಿತ ವಿಧಾನವನ್ನು  ಹಾವುಗಳ ಸಂರಕ್ಷಣೆ ಹಾಗೂ ಬಿಡುಗಡೆಯ ವೇಳೆಯಲ್ಲಿ ಅನುಸರಿಸಬೇಕು. ಜನರಲ್ಲಿ ಹಾವುಗಳ ಬಗ್ಗೆ ತಿಳುವಳಿಕೆ ಇದ್ದರೆ ಸಂರಕ್ಷಣೆಕಾರ್ಯ ಬಹಳಷ್ಟು ಸಮಯದಲ್ಲಿ ಬೇಕಾಗುವುದಿಲ್ಲ. ನನ್ನ ದಿನಚರಿಯ ಅನುಭವದಲ್ಲಿ ಯಾವಾಗ ಸಂರಕ್ಷಣೆಕಾರ್ಯ ಬೇಕಾಗಬಹುದು ಹಾಗೂ ಯಾವಾಗ ಸೂಕ್ಷ್ಮವಾಗಿ ಸಂವೇದಿಸುವ ಅವಶ್ಯಕತೆ  ಇದೆ ಎಂಬುದನ್ನು ಹೇಳುವೆ.

ಬುಧವಾರ, ನವೆಂಬರ್ 14, 2018

ನೀನಿಲ್ಲ

ನಿತ್ಯ ಇದೇ ಉಗಿಬಂಡಿಯಲ್ಲಿ ಕಳೆದ ಹತ್ತು ವರ್ಷಗಳಿಂದ ಓಡಾಡುತ್ತಿರುವುದು. ಹೆಚ್ಚು ಬದಲಾವಣೆ ಕಾಣದ ಬದುಕು. ನಾಕು ರೂಪಾಯಿ ಇದ್ದ ಚಾರ್ಜ್ ಹತ್ತು ರೂ ಆಗಿದೆ. ಮಾಸಿಕ ಚಂದ ಕೂಡ ಕಡಿಮೆ ಮೊತ್ತವೇ. ಈಗ ತಿಂಗಳಿಗೆ ೯೦ ರೂ ಮೊದಲು ೬೦ರೂಪಾಯಿ ಇತ್ತು. ಬಂಡಿಯಲ್ಲಿ ಪ್ರಯಾಣಿಸಲು ಕೊಡುವ ಮೊತ್ತ ಅತ್ಯಲ್ಪ. ಬಸ್ಸಿನಲ್ಲಿ ಪ್ರಯಾಣ ಎಂದರೆ ದಿನಕ್ಕೆ ೬೦ರೂಪಾಯಿ ಅಥವಾ ತಿಂಗಳಿಗೆ ೧೨೦೦ರೂಪಾಯಿಗಳು.  ಎಡರುಬದರಾಗಿ ಕೂತು ಪ್ರಯಾಣಿಸುವ ಬಂಡಿಯೆ ಬಲು ಮೋಜಿನದು.ನನ್ನ ಎದುರು ನೀನು ನಿನ್ನ ಎದುರು ನಾನು ಕುಳಿತು ಅದೆಷ್ಟು ಸಂವತ್ಸರಗಳು ಕಳೆದಿರುವೆವು.ಕೂದಲುಕಪ್ಪಿದ್ದಾಗಿನ ವಯಸ್ಸಿನಿಂದ ಕಪ್ಪು ಹಚ್ಚುವ ವೂಯಸ್ಸಿನವರೆಗೂ ಬಂಡಿಯಲ್ಲಿ ಅದೇ ಮಾರ್ಗವಾಗಿ ಪಯಣಿಸುತ್ತಿದ್ದೇವೆ.  ಎದುರಿನ ಖಾಲಿ ಸೀಟಿನಲ್ಲಿ ನೀನಿರುವೆ ಎಂದು ಭ್ರಮಿಸಿ ಪ್ರಯಾಣಿಸುವುದು ಏನೋ ಜೊತೆಗಿರುವೆ ಎನ್ನುವ ಭಾವ ಮೂಡಿಸುತ್ತದೆ.

ಶುಕ್ರವಾರ, ನವೆಂಬರ್ 9, 2018

ಜೇಡಗಳ ಬಗ್ಗೆ ಕಾರ್ಯಾಗಾರ

ಅಕ್ಟೋಬರ್ ತಿಂಗಳ ಮೊದಲನೆಯ ವಾರ ನನಗೆ what's app
ನಲ್ಲಿ ಜೇಡಗಳ ಕಾರ್ಯಾಗಾರವಿದೆ,ಆಸಕ್ತ ೩೦ಜನರಿಗೆ ಪ್ರವೇಶ ಎಂಬಾ ಸಂದೇಶ ದೊರಕಿತು. ಕಾರ್ಯಾಗಾರದ ನಿರೂಪಕರ ತಂಡದಲ್ಲಿ ನನ್ನ ಚಾರಣಮಿತ್ರ ಹೆಸರು ನೋಡುತ್ತಲೇ ಅವರಿಗೆ ಸಂದೇಶಿಸಿ  ಮನೆಗೂ ಬರುವಂತೆ ಆಹ್ವಾನಿಸಿದೆ ಹಾಗೂ ಕಾರ್ಯಾಗಾರ ಕ್ಕೆ  ನಾನೂ ಕೂಡ ಬರುವೆ ಎಂದು ತಿಳಿಸಿದೆ. ಜೇಡ ಕಂಡೊಡನೆ  ಕೋಲು ತೆಗೆದು ಕೊಳ್ಳುವ ನಾನು ಇವರನ್ನು ಭೇಟಿಯಾದ ಮೇಲೆ ಕಡಿಮೆ ಮಾಡಿದ್ದೆ. ಈ ಬಾರಿ ಕಾರ್ಯಾಗಾರದಲ್ಲಿ ತಿಳಾಯಲು ಏನೇನಿದೆಯೋ ಎಂದು ಹೊರಟೆ. Macro ಛಾಯಾಚಿತ್ರಣ ಮಾಡಲು ಅಗತ್ಯ ಪರಿಕರಗಳಿರದೆ ಇರುವುದನ್ನೇ ಹೊತ್ತೋಯ್ದೆ.

ಕಾರ್ಯಾಗಾರದ ಸ್ಥಳ ಇಂದ್ರಪ್ರಸ್ಥ ಮೈಸೂರಿನ ಬಳಿಯ ಕಳಲವಾಡಿ ಗ್ರಾಮದ ಬಳಿ ಇರುವುದು. ಸಹಜ ಕೃಷಿಯನ್ನು ಮಾಡುತ್ತಿರುವ ಕುಟುಂಬ. ಕುಟುಂಬದ ಹಿರಿಯರು ಇಂಜಿನಿಯರ್, ಅವರ ಪುತ್ರ ವೈದ್ಯರು,ಹಾಗೂ ಕಾರ್ಯಾಗಾರದ ಪ್ರಮುಖ ರೂವಾರಿಹಾಗೂ ಅವರ ಸಹಪಾಠಿ ಸಾಲಿಗ ಎಂಬ ತಂಡ ರಚಿಸಿಕೊಂಡು ಜೇಡಗಳ ವ್ಯವಸ್ಥಿತ ಅಧ್ಯಯನ ಕೈಗೊಂಡಿದ್ದಾರೆ. ವಿವಿಧ ಕಾರಣಗಳಿಗೆ ಬೆಂಗಳೂರು ಸೇರಿರುವ ಇನ್ನಿಬ್ಬರು ಜೇಡಾಸಕ್ತರು (ವಿಜ್ಞಾನಿಗಳು ಎಂದರೆ ಉತ್ಪ್ರೇಕ್ಷೆಯಾಗದು) ಕಾರ್ಯಾಗಾರ ನಡೆಸಿ ಕೊಡಲು ಬಂದಿದ್ದರು. ಹೋದೊಡನೆ ಸುಮಾರು೧೪ಜನ ಆಗಲೇ ಬಂದು ಎಲೆ ಗಿಡ ಹೂಕುಂದಗಳ ಚಿತ್ರಣದಲ್ಲಿ ತೊಡಗಿದ್ದರು. ಮಧ್ಯಾಹ್ನ ಸೀಮಾರು ೨.೩೦ಕ್ಕೆ ಎಲ್ಲರೂ ಒಟ್ಟಾಗಿ ಸೇರಿ ಪರಸ್ಪರ ಪರಿಚಯ ಮಾಡಿಕೊಂಡೆವು. ನಂತರ ಜೇಡಗಳ ರಚನೆಯ ಬಗ್ಗೆ ತಿಳಿಸುತ್ತಾ  ಜೇಡಗಳು ಕೀಟಗಾಳಿಗಿಂತ ಹೇಗೆ ಭಿನ್ನ ಎಂದು ಹೇಳಿದರು. ಕೀಟಗಳಿಗೆ ೬ಕಾಲುಗಳು , ಜೇಡಗಳಿಗೆ ೮ಕಾಲುಗಳು . ಕೀಟಗಳಲ್ಲಿ ಕತ್ತು ಎದೆ ಹಾಗೂ ಹೊಟ್ಟೆಯ ಭಾಗ ಎಂದು ವಿಭಜಿಸಲ್ಪಟ್ಟಿದೆ, ಜೇಡಗಳಿಗೆ ಕತ್ತು ಹಾಗು ಎದೆಯ ಭಾಗ  ಕೂಡಿದೆ. ಜೇಡಗಳಿಗೆ ನಾಲ್ಕು ಜೊತೆ ಕಣ್ಣುಗಳು ,ಕೀಟಗಳಿಗೆ ಒಂದು ಜೊತೆ ಕಣ್ಣುಗಳು   ಹೀಗೆ ಸಾಗಿತು ಜೇಡಗಳ ವಿವರಣೆ. ನಾನು ನಿದ್ರಾವಶನಾಗುವುದನ್ನು ತಪ್ಪಿಸಿಕೊಳ್ಳಲು ಆಗಾಗ ಜೇಡದಲ್ಲಿ ರುವ ರಕ್ತ (ಹೀಮೋಸೀಲ್)ಜೀರ್ಣಾಂಗ ಶ್ವಾಸಕೋಶ ದ ವಿವರಣೆ, ಆಹಾರ ಕ್ರಮ ಹಾಗೂ ವಿಸರ್ಜನಾಂಗಗಳ ಬಗ್ಗೆ ಪ್ರಶ್ನಿಸಿದೆ. ಎಲ್ಲಾ ಪ್ರಕ್ರಿಯೆಗಳು ಜೇಡದಲ್ಲಿದ್ದು ಅದರ ಬಗ್ಗೆ ಇನ್ನೂ ವಿಸ್ತ್ರತ ಅಧ್ಯಯನ ನಡೆಯಬೇಕು  ಎಂದು ಸಂಪನ್ಮೂಲವ್ಯಕ್ತಿ ತಿಳಿಸಿದರು.
ನಾನು ಎಲ್ಲಾ ಜೇಡಗಳು ದುಂಡಗೆ ಬಲೆ ಹೆಣೆಯುತ್ತವೆ ಎಂಬ ನಂಬಿಕೆ ಇತ್ತು.ಕಾರ್ಯಾಗಾರದಲ್ಲಿ orb weaver(ಹಳೆ ಆಂಗ್ಲದಲ್ಲಿ orbಎಂದರೆ ದುಂಡು) ಎಂಬ ಕುಟುಂಬದ ಜೇಡಗಳು ಮಾತ್ರ ದುಂಡಗೆ ಬಲೆ ಹೆಣೆಯುತ್ತವೆ ಹಾರು ಜೇಡಗಳು ತಾವು ಹಾರಿದ ಸ್ಥಳದ ಗುರುತಿಗೆ ಒಂದೆಳೆ ನೂಲನ್ನು ಬಿಟ್ಟುಕೊಂಡಿರುತ್ತವೆ . ಎಲ್ಲಾ ಜೇಡಗಳು ಬಲೆ ಹೆಣೆಯಲೇ ಬೇಕೆಂದಿಲ್ಲ  ಎಂದು ತಿಳಿಸಿದರು.ಜೇಡಗಳು ಬುದ್ಧಿವಂತ ಜೀವಿಗಳು ಅದರಲ್ಲಿ ಹಾರುವ ಜೇಡ ಬಲು ಬುದ್ಧಿವಂತ, ಜೇಡಗಳ ಶರ್ಲಾಕ್ ಹೋಮ್ಸ್ ಎಂದು ಕರೆಯಬಹುದು ಎಂದು ತಿಳಿಸಿದರು, ಹೋ ಹಾಗಾದರೆ ಲ಼಼ಂಡನ್ನಿನ ಬೇಕರ್ ಸ್ಟ್ರೀಟ್ ನಲ್ಲಿರುವ ಜೇಡ ಇದು ಎಂದು ಲಘು ವಿನೋದಜೊತೆಗೆ ಚಹಾಗೆ ತೆರಳಿದೆವು.

ಮೈಸೂರಿನ ಜಿಲ್ಲಾಧಿಕಾರಿಯವರು ಬಿಡುವು ಮಾಡಿಕೊಂಡು ಕಾರ್ಯಾಗಾರದಲ್ಲಿ ಕೆಲವು ಸಮಯ ಪಾಲ್ಗೊಂಡಿದ್ದರು. ನಂತರ ಸಾಲಿಗ ತಂಡದ ಲಾಂಛನ ಬಿಡುಗಡೆ ಗೊಳಿಸಿ ಶುಭಕೋರಿ ನಿರ್ಗಮಿಸಿದರು.
ಅರಕ್ನಿಡೇ ಸಾಲ್ಟಿಡೇ ಎಂದು ಎರಡು ತಂಡಗಳಾಗಿ ಇಂದ್ರಪ್ರಸ್ಥ ದಲ್ಲಿ ಜೇಡ ಎಂಬ ನಿಧಿಯ ಬೇಟೆಗೆ ಹೊರಟೆವು. ಅರಕ್ನಿಡೆ ಎಂದರೆ ಗ್ರೀಕ್ ಭಾಷೆಯಲ್ಲಿ ಜೇಡ ಎಂದು, ಸಾಲ್ಟಿಡೇ ಎ಼ದರೆ ಹಳೆ ಲ್ಯಾಟಿನ್ ಭಾಷೆಯಲ್ಲಿ ನೃತ್ಯ ಎಂದು. ಇದು ಹಾರುವ ಜೇಡಗಳ ಕುಟು಼ಂಬಕ್ಕಿಟ್ಟಿರುವ ಹೆಸರು. ನಾನಿದ್ದ ಗುಂಪಿನಲ್ಲಿ ಇಬ್ಬರ ಬಳಿಮಾತ್ರ macro photography ಗೆ ಬೇಕಾದ ಪರಿಕರಗಳಿದ್ದವು. ಉಳಿದವರ ಕೈಯಲ್ಲಿ ಟಾರ್ಚ್, ಭೂತಗಾಜು, ಸಿಗುವ species ಗಳನ್ನು ಒಬ್ಬರು ಬರೆದು ಕೊಳ್ಳುತ್ತಿದ್ದರು. ಮೊದಲು ನಾವು ನೋಡಿದ ಜೇಡ  ಸಂಘ ಜೇಡ(social Spider). ಗುಂಪಾಗಿ ವಾಸಿಸುವ ಈ ಜೇಡಗಳು ರಾತ್ರಿವೇಳೆ ಬಲೆ ಹೆಣೆಯುತ್ತವೆ. ಹಲವಾರು ವರ್ಷಗ್ಳಿಂದ ಇದ್ದ ಅದು ನೆಲದಿಂದ ತರಸಿ ವರೆಗೂ  ಅಲ್ಲಲ್ಲಿ ಹಬ್ಬಿಕೊಂಡಿತ್ತು.
ನಂತರ ಕಂಡಿದ್ದು ಕಿಡ್ನಿ ಜೇಡ. ಎಲೆ ಮರೆಯಿಂದ ಈಚೆ ಬಂದ ಅದು ಬೇಟೆಯಲ್ಲಿ ತಲ್ಲೀನವಾಗಿತ್ತು. ಅಷ್ಟರಲ್ಲಿ ಮತ್ತೊಂದು ದಿಕ್ಕಿನಿಂದ ಕನ್ನಡಿ ಜೇಡ ಎಂಬ ಉದ್ಗಾರ.  ಪಾರದರ್ಶಕವಾಗಿ ತನ್ನ ಉದರದಲ್ಲಿರುವ ಬೇಟೆಯ ಕೆಂಪು ಬಣ್ಣವನ್ನು ಸೂಸುತ್ತಿತ್ತು. ಹೀಗೆ ಸಾಗಿತು ನಮ್ಮ ಜೇಡರಬಲೆ ಪಯಣ. ಸಮಯ 8.30ರ ಆಸುಪಾಸಿರಬೇಕು ಎರಡೂ ತಂಡದವರು ಊಟಮಾಡುವುದಕ್ಕಾಗಿ ಮೂಲ ಸ್ಥಳಕ್ಕೆ ಬಂದು ಸೇರಿದೆವು.ಮುದ್ದೆ ಹುರಳಿಸಾರು ಅನ್ನ ಗೊಜ್ಜು ಸಾಂಬಾರು ಮಜ್ಜಿಗೆ  ಪಾಯಸ ತಿನ್ನುವಾಗಿನಮಾತು ಪೂರ ಜೇಡಗಳದ್ದು. ಇನ್ನೊಂದು ತಂಡದವರು ಉಗ್ರಾಣದ ಬಳಿ ಆಕ್ರಮಣ ಸ್ವಭಾವದ ಪೋರ್ಶ್ ಜೇಡಗಳನ್ನು ಕಂಡೆವು ದು ತಿಳಿಸಿದರು. ಭೋಜನಾನಂತರ ತಂಡಗಳ ದಿಕ್ಕು ಬದಲಾದವು. ನಾವು ಹೊರಡುತ್ತಿದ್ದಂತೆಯೇ ಕೊಟ್ಟಿಗೆಯ ಬಳಿ ಸಹಿಜೇಡಗಳು ಕಂಡವು ಹಾಗೂ ಅಲ್ಲಿ ತು಼ಬಾ ಸೊಳ್ಳೆಗಳು ಕೂಡಾ ಇದ್ದವು.ಗಿಡಗಳಿಗೆ ಮುತ್ತುವ ಕೀಟಗಳ ಸಂಖ್ಯೆಯನ್ನು ಜೇಡಗಳು ಗಣನೀಯವಾಗಿ ನಿಯಂತ್ರಿಸುತ್ತವೆ,ಆದುದರಿಂದ ವಿಷಕಾರಿ ಕೀಟನಾಷಕಗಳು ಬೇಕಾಗುವುದೇ ಇಲ್ಲ! ಅಬ್ಬಾ ಎಂಥಾ ಜೈವಿಕ ನಿಯಂತ್ರಣ ಈ ಪ್ರಕೃತಿಯಲ್ಲಿ ! ಅರಿತು ತಾಳ್ಮೆಯಿಂದ ನಡೆಯಬೇಕು ನಾವು,,, ಹೀಗೆ ಯೋಚಿಸುವಾಗ ಹಾವು ಹಾವು ಎಂದು ಕ್ಯಾಮರಾವನ್ನು ಹಾವಿನೆಡೆಗೆ ತಿರುಗಿಸಿದರು. ಬಾಳೆಮರದ ಸಂದಿಯಲ್ಲಿ ನಿರುಪದ್ರವಿಯಾಗಿ ಸಣ್ಣ ಹಾವಿನ ಮರಿಇತ್ತು. ಹಾವಿದ್ದ ಮೇಲೆ ಆದರ ಆಹಾರವು ಅಲ್ಲೇ ಇರಬೇಕಲ್ಲವೆ. ಸ್ವಲ್ಪ ಆಚೀಚೆ ನೋಡಿದಾಗ ಭಾರತೀಯ ಸಾಮಾನ್ಯ ಮರಗಪ್ಪೆ ಕಂಡಿತು. ನಾನು ಮೊದಲ ಬಾರಿ ಮರಗಪ್ಪೆಯನ್ನು ನೋಡಿದ್ದು ಹೀಗೆ.ಸಾಮಾನ್ಯವಾಗಿ ನಾನು ನೋಡಿರುವ ಕಪ್ಪೆಯಗಿಂತ ಸುಮಾರು ಮೂರು ಪಟ್ಟು ಚಿಕ್ಕದಾಗಿತ್ತು. ಎಲೆಯಮೇಲೆ ಬೆಪ್ಪಿನಂತೆ ಕುಳಿತಿತ್ತು. ಅದನ್ನು   ಹಿಂದೆ ಬಿಟ್ಟು ಮುಂದುವರೆದೆವು. ಮೊದಲ ಸುತ್ತಿನಲ್ಲಿ ನೋಡಿದ್ದ 32ಜೇಡಗಳ ಸಂಖ್ಯೆ ಯಾಕೋ ಹೆಚ್ಚಾಗಿ ವೃದ್ಧಿಸಲೇ ಇಲ್ಲ. ಉಗ್ರಾಣಕ್ಕೆ ತೆರಳಿ, ಪೋರ್ಶ್ ಜೇಡಗಳ ಹುಡುಕುವ ನಮಗೆ ಮೊದಲು ಚೇಳು ಎದುರಾಯಿತು, ನಂತರ ಪೋರ್ಶ್ ಜೇಡಗಳನ್ನು ಕಂಡೆವು. ಉಗ್ರಾಣದಿಂದ ಹೊರ ಬರುತ್ತಲೇ ನೆಲದಮೇಲೆ ತೋಳ,ಜೇಡಗಳು ಕಂಡವು. 

ಸೋಮವಾರ, ನವೆಂಬರ್ 5, 2018

ಸತ್ಯಂ ಶಿವಂ ಸುಂದರಂ

ಸುಳ್ಳಾದರು ಸರಿ
ಪ್ರೀತಿಸಿಬಿಡೆ,
ಸತ್ಯಸಂಧರ ಈ ಲೋಕದಲ್ಲಿ
ಹೃದಯ ಮಿಡಿವುದೇ ಸುಳ್ಳಿಗಾಗಿ
ಕ್ಷಣಿಕ ಸುಖಕಾಗಿ

ಸುಳ್ಳು ಸುಂದರ ನೋಡು
ಸತ್ಯವಿರುವುದೇ
ಮಸಣಕೆ ದೂಡಲು ಹುಡುಗಿ
ಹೃದಯ ಮುರಿದು ನಿದ್ರೆ ಹರಿದು
ಸಟೆಯ ಸಾಲುಗಳ ಮೆಲುಕಿ
"ಅಯ್ಯೋ ಅದು ಸುಳ್ಳೇ" ಎಂದಲುಬಲಷ್ಟೇ

ಆದರೂ
ಸತ್ಯಂ ಶಿವಂ ಸುಂದರಂ
ಆದರೂ
ಸತ್ಯಂ ಶಿವಂ ಸುಂದರಂ
ಎಲ್ಲಾ ಇರುವ ಸುಳ್ಳಿಗೆ ಆತ್ಮಸಾಕ್ಷಿಯೊಂದಿಲ್ಲ

-ದೀಪಕ್

ಬ್ಲಾಗ್ ಆರ್ಕೈವ್

Its blog I have created to enter my day to day search & feel like sharing the same with like minded people. I solicit a comment from all my friends.