ಹಕ್ಕಿಗಳ ಸದ್ದಿಗೆ
ಸಡ್ಡು ಹೊಡೆದು
ಕಂಬಳಿಯ
ಮುಖದಮೇಲೆಳೆದು
ಕತ್ತಲ ಮಾಡಿ ಮಲಗಿದಾಗ
ಏನೋ ಸಾಧಿಸಿದ ಸುಖ
ಎದ್ದು ಸಾಧಿಸಲು ರಾಶಿ ಇರುವಾಗ!
ಎದ್ದಾಗ ಸಾಧಿಸಲು ತಲೆ ಉಪಯೋಗಿಸಬೇಕು
ಕಷ್ಟಬೀಳಬೇಕು
ಯಾಕವೆಲ್ಲ ಉಸಬಾರಿ ?
ನೆತ್ತಿ ಮೇಲೇರಿದಾಗ
ತಡವೆಂದು ತಡಬಡಾಯಿಸಿ
ಗಬಗಬ ತಿನ್ನುತ್ತಾ
ತೆಗಿದಾಗ
ರಾತ್ರಿ ತಿಂದ ಪನ್ನೀರ ವಾಸನೆ
ಹೊಟ್ಟೆಯಲ್ಲಿ ಝುಳು ಝುಳು!
ಕೆಲಸಕ್ಕೆ ಬಂದೊಡನೆ ಗೋಣಗಾಟವಿಲ್ಲದೆ
ಕಾಯ್ದ ಕೆಲಸಗಳನ್ನು ಮುಗಿಸಿ
ರಾತ್ರಿಯ ಬಣ್ಣಕೆ ತಯಾರಿ
ಮತ್ತೆ ಆಕಡೆ ಓಣಿಯತ್ತ ದೌಡು
ಎರಡು ಚಣ
ಅತ್ತು ನಕ್ಕು
ಜೋಗುಳ ಹಾಡಿ
ಹಿಂತಿರುಗುವ ಹೊತ್ತಿಗೆ
ಎಲ್ಲ ನೀರವ, ಮೌನ
ಮನದಲಿ ಹೆಪ್ಪುಗಟ್ಟಿದ ದಿನವನು
ರಾತ್ರಿ ಚಮಚೆಯ ಹಿಡಿದು
ಐಸ್ ಕ್ರೀಮ್ ನಂತೆ ಮೆಲ್ಲುತ್ತಾ
ಮೆತ್ತ ಅಪ್ಪುಗೆಯಲ್ಲಿ
ವಕ್ರವಾಗಿ ತಲೆಯನ್ನು ತೂರಿಸಿ
ಮತ್ತಷ್ಟು ಈಡೇರದ ಕನಸುಗಳ ಕಾಣುವ ದುಸ್ಸಾಹಾಸ...
ದೀಪಕ್