ಪತ್ನಿ ಬೆಳಿಗ್ಗೆ ಅಡುಗೆ ಕೆಲಸ ಮುಗಿಸುತ್ತಾಳೆ ಅಮ್ಮ ಉಳಿದ ಅಡುಗೆ ಮಾಡುತ್ತಾರೆ, ಒಗೆಯುವ ಯಂತ್ರದ ಬಟ್ಟೆಗಳನ್ನು ಒಣಗಲು ಹಾಕುತ್ತಾರೆ. ಸಾಂದರ್ಭಿಕ ಪಾತ್ರೆಗಳನ್ನು ತೊಳೆದು ಕೊಳ್ಳುತ್ತಾರೆ.
ಅದಕ್ಕೆ ಪರಿಹಾರ ಹುಡುಕುತ್ತಿರುವ ನಾವೆಲ್ಲರೂ ಕಂಡವರಿಗೆಲ್ಲ ಮನೆಕೆಲಸಕ್ಕೆ ಯಾರಾದರೂ ಬೇಕಿತ್ತು ಇದ್ದರೆ ಹೇಳಿ ಎಂದು ಕೇಳುವುದು ಮಾಮೂಲಾಗಿದೆ. ಮನೆ ಸ್ವಚ್ಚವಾಗಬೇಕಲ್ಲ.
ಯಾರೂ ಸಿಗದಿದ್ದಾಗ, ಮತ್ತೇನು ಮಾಡುವುದು ಪತ್ನಿಯ ಜೊತೆಗೆ ಸೇರಿ ನಾನೂ ನೆಲ ಒರೆಸುವ ಕೆಲಸ ಮಾಡಲು ಶುರುವಿಟ್ಟುಕೊಂಡೆ. ಆಕೆ ಒಂದು ಕಡೆಯಿಂದ ಕಸ ಗುಡಿಸುತ್ತಾ ಹೋದರೆ ಇನ್ನೊಂದು ಕಡೆಯಿಂದ ನಾನು ಕೋಲು ಹಿಡಿದು ನೆಲ ಒರೆಸುವುದು. ಇದ್ಯಾವುದೋ ನೆಲ ಒರೆಸುವ ಬಕೆಟ್,ಅದಕ್ಕೊಂದು ಕೋಲು. ಕೋಲಿಗೆ ದಾರದ ದೊಡ್ಡ ಕುಚ್ಚು. ಬಕೆಟ್ ನೀರಿನಲ್ಲಿ ಅದ್ದಿ ಒತ್ತಬೇಕು ಅದು ನೀರನ್ನು ಹೀರಿಕೊಳ್ಳುತ್ತದೆ, ಪಕ್ಕದಲ್ಲೇ ಒಂದು ಬಟ್ಟಲಿನಾಕರದ ಸ್ಥಳ, ಅಲ್ಲಿ ಒರೆಸುವ ಕೋಲನ್ನಿಟ್ಟು ಒತ್ತಿದರೆ ದಾರದ ಕುಚ್ಚಿರುವ ಭಾಗದಲ್ಲಿರುವ ಬೇರಿಂಗ್ ಸಹಾಯದಿಂದ ಆ ಭಾಗ ತಿರುಗಿ ನೀರು ಹೊರ ಹೋಗುತ್ತದೆ. ಅಂತೂ ಬಗ್ಗಿ ಬಟ್ಟೆಯನ್ನು ಅದ್ದಿ ಹಿಂಡಿ ನೆಲ ಒರೆಸುವ ಕಷ್ಟ ತಪ್ಪಿಸಿ, ಬಗ್ಗದೆ ನೆಲ ಒರೆಸುವ ಹೊಸ ಸೂತ್ರ. ಬಗ್ಗಿ ನೆಲ ಒರೆಸುವ ಬಟ್ಟೆ ಮನೆಯ ಹಳೆ ಲುಂಗಿ, ಬನಿಯನ್, ಸೀರೆಯಾದರೆ, ಈ ನೆಲ ಒರೆಸುವ ಆಯುಧ ಸಾವಿರದ್ದು. ಕೆಳಗಿನ ಬಕೆಟ್ಟಿಗೆ ಎರಡು ಚಕ್ರ ಕೊಟ್ಟರೆ ಕಾಲಿನಲ್ಲಿ ತಳ್ಳಿಕೊಂಡು ನೆಲ ಒರೆಸಿ ಮುಗಿಸಬಹುದು.
ನಮ್ಮ ಈ ಪಾಡನ್ನು ನೋಡಿದ ವಿಲಾಯತ್ ತಮ್ಮ "ಅಲ್ಲ ಇದಕ್ಯಾಕ್ ಇಷ್ಟು ತಲೆ ಬಿಸಿ ಮಾಡ್ಕೊಂಡಿದಿರ, ನಾನು ಮನೆಯಲ್ಲಿ ಕಸಗುಡಿಸುವ ಯಂತ್ರ ಇಟ್ಕೊಂಡಿದಿನಿ, ನೀನು ಒಂದು ತಗೋ, ರಾತ್ರಿ ಎಲ್ಲ ಮಲಗಿರುವಾಗ ಅದರ ಪಾಡಿಗದು ಎಲ್ಲಾನೂ ಸ್ವಚ್ಚ ಮಾಡತ್ತೆ. ನೆಲ ಕೂಡ ಒರೆಸತ್ತೆ, 15ದಿನಕ್ಕೆ ಒಂದುಸಲ ನೀರು ತುಂಬಿಸಿದರೆ ಆಯ್ತು ತಲೆನೋವು ಇರೋಲ್ಲ" ಎಂದ.
ಒಂದು ವರ್ಷದ ಹಿಂದೆ, ಹೀಗೆ ಕೆಲಸದವಳು ಇಲ್ಲದಾದಾಗ ಒಂದು ಕಸಗುಡಿಸುವ ಯಂತ್ರವನ್ನು ತರಿಸಿದ್ದೆ. ಅದು ಅಡ್ಡಾದಿಡ್ಡಿ ಒದ್ದಾಡುತ್ತಾ ಕಸಗುಡಿಸಿತು, ಸ್ವಲ್ಪ ನೆಲನು ಒರೆಸಿತು. ಅದರ ಚಕ್ರಕ್ಕೆ ಕೂದಲು ಸುತ್ಕೊಳತ್ತೆ, ಮತ್ತೆ ಅದನ್ನ ತೆಗಿತ ಕೂರಬೇಕು ಎನ್ನುತ್ತಾಳೆ ಹೆಂಡತಿ. ನನಗೆ ತೆಗೆಯಲು ಅಡ್ಡಿಯಿಲ್ಲ, ಆದರೆ ಅದನ್ನು ನಿತ್ಯ ಪರೀಕ್ಷಿಸಿ ಕೂದಲು ತೆಗೆಯೋದಕ್ಕೆ ಅಂತ್ಯ ಇದ್ಯ? ಮಗು ಹುಟ್ಟುತ್ತೆ, ಬೆ ಳೆಯತ್ತೆ, ಉಚ್ಚೆ ಕಕ್ಕ ಮಾಡತ್ತೆ ಅದನ್ನು ಸ್ವಚ್ಚ ಮಾಡ್ತೇವೆ, ಆದರೆ ಅದಕ್ಕೊಂದು ಅಂತ್ಯ ಇದೆ. ಮಗು ಬೆಳೆದು ದೊಡ್ಡದಾಗುತ್ತದೆ, ಅವೆಲ್ಲ ನಿಂತು ಹೋಗತ್ತೆ, ಯಂತ್ರದ ಚಾಕರಿ ಯಾರು ಮಾಡೋದು ಜೀವಮಾನ ಪೂರ್ತಿ, ಅದು ೮೫ಸಾವಿರ ಕಾಸು ಕೊಟ್ಟು, ಯಪ್ಪಾ ನನಗೆ ಕೋಲು ಹಿಡಿದು ನೆಲ ಒರೆಸುವುದೆ ವಾಸಿ ಅನ್ಸತ್ತೆ, ಕಾಸು ಖರ್ಚು ಮಾಡಿ, ಕೂದಲು ಸಿಕ್ಕೊಂಡಿದೆ ತಗಿ ಅಂತ ಯಾರು ಹೇಳಿಸಿ ಕೊಳ್ಳೋದು ದಿನ ಎನ್ನುತ್ತಾ ಅದನ್ನು ವಾಪಸು ಕಳಿಸಿದ್ದಾಗಿತು .
.
ಕೆಲಸದವಳ ಪುರಾಣ ಇಲ್ಲಿಗೆ ನಿಲ್ಲಲಿಲ್ಲ. ನನ್ನ ಅತ್ತೆ, ಮಗಳ ಫಜೀತಿ ನೋಡಲಾರದೆ, ಮಗಳಿಗೆ ಅನುಕೂಲ ಆಗಲಿ ಎಂದು ಒಬ್ಬಳು ಕೆಲಸದಾಕೆಯನ್ನು ಕರೆದುಕೊಂಡು ಬಂದಿದ್ದರಂತೆ. ನನ್ನಾಕೆ ಕೆಲಸ ಹೇಳುವಾಗ ಸಂಜೆ 5.30ರಿಂದ 8.30ರ ವರೆಗೆ ನನ್ನ ಜೊತೆ ಇರಬೇಕು, ನಾನು ಹೇಳಿದ ಕೆಲಸವನ್ನೆಲ್ಲಾ ಮಾಡಬೇಕು ಎಂದಳು. ಆಕೆ ಆಗಲಿ ಎಂಟು ಸಾವಿರ ಸಂಬಳ ಕೊಡಿ ಅಂದಳಂತೆ. ವ್ಯವಹಾರ ಕುದುರಲಿಲ್ಲ. ಅಲ್ಲ ನಾನು ಹೇಳಿದ ಕೆಲಸ ಎಲ್ಲ ಮಾಡಬೇಕು ಅಂದರೆ ಅಲ್ಲಾವುದ್ದೀನನ ಅದ್ಭುತ ದೀಪವನ್ನೇ ತರಬೇಕು ಅನ್ಸತ್ತೆ.
ನಿನ್ನೆ ಮುರಿದುಬಿದ್ದ ಮಾತುಕತೆಯ ಪ್ರಭಾವ, ಅಡುಗೆ ಮನೆಯಲ್ಲಿ ಸಿಂಕ್ ತುಂಬಾ ಪಾತ್ರೆಗಳು, ಒಲೆಯ ಪಕ್ಕ ಅಡುಗೆ ಮಾಡಿದ ಹಿಟ್ಟು, ಸಾರು, ಅನ್ನದ ಪಾತ್ರೆಗಳು, ಹಿಟ್ಟಿನ ಡಬ್ಬಿಗಳು, ಲೋಟಗಳು ಎಲ್ಲವೂ ಕಟ್ಟೆಯ ಮೇಲೆ ಭಯಜನಕವಾಗಿ ರಾರಾಜಿಸುತ್ತಿದ್ದವು. ಇಷ್ಟು ಸಾಲದೆಂಬಂತೆ ಮಗಳು ಕ್ರಾಫ್ಟ್ ಕಾಗದವನ್ನು ಸಣ್ಣ ಸಣ್ಣ ಚೂರುಗಳಾಗಿ ಮಾಡಿ ಮನೆಯಲ್ಲೆಲ್ಲಾ ಹರಡಿದ್ದಳು.
ಅಮ್ಮ ಮಲಗುವೆ ಎಂದು ಕೋಣೆ ಸೇರಿದರು. ಪತ್ನಿ ಅಯ್ಯಪ್ಪ ನನ್ ಕೈಯ್ಯಲ್ಲಾಗಲ್ಲ ಎಂದು ಕುಳಿತು ಬಿಟ್ಟಳು. ಎಲ್ಲ ದಿಕ್ಕೂ ಪಾಳು.
ನಾನು ಊಟ ಮುಗಿಸಿದೆ. ಮಗಳಮೇಲೆ ಪತ್ನಿ ಗಲೀಜು ಮಾಡುತ್ತೀಯ ಎಂದು ಜೊರು ಮಾಡುತ್ತಿದ್ದಳು. ಆಕೆಗೆ ಸಹಾಯವಾಗಲಿ ಎಂದು, ಕಟ್ಟೆಯ ಮೇಲಿದ್ದ ಡಬ್ಬಗಳನ್ನು ಎತ್ತಿಡಲಾರಂಭಿಸಿದೆ. ಆಕೆ ಬಂದು ಕೈಜೋಡಿಸುವಳು ಎಂಬ ವಿಶ್ವಾಸವಿತ್ತು. ಆಕೆ ಬಂದಳು, ಬಂದವಳೇ ನಿನಗೆ ಎಷ್ಟಾಗತ್ತೋ ಅಷ್ಟು ಮಾಡು ನಾನು
ಮಲಗ್ತೀನಿ ಎಂದು ಹೊರಟು ಹೋದಳು. ಆಕೆಯ ಹಿಂದೆ ಮಗಳು ಹೋಗಿದ್ದು ನನ್ನ ಪುಣ್ಯ ಇರಬೇಕು, ಅಪ್ಪ ನಾನ್ ಸಹಾಯ ಮಾಡಲಾ ಅಂತ ನಿಲ್ಲಲಿಲ್ಲ.
ಸಿಟಿ ಬಸ್ ನ ಫುಟ್ ಬೋರ್ಡ್ ಪ್ರಯಾಣಿಕರು ಪೊಲೀಸರು ಹಿಡಿಯುತ್ತಾರೆ ಎಂದು ಒಳ ಹೋಗಿ ಕುಳಿತುಕೊಳ್ಳುವ SP ಸಾಂಗ್ಲಿಯಾನ ಚಲನಚಿತ್ರದಂತೆ ಎಲ್ಲ ಡಬ್ಬಗಳು ಒಳ ಸೇರಿದವು.
ಒಲೆಗಳ ಮೇಲಿರುವ ಅಡ್ಡಣಿಗೆಗಳನ್ನು ತೆಗೆದು, ಒಂದು ಹಸಿ ಬಟ್ಟೆಯಲ್ಲಿ ಒರೆಸಿದೆ. ಬೆಳಿಗ್ಗೆ ಮಾಡಿದ್ದ ರೊಟ್ಟಿ, ಸಾರು, ರಾತ್ರಿಯ ಮುದ್ದೆ, ಹುರುಳಿಕಾಳು ರುಚಿ ನೋಡಿದ್ದ ಒಲೆ ಹಾಗೂ ಕಟ್ಟೆಗಳು ಹಠಕ್ಕೆ ಬಿದ್ದವು. ತ್ರಿವಿಕ್ರಮನಂತೆ ಅಲ್ಲೇ ಇದ್ದ ಪಾತ್ರೆಗುಂಜು ಜೊತೆಗೆ ಸ್ವಲ್ಪ ಸಾಬೂನು ತೆಗೆದುಕೊಂಡು ಎಲ್ಲವನ್ನೂ ಉಜ್ಜಿ ತೆಗೆದೆ. ಒಲೆಯ ಬರ್ನರ್ ಗಳನ್ನೂ ಎತ್ತಿ ಸ್ವಚ್ಚ ಮಾಡಿದೆ. ಸಾಕಷ್ಟು ಹಳೆಯ ಕರಕಲು ಸರಕಿತ್ತು.
ನಂತರ ಅಖಂಡ ಪಾತ್ರೆಗಳ ಜೊತೆ ಯುದ್ಧಸಾರಿ ಹೊಡೆದಾಡಲು ಸಜ್ಜಾದೆ. ಎಲ್ಲಿಂದ ಆರಂಭವೋ... ಎನ್ನುತ್ತಾ ಎಲ್ಲ ದೊಡ್ಡ ಪಾತ್ರೆಗಳು, ಕುಕ್ಕರ ಗಳನ್ನು ತೆಗೆದು ಪಕ್ಕಕ್ಕಿಟ್ಟು,, ತಟ್ಟೆಗಳನ್ನು ಉಜ್ಜಿ ಬೆಳಗಿದೆ. ನಂತರ ಅನ್ನದ ಕೈ, ಸಾರಿನ ಕೈ, ಪಲ್ಯದ್ದು, ಚಮಚೆಗಳು, ಬಟ್ಟಲುಗಳು, ಎನ್ನುತ್ತಾ ಎರಡನೇ ಹಂತದಲ್ಲಿ ತೊಳೆದು ಮುಗಿಸಿದೆ. ಮೂರನೆಯ ಹಂತದಲ್ಲಿ ಕುಕ್ಕರ್ ಗಳು, ಅದರ ಗ್ಯಾಸ್ಕೆಟ್, ಮುಚ್ಚಳ, ವೇಯ್ಟ್ ತೊಳೆದೆ.
ನಾಲ್ಕನೇ ಸುತ್ತಿನಲ್ಲಿ ಮುದ್ದೆ ಮಾಡಿದ್ದ ಪಾತ್ರೆ, ಹಾಲಿನ ಪಾತ್ರೆ ಹಾಗೂ ಸಿಂಕಿನಲ್ಲಿ ಉಳಿದಿದ್ದ ಎಂಜಲು ಎಲ್ಲವನ್ನೂ ತೆಗೆದು ಮುಸುರೆ ಡಬ್ಬಿಗೆ ಹಾಕಿದೆ ಹಾಗೂ ಅವನ್ನೂ ಎರಡೆರಡು ಬಾರಿ ತೊಳೆದೆ.
ನಿಂತಿದ್ದ ಜಾಗ ಕೆಳಗಡೆ ಪೂರ್ತಿ ಬಚ್ಚಲಿನಂತಾಗಿತ್ತು.
ಒಂದು ಸ್ವಚ್ಚವಾದ ವಸ್ತ್ರವನ್ನು ತೆಗೆದುಕೊಂಡು ಎಲ್ಲ ಚಮಚಗಳನ್ನು ಸೌಟುಗಳನ್ನು ಒರೆಸಿ, ಕಟ್ಲರಿಗೆ ಸೇರಿಸ ಹೋದರೆ, ಯಾರೋ ಮಾಟ ಮಂತ್ರ ಮಾಡಿಬಿಟ್ಟ ಹಾಗೆ ಅಲ್ಲಿ ಸಾಸಿವೆ, ಒಣಗಿದ ಅನ್ನ, ಹರಿಷಿನದ ಪುಡಿ ಇದೆ.
ಅಲ್ಲಿದ್ದ ಎಲ್ಲ ಸಾಮಾನುಗಳನ್ನು ಹೊರಗಿಟ್ಟು, ಕಟ್ಲರಿಯನ್ನು ಬಟ್ಟೆ ತೆಗೆದುಕೊಂಡು ಒರೆಸಿದೆ. ನಂತರ ಚಮಚೆಗಳು ಒಂದುಕಡೆ, ಸೌಟುಗಳು ಒಂದುಕಡೆ ಮುದ್ದೆ ಕೋಲು, ಲಟ್ಟಣಿಗೆ, ಮರದ ಚುಂಚಕ ಒಂದುಕಡೆ, ಚಾಕು ಕತ್ತರಿ, ಸೋಸುವುದು, ಕುಟ್ಟುವ ಕಲ್ಲು, ಕುಕ್ಕರ್ ವೇಯ್ಟ್ ಒಂದುಕಡೆ ಜೋಡಿಸುತ್ತಾ, "ನಾನು ಇದನ್ನು ಮಾಡೋಕೆ ಶುರು ಮಾಡಿದರೆ, ನನ್ನ ಶಿಸ್ತಿನ ದೆಸೆಯಿಂದ ಮನೆಯಲ್ಲಿ ಎಲ್ಲರಿಗೂ ಪೀಕಲಾಟ ಅನ್ಸತ್ತೆ" ಎಂದುಕೊಂಡು ಮುಂದುವರಿದೆ. ನೋಡ ನೋಡುತ್ತಲೇ ತೊಳೆದ ಎಲ್ಲ ಪಾತ್ರೆಗಳು ಆಧುನೀಕರಣ ಗೊಂಡಿರುವ ಅಡುಗೆ ಮನೆಯ ಎಲ್ಲಾ ಮೂಲೆಗಳಲ್ಲೂ ಅಡಗಿಕೊಂಡು ಕುಳಿತವು.
ಸಿಂಕ್ ಕೆಳ ಭಾಗದಲ್ಲಿ ನೀರಿದ್ದದ್ದನ್ನು ಒಂದು ಬಟ್ಟೆ ಯಲ್ಲಿ ಒರೆಸಿದೆ. ಕಾಲು ಕಪ್ಪು ಬಣ್ಣ ವಾಗಿತ್ತು. ಪೊರಕೆ ತೆಗೆದುಕೊಂಡು ಅಡಿಗೆ ಮನೆಯನ್ನು ಗುಡಿಸಿದೆ, ಸಮಾಧಾನ ವಾಗಲಿಲ್ಲ, ಮತ್ತೆರಡು ಬಾರಿ ಗುಡಿಸಿದೆ. ಹೊರ ಬಂದರೆ ಡೈನಿಂಗ್ ಟೇಬಲ್ ಮೇಲೆ ಒಂದು ರಾಶಿ ಸಾಮಾನುಗಳು! ಎಲ್ಲವನ್ನೂ ಸ್ವಸ್ಥಾನ ಸೇರಿಸಿ, ಡೈನಿಂಗ್ ಹಾಲ್, ಹಾಗೂ ಹಾಲ್ ಗಳ ಕಸ ಗುಡಿಸಿದೆ. ನೆಲ ಒರೆಸ ಬಹುದು ಎನಿಸಿದರೂ, ಸ್ವಲ್ಪ ಜಾಸ್ತಿನೇ ಆಯ್ತು ಕೆಲಸ, ಆಗಲೆ ರಾತ್ರಿ ೧೨.೩೦ ಆಗಿದೆ ಎಂದುಕೊಂಡು ಹೋಗಿ ಮಲಗಿದೆ. ಸ್ವಲ್ಪ ಬೆನ್ನು ನೋಯುತ್ತಿತ್ತು.
ಇಷ್ಟೆಲ್ಲಾ ಮಾಡಿದ ಮೇಲೆ ನನಗೆ ಪತ್ನಿಯ ಮೇಲೆ ಮರುಕ ಹುಟ್ಟಬೇಕಿತ್ತು, ಪಾಪ ದಿನ ಇವನ್ನೆಲ್ಲ ಮಾಡ್ತಾಳೆ ಅಂತ, ಆದರೆ ನನಗೆ, ಇದೇನ್ ಮಹಾ ಕೆಲಸ ಅಂತ ಎಂಟು ಸಾವಿರ ಕೇಳಿದಳು ಆ ಕೆಲಸಕ್ಕೆ ಬಂದವಳು ಎನಿಸಿತು ಹಾಗೂ ನಿತ್ಯ ಇದನ್ನೇ ಮಾಡಿದರೆ ವ್ಯಾಯಾಮ, ನಡಿಗೆ ಇವೆಲ್ಲಕ್ಕಿಂತಲೂ ಉತ್ತಮ ದೈಹಿಕ ಶ್ರಮ ಎನಿಸಿತು.
ಬೆಳಿಗ್ಗೆ ಎದ್ದು ಅಡುಗೆ ಮನೆಗೆ ಹೋದಾಗ ನೀ ಮಾಡಿದ್ದು ಸಹಾಯ ಆಯ್ತು ಅಂತ ಹೇಳ್ತಾಳೆ ಪತ್ನಿ ಅಂದು ಕೊಂಡರೆ, ರಾತ್ರಿ ಬರ್ನರ್ ಕ್ಲೀನ ಮಾಡಿದೆಯಾ ಉರಿತಿಲ್ಲ ಅನ್ನೋ ಪ್ರಶ್ನೆ ಎದುರಾಗೋದೆ. ಸರಿ ಬಿಡು ಎಂದು ತಿಂಡಿ ತಿಂದು ಚಿಕಿತ್ಸಾಲಯ ತಲುಪಿದ ಮೇಲೆ ಅಮ್ಮ ಕರೆ ಮಾಡಿದಾಗ , ನೀನು ಕ್ಲೀನ್ ಎಷ್ಟು ಚೆನ್ನಾಗಿ ಮಾಡಿದೆಯಾ ಅಂದರೆ ತಿಂಡಿ ತಿಂದಾದ ಮೇಲೂ ಅಡುಗೆ ಮನೆಯಲ್ಲಿ ಯಾವ ಕಸ ಕೊಳೆನು ಇಲ್ಲ ಎಂದು ಹೇಳಿದರು.
ಇಲ್ಲಿ ಸಮಸ್ಯೆ ಏನು ಎಂದು ಅರ್ಥವಾಗುತ್ತಿಲ್ಲ. ನಮ್ಮ ಮನೆಯ ಕೆಲಸಗಳನ್ನು ನಾವು ಮಾಡಿಕೊಳ್ಳಲಾಗದಷ್ಟು ಕೆಲಸವಿದೆಯೆ ನಮಗೆ? ಇನ್ನೊಬ್ಬರು ಬಂದು ಕೆಲಸ ಮಾಡಿಕೊಟ್ಟರೆ ನನ್ನ.ಮನೆ ನಡೆಯುತ್ತದೆ , ಇಲ್ಲದಿದ್ದರೆ compromised ಜೀವನ ಮಾಡಬೇಕೆ? ನಾವು ಸ್ವಾವಲಂಬಿಗಳಾಗುವುದು ಯಾವಾಗ ಎಂದೆಲ್ಲ ಪ್ರಶ್ನೆಗಳು ಮೂಡಿದವು.
ಇಷ್ಟೆಲ್ಲಾ ಆದ ಮೇಲೆ ಚಿಕಿತ್ಸಾಲಯದಲ್ಲಿ ಸಹಾಯಕಿ ನ್ಯಾಯಾಲಯದಲ್ಲಿ ಯಾವುದೋ ದಾವೆ ಇದೆ ಎಂದು ಕೆಲಸಕ್ಕೆ ಚಕ್ಕರ್. ಇಲ್ಲೂ ನನದೇ ಕೆಲಸ. ನನ್ನ ಕೆಲಸ ನಾನು ಮಾಡಿಕೊಳ್ಳುವುದಕ್ಕೆ ನನಗೆ ಯಾವ ಬೇಸರವೂ ಇಲ್ಲ.
ನನ್ನ ಮಗಳ ಶಾಲೆಯಲ್ಲಿ ಅರಿವು ಹಬ್ಬ ಎಂದು ಎಲ್ಲ ಪೋಷಕರು ಸೇರಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡುತ್ತಾರೆ. ಅಲ್ಲಿಯ ನಾಟಕದಲ್ಲಿ ಭಾಗವಹಿಸಿದ್ದ ನನಗೆ, ಅವರು ಸಂಗೀತ, ಹಾಡು, ರಂಗ ಪರಿಕರಗಳು ಯಾವುದಕ್ಕೂ ಇನ್ನೊಬ್ಬರ ಮೇಲೆ ಅವಲಂಬಿತರಾಗುವುದಿಲ್ಲ. ಎಲ್ಲವನ್ನೂ ನಾಟಕ ಮಾಡಲು.ಮುಂಬರುವ ಪೋಷಕರೇ ನಿವಾರಿಸಿಕೊಳ್ಳಬೇಕು. ಅಲ್ಲಿ ಪಾತ್ರಧಾರಿ ಕಚ್ಚೆ ಉಡುವ ಸಂದರ್ಭವಿದ್ದರೆ, ಕಚ್ಚೆ ಉಡಿಸುವುದಿಲ್ಲ, ಉಡುವುದನ್ನು ಕಲಿಸುತ್ತಾರೆ. ಹಾಗೆ ನನ್ನ ಮನೆಯಕೆಲಸ ನಾನೇ ಮಾಡಿಕೊಳ್ಳುವ ಎಂಬ ದೃಢ ಸಂಕಲ್ಪಕ್ಕೆ ನಾಂದಿಯಾಯಿತು ನಿನ್ನೆಯ ರಾತ್ರಿ.
ಅದಕ್ಯಾವ ಯಂತ್ರವೂ ಬೇಡ, ಏನೂ ಬೇಡ, ಕೆಲಸ.ಮಾಡುವ ಮನವಿರಬೇಕು, ಉಳಿದದ್ದೆಲ್ಲಾ ಆಗುವುದು.
ಕೆಲಸದಾಕೆಯ ಬವಣೆ ಗಳೂ ತುಂಬಾ ಇರುತ್ತವೆ. "ಅವರ ಮನೆಯಲ್ಲಿ ಕೆಲಸ ಜಾಸ್ತಿ", "ಕಸ ತುಂಬಾ ಇರತ್ತೆ", "ತಿಂಡಿ ಕೊಡಲ್ಲ", "ರಜೆ ಕೊಡಲ್ಲ", "ಸಂಬಳ ಸಾಕಾಗಲ್ಲ", "ಗಂಡ ಹೋಗಬೇಡ ಅಂತಾನೆ", "ಮನೆ ದೂರ" ಹೀಗೆ.
ಅವರ ಅವಶ್ಯಕತೆ ಹಾಗೆ ಇರುತ್ತವೆ. ಬಡ್ಡಿ ರಹಿತ ಸಾಲ, ಮುಂಗಡ ಹಣ, ದಿನವೂ ತಿಂಡಿ, ಊಟ, ಹಬ್ಬ ಹರಿದಿನಗಳಲ್ಲಿ ವಿಶೇಷ ಸತ್ಕಾರ, ಉಡುಗೊರೆ.
ಅವರನ್ನು ನಮ್ಮೊಡನೆ ನಾವು ಹೋಗುವ ಪ್ರವಾಸಗಳಿಗೂ ಕರೆದುಕೊಂಡು ಹೋಗಬೇಕು ಎನಿಸುತ್ತದೆ. ಆದರೆ ಇಲ್ಲಿಯವರೆಗೂ ಅದಕ್ಕೆ ಭಾಜನರಾಗುವಂತಹ ಕೆಲಸದವರು ಸಿಕ್ಕಿಲ್ಲ.
ಇನ್ನೊಂದು ಮನೆ ಕೆಲಸಕ್ಕೆ ಯಾವಾಗಲೂ ಸ್ತ್ರೀಯರೇ ಬರುವುದು, ಕೆಲಸ ಮಾಡಿಸಿಕೊಳ್ಳುವವರೂ ಸ್ತ್ರೀಯರೇ.
ನನ್ನ ಚಿಕಿತ್ಸಾಲಯದಲ್ಲಿ ಕಳೆದ ಇಪ್ಪತ್ನಾಲ್ಕು ವರ್ಷದಲ್ಲಿ ಸಾಕಷ್ಟು ಕೆಲಸದವರು ಬಂದು ಹೋದರು, ಅವರಲ್ಲಿ ಎಲ್ಲರೂ ಸ್ತ್ರೀಯರೇ ಹಾಗೂ ಒಬ್ಬ ಹೈ ಸ್ಕೂಲ್ ಬಾಲಕ ಚಿಕಿತ್ಸಾಲಯದ ಕೆಲಸ ಹೇಗಿರುತ್ತದೆ ಎಂದು ನೋಡಲು ಮೂರು ತಿಂಗಳು ಕೆಲಸ ಮಾಡಿದ್ದ. ಇಂದು ಆತ ಒಳ್ಳೆಯ ಹಣಕಾಸು ಸಂಸ್ಥೆಯಲ್ಲಿ ವ್ಯವಸ್ಥಾಪಕ ನಾಗಿ ಕೆಲಸ ಮಾಡುತ್ತಿದ್ದಾನೆ.
ಮುಂಬೈ ಬೆಂಗಳೂರಿನಂತಹ ನಗರಗಳಲ್ಲಿ ಮನೆ ಕೆಲಸ ಮಾಡುವವರನ್ನು ನಿರ್ವಹಿಸುವ ಸಂಸ್ಥೆಗಳು ಇವೆಯಂತೆ. ಅವರು ಗ್ರಾಹಕರಿಂದ ಇಂತಿಷ್ಟು ಎಂದು ಪಡೆದು, ಅವರಿಗೆ ಕೆಲಸದವರನ್ನು ಒದಗಿಸುತ್ತಾರಂತೆ. ಇದರ ಸತ್ಯಾಸತ್ಯತೆ ತಿಳಿಯದು.
ಅದೆಲ್ಲ ಏನೇ ಆಗಲಿ ನಮ್ಮ ಮನೆ ಕೆಲಸಗಳನ್ನು ನಾವು ಮಾಡಿಕೊಳ್ಳುವುದು ಕ್ಷೇಮ. ಮತ್ತೊಬ್ಬರ ಮೇಲೆ ಅವಲಂಬಿತ ರಾಗುವುದು ನಮಗೆ ಶ್ರೆಯಸ್ಸಲ್ಲ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ