ಶನಿವಾರ, ಸೆಪ್ಟೆಂಬರ್ 8, 2018

ಜಾಗೃತಿ, ಉರಗ ಸಂರಕ್ಷಣೆ ; ಹಾವು ಮಾನವನ ಸಂಘರ್ಷಕ್ಕೆ ಮುಕ್ತಿ

ಹಾವುಗಳನ್ನು ಸಂರಕ್ಷಿಸುವುದು ಅಪಾಯಕರವೇ? ಹೌದೆಂದಾದರೆ ಅಪಾಯವನ್ನು ಹೇಗೆ ಕಡಿಮೆಮಾಡುವುದು?
ಮಾನವ ಉರಗಗಳ ಸಂಘರ್ಷವನ್ನು ಹೇಗೆ ನಿವಾರಿಸಬಹುದು?

ನನ್ನ ಅನುಭವದ ಹಿನ್ನೆಲೆಯಲ್ಲಿ ಈ ಮೇಲಿನ ಪ್ರಶ್ನೆಗಳನ್ನು , ಮುಂದಿನ ಸಾಲುಗಳಲ್ಲಿ ಉತ್ತರಿಸುವ ಪ್ರಯತ್ನ ಮಾಡಿರುವೆ.  ಮಾನವ ಹಾಗೂ ಹಾವುಗಳ ಸಂಘರ್ಷ ಕೊನೆಮಾಡಲು ಯಾವಾಗಲೂ  ಹಾವುಗಳ ಸ್ಥಳಾಂತರ ಮಾಡುವುದು ಪರಿಹಾರವಲ್ಲ. ಪ್ರತಿ ಸಂದರ್ಭದಲ್ಲೂ ಯಾವುದಾದರೂ ಕಾರಣದಿಂದ ಸಂರಕ್ಷಣಾಕಾರ್ಯ ಕೈಗೊಳ್ಳ ಬೇಕಾಗುತ್ತದೆ . ಸಂರಕ್ಷಣೆಗೆ ಒಂದು ನಿಯಮ , ಸಂಶೋಧನೆ,ರೀತಿ ರಿವಾಜುಗಳನ್ನು ಅನುಸರಿಸಬೇಕು .ಅದರಲ್ಲಿ ಸಂರಕ್ಷಣೆ ಹಾಗೂ ಸುರಕ್ಷಿತವಾಗಿ ಹಾವುಗಳ ಬಿಡುಗಡೆ ಮುಖ್ಯ.  ಹಾವುಗಳ ಬಗ್ಗೆ ಸರಿಯಾದ ತಿಳುವಳಿಕೆ ಇದ್ದರೆ  ಅವಶ್ಯಕತೆ ಇರುವಲ್ಲಿ ಮಾತ್ರ ಸಂರಕ್ಷಣಾ ಕಾರ್ಯವನ್ನು ಕೈಗೊಳ್ಳುತ್ತೇವೆ ಅದರಿಂದ  ಅನವಶ್ಯಕ ಕಾರ್ಯಾಚರಣೆ ತಪ್ಪುತ್ತದೆ .

ಶನಿವಾರ, ಸೆಪ್ಟೆಂಬರ್ 1, 2018

ಒಂಟಿ ಮಾತು

ಅನಿಸಿದ್ದನ್ನು
ಮಾತನಾಡಿ
ಕಳೆದುಕೊಳ್ಳಬೇಕು
ಇಲ್ಲದಿರೆ ಭೂತವಾಗಿ
ಕಾಡುತ್ತದೆ
ಗಂಡ ಹೆಂಡಿರ ನಡುವೆ
ಮಾತಿನ ಸರಾಗದ ವೇಗ
ಬೇರೆಯವರೊಡನೆ
ಬರದು
ಇಬ್ಬರರಿತು ಸ್ನೇಹಿತರಾದರೆ
ಸ್ವರ್ಗ-ಕೊಂದೆ ಗೇಣು
ಅದಕ್ಕೆ ಸಂಶಯವಿಲ್ಲ
ಬೇಕು ಜೊತೆಗಾರರು
ಜಗಳವಾಡಲು ಸರಿಯೇ
ಪ್ರೀತಿ ಇರಬೇಕಲ್ಲಿ

ಆಡದ ಮಾತು
ತಲೆಯೊಳಗೆ ಪ್ರತಿಫಲಿಸಿ
ಫಲಿಸಿ
ತನ್ನೊಡನೆ ನುಡಿದಾಗ
ಜಗ ಕರೆವುದದನು
ಹುಚ್ಚೆಂದು
ಮಾತನಾಡಲು ಬೇಕು
ಜೀವ ಸಂಗಾತಿ
ಇಲ್ಲದಿರೆ
ತನ್ನೊಳಗೇ ತಾ ನುಡಿದು ಉಲಿದು
ಆಗುವವರು ಅಂತರಮುಖಿ
ಅವರೊಡನಿಲ್ಲ ಸುಖಿ

ಬುಧವಾರ, ಆಗಸ್ಟ್ 22, 2018

ಆಸೆ


ಕತ್ತಲ ರಾತ್ರಿಯಲಿ
ಎಲ್ಲವ ತೊಡೆದು
ಹೋಗುವಾಗ
ನೆನಪಾಗಲಿಲ್ಲವೆ
ನಿನ್ನಕ್ಕ ತಂಗಿಯರು
ಮಡದಿ ಕಂದಮ್ಮರು
ಸಾಧನೆಯ ಶಿಖರವನೇರಿ
ದಿವ್ಯ ದೃಷ್ಟಿಯ ಬೀರಿ
ಪ್ರವಚನದ ಸಾಲುಗಳ ಸಾರಿ
ಹುಡುಕು
ಅನಾಥ ಕಂದ
ಅಮ್ಮ ಎಲ್ಲಿಹರೆಂದು
ಹೌದು ನಿನ್ನನುಯಾಯಿಗಳ
ಸಾಲು
ದೊಂದಿ ಬೆಳಕಿನಲಿ
ಹುಡುಕುತಿಹರು
ಶತ ಶತಮಾನಗಳುರುಳಿದರೂ
ಸಿಗಲಿಲ್ಲ ನೋಡು ಸಾಸಿವೆ
ಇನ್ನೂ ರಟ್ಟಾಗಲಿಲ್ಲ
ನಿನ್ನ ಸಂಜೀವಿನಿ ವಿದ್ಯೆ
ನನಗಿನ್ನೂ ಸಂದೇಹವಿದೆ
ನೀ ನಡುರಾತ್ರಿಯಲೇ
ಮನೆತೊರೆದ ಗುಟ್ಟೇನು
ವೈರಾಗ್ಯದಿ
ಮನಸುಟ್ಟ ಪ್ರಶ್ನೆ ಏನು

ನೀ ಹಲುಬಿದೆ ಹುಡುಕಿದೆ
ಸೊರಗಿದೆ ಕಂಗೆಟ್ಟೆ
ಏನೆಂದು ಆಸೆ ಪಟ್ಟೆ
ಕೊನೆಗೆ ನೆರವೇರಿದ್ದು
ನಿನ್ನಾಸೆಯಂತೆ
ಆಸೆಯೆ ದುಃಖಕ್ಕೆ ಮೂಲ

ನಿನ್ನಾಸೆಗೆ ತೊರೆದೆ ಅಂತಸ್ತಧಿಕಾರ
ನೋಯಿಸಿ ಬೇಯಿಸಿದೆ
ಸತಿ ಸುತ ಪುರ ಜನರ
ಆಗುತ್ತಿರಲಿಲ್ಲವೇ ನಿನಗೆ
ಜವಾಬ್ದಾರಿಗಳೊಂದಿಗೆ
ಸಾಕ್ಷಾತ್ಕಾರ?
ನಿನ್ನ ಮೊಂಡಾಟಗಳೆಲ್ಲ
ನೀ ಪಡೆದ
ಫಲದ ಮುಂದೆ ಮಸಕು
ಬೆಳಕಿದ್ದಷ್ಟು ಕತ್ತಲೂ ಗಾಢ 
ಕತ್ತಲ ದೂಡಲು
ಮತ್ತೆ ಬೇಕು ನಿನ್ನ  ತತ್ವ

ದೀಪಕ್


ಮಂಗಳವಾರ, ಆಗಸ್ಟ್ 14, 2018

ತುಣುಕು

*ಮಳೆಯಾಗುತಿದೆಯಂತೆ ಹುಡುಗಿ*
ಸೂರತೂತನು ಮುಚ್ಚುಬಾರೋ ಹುಡುಗ 
*ಪಾತ್ರೆಯನಿಡೆ ಹುಡುಗಿ*
ಅಡಿಗೆಗೆ ಗಡಿಗೆತಾರೋ ವೀರ
*ಕೆರೆ ಕಟ್ಟೆ ತುಂಬ್ಯಾವೇ ಹುಡುಗಿ*
ಹೇಳು ಹಾರೋಣೇನು ಅದರೊಳಗೆ ಹೋಗಿ
*ಮಳೆ ಸೋನೆಹಿಡಿದಿಯೇ ಹುಡುಗಿ*
ಎಣ್ಣೆ ಇಲ್ಲವೋ ಮನ್ಯಾಗ ಹುಡುಗ


ಬುಧವಾರ, ಆಗಸ್ಟ್ 8, 2018

ಗೆಳತಿಗೆ

ನೆನಪುಗಳ ಕೂಡಲೇ
ಪದಗಳನು ಹಾಸಲೇ
ಮನದೊಳಗೆ ತುಡಿತ
ಕೇಳಿ ಕೂಡಿ ನುಡಿವಾಗ
ನಿನ್ನೊಳಗೆಮ್ಮ ಬಿಂಬ
ನಮ್ಮೊಳಗ ನಿನ್ನ ಬಿಂಬ
ಇದಕೆಬೇರೆ ಹೆಸರು ಬೇಕೆ
ಸ್ನೇಹ ಎಂದರಷ್ಟೇ ಸಾಕೆ
ದೀಪಕ್

ಸೋಮವಾರ, ಜುಲೈ 30, 2018

ಚುಟುಕು


ಪರಕೀಯರ
ತನ್ನವರಾಗಿಸಿಕೊಳ್ಳುತ್ತಾ
ತನ್ನವರ ಪರಕೀಯ
ಮಾಡಿದೆಯಲ್ಲ
ಗಾಲಿಬ್
ಎನಿದರ ಮರ್ಮ?
***

ಕೋಟ್ಯಾನು ಕೋಟಿ ವರ್ಷಗಳ ಕೋಟ್ಯಾನು ಕೋಟಿ ಸಂಯೋಜನೆಯ ಒಂದು ಫಲ ಈ ಬದುಕು ನೀರಮೇಲಿನ ಗುಳ್ಳೆಯಂತೆ

***

ಬೆತ್ತಲಿನ ಭ್ರಮೆ ನೀಡುವ ಉನ್ಮಾದ ಬೆತ್ತಲು ನೀಡದು

***

ತೀರದ ನೆನಪು ನದಿಗಿಂತ ಆಗಾಧ
ಎಲ್ಲೂ ಮುಗಿಯುವುದಿಲ್ಲ
***

ಓಡಿಹೋಗಿ
ಮದುವೆಯಾದ
ಗುಲಾಮನಾಗಲು

***

ಈಗ ಸಂಬಂಧಗಳನ್ನು ಕಡಿಯುವುದು ಸುಲಭ,

ಒಮ್ಮೆ ಜಂಗಮವಾಣಿಗೆ ಹುಷಾರು ತಪ್ಪಿತು
ಎಷ್ಟೋ ಗೆಳೆಯರು ಇಲ್ಲವಾದರು.

***

ಅಪ್ಪಟ ಪ್ರೇಮಿಯ ಹೃದಯದಲ್ಲಿ ವಜ್ರವಿರುತ್ತದೆ

***

ನೆನಪುಗಳು ಒತ್ತರಿಸುತ್ತವೆ ರೋಧನವೇ, ಅತೃಪ್ತಭಾವವೇ, ಭಯವೇ ಗೊತ್ತಿಲ್ಲ
ಅಂತೂ *ಬೇಡದ* ನೆನಪುಗಳ

***

ಹಳೆಯ ಮುಸುಕಿನಲಿ ಎಲ್ಲವ ಮುಚ್ಚುವ ಸನ್ನಾಹ, ಏನನ್ನೋ ಮರೆತ ನೆನಪು

***

ಗುರುವಾರ, ಜುಲೈ 26, 2018

ಹುಚ್ಚು


ಮನದಲ್ಲೇ ಬೆತ್ತಲುಮಾಡುತ್ತಿದ್ದವ
ಬೆತ್ತಲು ಕಂಡು ಮುಖ ತಿರುವಿದ
ಹುಚ್ಯಾರಿಗೆ?

ಬ್ಲಾಗ್ ಆರ್ಕೈವ್

Its blog I have created to enter my day to day search & feel like sharing the same with like minded people. I solicit a comment from all my friends.