ಮಂಗಳವಾರ, ಮೇ 31, 2016

ದ್ವಂದ್ವ

ಮಾತು ಮುಗಿದ ನಂತರ
ಕಳೆದುಕೊಂಡ
ಅನುಭವ
ಕಾಲವಾದವೆಷ್ಟೊ ಬಂಧಗಳು
ಅನಂತದಲ್ಲಿ
ಸ್ವಂತಕೆಂದು ಕೊಂಡಿ ಬಿಚ್ಚಿದಾಗ ಸದ್ದೂ
ಸಡ್ಡು ಹೂಡೆದು
ಆಂತರ್ಯವ ಹಂಗಿಸುತ್ತದೆ;
"ನೀನೊಬ್ಬ ಸೋಗಿನ ಸ್ವಾರ್ಥಿ"

ನನ್ನೊಳಗಿನ್ನೊಬ್ಬನಿಗೆ ಸುಮ್ಮನಿರಲು
ಹೇಳಿದಷ್ಟು ಕಿರಿಕಿರಿ,
ಹುಚ್ಚಾಲೋಚನೆಗಳ ಹಿಂದೆ
ಓಡಿದರೆ  ಆತ್ಮಹತ್ಯೆ ಖಾತರಿ
ಕೇಳದಿರೆ
ಆತ್ಮದ ಸಾವು !

ದೀಪಕ್

ಭಾನುವಾರ, ಮೇ 29, 2016

ಮತ್ತೆ ಮರೆಯಬೇಕಿದೆ

ಅಟ್ಟ ದಿಂದ ಕೆಳಗಿಳಿಸಿದ
ನೆನಪುಗಳ ಮೂಟೆಯ
ಮತ್ತೆ
ಮತ್ತೆ ಮೇಲೊಟ್ಟಬೆಕಿದೆ

ನೆನಪಿನಂಗಳದಲ್ಲಿ ತಿರುಗಿ
ಬದುಕಿಸಿದ್ದವರನ್ನು
ಮತ್ತೆ
ಸಾಯಿಸಬೇಕಿದೆ

ಮರೆತ ಪುಟಗಳ
ಹಿಂತಿರುಗಿಸಿ ಓದಿದ್ದನ್ನು
ಮತ್ತೆ
ಮರೆಯಬೆಕಿದೆ

ಆಸರೆಯಾಗಿದ್ದ ತೋಳನ್ನು 
ತೊಯ್ಸಿ ಮಲಿನಿಸಿದ ತಪ್ಪಿಗೆ
ಮತ್ತೆ
ಎಲ್ಲ ಮರೆಯಬೆಕಿದೆ
ಮತ್ತೆ
ಎಲ್ಲ ಮರೆಯಬೆಕಿದೆ
ಈ ಪುಟ್ಟ ಹೃದಯ
ದೀಪಕ್

ಶನಿವಾರ, ಮೇ 28, 2016

ನಿನ್ನದೆ

ಜೀವಂತ ನಿದ್ರೆಗಳ
ಹಾರಿಸಿ
ಸತ್ತ ಕನಸುಗಳ
ಪುನಋಜ್ಜೀವಿಸಿ
ಸನಿಹವಿದ್ದವನನ್ನು
ತೊರೆದು
ಇನಿಯನೆದೆ
ಅಪ್ಪುವೆಯಾ?
ಸವಾಲುಗಳಿವೆ ಭರಪೂರ
ಉತ್ತರ ಹೆಣೆಯುವೆಯ
ಮೆತ್ತನೆ ನುಣುಚುವೆಯ

ಗುರುವಾರ, ಮೇ 26, 2016

ನೆನಪು

ಮೊನ್ನೆ ನೆನಪ
ಬುತ್ತಿಯ ಬಿಚ್ಚಿದೆ
ಹಂಚಿಕೊಳ್ಳಲು,
ಜೊತೆಗೆ
ತೂರಿಕೊಂಡವು
ಕೆಲ ತಾಜಾ ನೆನಪುಗಳು
ದೀಪಕ್

ಬುಧವಾರ, ಮೇ 25, 2016

ಶತ ಮಾನ

ಹೆದರೆದರಿಯೆ ಇಣುಕು
ನೋಟ
ಕದ, ಸಂದಿಗಳಲೆ ಜಗ,
ಅದ್ಭುತ!

ಸಂಕೊಲೆಗಳು
ಮತ್ತೆ...
ಬಿಗಿದು ಕೊಂದವು,
ಗೂಟದ
ಹಗ್ಗ ದೂರವಷ್ಟೆ
ಕ್ರಮಿಸಲವಕಾಶ
ನಂತರ ಪಾಶ!

ಮೂಕ ರೋಧನ ...
ಕೇಳುವವರೆಲ್ಲ
ಏನು ಬೇಕು...
ಬೆಳ್ಳಿ,ವಜ್ರ , ಬಂಗಾರ
ಪಚ್ಛೆ ಮುತ್ತು ರತ್ನ?
ಕೋ,
ವೈಭವಿಸು

ನೀಡುವುದಾದರೆ
ಒಮ್ಮೆ ಮನ ಬಿಚ್ಚಿ
ನಗಲು ಬಿಡಿ
ಬಂಗಾರ ಪಂಜರವ
ತೊರೆಯಬಿಡಿ,
ತೊರೆ ನೀರೆ ಸಾಕೆನಗೆ;
ಕಬಂಧಗಳು
ಹದ್ದು ಕಾವಲು
ಪ್ರಶ್ನೆಗಳ ಸುರಿಮಳೆ
ನನಗೆ ಬೇಡ
ಹಕ್ಕಿಯಂತೆ ಸ್ವಚ್ಚಂದ
ಚಿಲಿಪಿಲಿಸುತ
ಸುತ್ತಬೇಕೀ ಜಗವ
ಮೌನದ ಮಾತು
ಅರ್ಥವಾಯಿತೆ
ನಿಮಗೆ
ಶತ(ಮಾನ)ಗಳಿಂದ
ಕಾಪಿಟ್ಟ ಮಾನವಿದು!
*ದೀಪಕ್

ಮಂಗಳವಾರ, ಮೇ 24, 2016

ಧುತ್

ಧುತ್ತನೆದುರಾದಾಗುಂತಕನ
ನೋಡಿ
ಬೆಚ್ಚುತ ಹೆದರಿ
ಮುದುರಿ ನಲುಗಿ
ಶೋಕಿಸಿ ಹೃದಯ
ವಿದ್ರಾವಕವಾಗುತಿರುವಾಗ
ಅವನೆನ್ನನು ದಾಟಿ
ಮುಂದೆ ಸಾಗಿದ,
ಅವನ ಗುರಿ ಬೇರಿತ್ತು
ಹೃದಯ ಬಡಿತ
ಮರುಸ್ಥಾಪನೆಯಾಯಿತು

ಸೋಮವಾರ, ಮೇ 23, 2016

ಮಾತು ಮೌನಿ

ಮಾತು;ಶಬ್ದಗಳು ವ್ಯಕ್ತಿಯನ್ನು
ಭೆಟ್ಟಿಯಾದವು
ಮೌನ, ನಗೆ ಆವರಿಸಿತು
ಭಗ್ನ ಕನಸುಗಳ
ಹೂತ್ತವಳು ಅಳಲಿಲ್ಲ
ಕಾವ್ಯಕುತ್ತರ
ನೀಡುತ್ತಿದ್ದವನಿಗೆ
ಕೆಲಸವಿರಲಿಲ್ಲ
ಮೌನಿ;
ಸಾವಿರ ಮಾತುಗಳ
ಹೇಳ ಹೊರಟಿದ್ದೆ
ಬಿಗಿದ ಬಂಧಗಳ
ಕೆಂಗಣ್ಣಿಗೆ
ಬೆಚ್ಚಿದ ಶಬ್ದಗಳು
ಮೌನವಾಗಿ
ಹರಿದುಹೋದವು
ಝರಿಯಾಗಿ
ಕಣ್ಣಂಚಿನಿಂದ...

ಶುಕ್ರವಾರ, ಮೇ 20, 2016

ಕ್ಷಮಿಸಿಬಿಡು

ಧನ್ಯವಾದಗಳು
ಹೆಗಲಾಗಿರುವಿ
ತೋಯ್ಸಿದರೆ
ಕ್ಷಮಿಸಿಬಿಡು ಹುಡುಗಿ
ನನ್ನಲಿನ್ನೇನೂ ಉಳಿದಿಲ್ಲ
ನಾನೊಬ್ಬ
ಗುಜರಿ ವ್ಯಾಪಾರಿ
ದೀಪಕ್

ಸುಖವಾಗಿರು

ಸುಖವಾಗಿರು ನೂರ್ಕಾಲ
ನನ್ನ ನೆನೆಯದೆ
ಮರೆತು
ಹಳಿಯದಿರು
ದೂರದಿರು
ಅವಳೆನ್ನ ಮನದನ್ನೆ
ಭಾವುಕತೆ ಅವಳಿಗಿಲ್ಲ
ಎಂದರೆನ್ನಾಯ್ಕೆ
  ಕಠೋರವೇ?

ನನ್ನಾಯ್ಕೆ ಅವಳು
ಅವಳಾಯ್ಕೆ ನಾನು
ಇರಬಹುದಿಂದು
ಬೇರೆ ಬೇರೆ

ಇಹುದೊಳಗೆ
ನೀನೊಬ್ಬಳೇ ನೀರೆ
ಸಮಯದುರುಳಿಗೆ
ಕತ್ತಒಡ್ಡಿರುವೆ
ಕತ್ತರಿ ಕೈಗಳು
ನಿನ್ನ ಬಂಧಿಸಿವೆ
ಸರಿ ತಪ್ಪುಗಳಾಚೆ
ಇರುವ ನಿಷ್ಕಲ್ಮಶ
ಪ್ರೀತಿಯೊಂದಿಗೆ
ನಾ ನಿನ್ನ ಕಾಯುತ್ತಿರುವೆ
ಸಾವೆನಗೆ
ಭಯಹುಟ್ಟಿಸಲಿಲ್ಲ
ಹುಡುಗಿ
ಅಂದೇ ಸತ್ತೆ
ನಾ ನಿನ್ನಿಂದ ದೂರಾಗಿ
ನೀ ನನ್ನಿಂದ ಅಡಗಿ

ನೀ ಮರೆಯಾದೊಡನೆ
ಆಯಿತು
ಹೃದಯಾಘಾತ
ವೈದ್ಯ ಹೇಳಿದ
ಶೇಖಡಾ 100%
ನೆತ್ತರು ಹರಿಯುತಿಲ್ಲ
ಹೃದಯಕೆ
Shhhh...
ಅವರಿಗೇನು ಗೊತ್ತು
ಅಲ್ಲಿ ಹೃದಯವೇ ಇಲ್ಲ
ಅದ ನೀ
ಕದ್ದೋಯ್ದಿರುವೆಯಲ್ಲ
-ದೀಪಕ್

ಸೋಮವಾರ, ಮೇ 16, 2016

ನನ್ನನಿಲ್ದಾಣ

ರೈಲುನಿಲ್ದಾಣ ಹೊಕ್ಕೆ
ಅಲ್ಲಷ್ಟು ಇಲ್ಲಷ್ಟು ಜನ...
ಮೋಡ ಆವರಿಸಿದ ವಾತಾವರಣ,
ಜನರಿದ್ದರು;
ಮರದ ಕೆಳಗೆ ಕುಳಿತಿದ್ದ ಒಬ್ಬ ತಾತನ ಪಕ್ಕ ಖಾಲಿ ಜಾಗ,
ಕುಳಿತೆ
ಅತ್ತ ಹೋದರು ತಾತ ಮೇಲೆದ್ದು ಹೋದರು
ಕಾಂಕ್ರೀಟ್ ನೆಲ ದಿಟ್ಟಿಸಿದಾಗ, ಹೂಗಳು ...
ಹರಡಿ ಕೊಂಡಿದ್ದವು,
ಕೆಲವು ಇನ್ನು ತಮ್ಮ ಬಿಳಿ ಗುಲಾಬಿ ಬಣ್ಣ ಉಳಿಸಿಕೊಂಡಿದ್ದಾರೆ, ಉಳಿದವು ಹಳದಿ ಬಣ್ಣ


ಪಕ್ಕ ಟ್ಯೂಬಿ ಟ್ಯೂಟ್ಯೂಬಿಯಾ ಮರದ ಮೇಲೆ ಕೀಚ್ ಕೀಚ್
ಕೂಗಿದ್ದು ಗಿಳಿ, ಕಾಣಿಸುತ್ತಿರಲಿಲ್ಲ

ನೆಲದ ಮೇಲೆ ಕಪ್ಪಿರುವೆಗಳು ಏನನ್ನೋ ಅರಸುತ್ತ ಕಾರ್ಯನಿರತವಾಗಿದ್ದವು
ಕೆಲಕಾಲ ನನ್ನನ್ನೂ ಶೋಧಿಸಿದವು!
ಅಲ್ಲೊಂದು ಸುಟ್ಟ ಬೀಡಿ
ಹಳದಿ ಎಲೆ ಮಾತ್ರೆಗಳ ಬ್ಯಾಗಡಿ ಅಸಂಖ್ಯಾ ಕಡ್ಡಿಗಳು ಅಲ್ಲಿಯ ಪ್ರಯಾಣಿಕರಿಗೆ ಸಾಕ್ಷಿಯಾಗಿದ್ದವು
ಕೈ ಮರ ಬಿದ್ದಿತು
ನಿಲ್ದಾಣದಲ್ಲಿ ಜೀವ ಸಂಚಾರ
ನಾನು ಲಗುಬಗೆಯಿಂದ ಬರಹಕ್ಕೆ  ಅಲ್ಪವಿರಾಮವಿತ್ತು,
ಬಂಡಿ ಹತ್ತಿದೆ
*ದೀಪಕ್

ಗುರುವಾರ, ಮೇ 12, 2016

ಬಡಬಡಿಕೆ

ಎಲ್ಲೋದ್ಯೋ ನೀ ಹಲ್ಕಟ್ಮಗ್ನೇ
ಬುಲ್ಡೇಹೆಂಡಾನ್ಹೊಟ್ಗ್ ಸುರ್ಕಂಡು
ಜೊತ್ಗಿದ್ನನ್ನ ನೀರ್ನಾಗ್ಬುಟ್ಟು
ಸೆರ್ಗಿನ್ವಾಸ್ನೆಗ್ ಹುಚ್ಚಾಗ್ಬುಟ್ಟು
ಒಂದ್ಮಾತ್ಕೇಳ್ನೀ ಮೇಲ್ಕತ್ದೌನ್
ಕೆಳ್ಗಿಳಿಬೇಕು ಕೆಳ್ಗಿಳ್ದೌನ್ಮತ್ ಇಳಿಲೇಬೇಕು
ಬ್ರಮ್ಮನ್ಬರ್ಹ ಬದ್ಲಾಗಲ್ಲ
ಬದ್ಕಲ್ನಂಬ್ದೌರ್ನೀಬುಡ್ಬ್ಯಾಡ
--ದೀಪಕ್

ಕಣ್ಮುಚ್ ಬಾಯ್ಚುಪ್.
ನನ್ಮಾತ್ಕೇಳು
ಅವ್ರ್ಗೇನ್ಬತ್ತು ನಿನ್ದೊಡ್ಡಸ್ತ್ಕೇಲಿ
ಕೇಮಿಲ್ದೌರ್ಯಾರೌರಿಲ್ಲಿ
ನೋಡ್ದಾಣ್ಣು ಎಲ್ಮರೆಕಾಯಾಗುದ್ರೋಯ್ತದೆ
ಬಂದ್ಕಿತ್ತಿನ್ನೋ
ಅಂತ್ಯೋಳಕಿಲ್ಲ
ನನ್ರುಚಿವೇಷ್ಟನ್ನಾಕಿಲ್ಲ
ತಾನ್ಕೊಳ್ತುಮತ್ತೊ಼ಂದ್ಗಿಡನೀಡ್ತದೆ
ನಾವ್ಕಲಿಬೇಕದ್ನೋಡ್ಕಂಡು
ಜಂಭ
ಸ್ವಂತ್ಕೇದ್ಬಾಲಮುದ್ರುಕ಼ಂಡು
-ದೀಪಕ್

ಹೇಳೇ ಗೆಳತಿ

ಹೇಳೇ ಗೆಳತಿ
ಮೈಲುಗಳಾಚೆಯಿಂದ
ಹೇಗೆ ಕದ್ದೆ
ಅರಿವಿನ
ಅರಿವೆಯನು

ಹೇಳೇ ಗೆಳತಿ
ನಾಜೂಕು ಕಣ್ಣುಗಳಂದವನಡಗಿಸುವ
ಚೌಕಟ್ಟ ಹಿಂದೆ
ನೀ ಹೇಗೆ ಕುಳಿತಿರುವೆ
ಮುನಿಸೇ, ಹಸಿವೆಯೆ
ದುಗುಡವೇ ನಾಚಿಕೆಯೆ
ಜಗದಂಜಿಕೆಯೆ?

ಹೀಗೆ ಬಾ , ನನ್ನೊಂದಿಗೆ ಕೂರು
ಹಸಿವೆಯೆ ಹಣ್ಣು ತಿನ್ನು
ಬೇಡವೇ ಹಾಲು ಕುಡಿ
ಬೇಸರವೆ ಅತ್ತುಬಿಡೆನ್ನೆದೆಗೆ
ಮುಖವಿತ್ತು
ಅವಿಯಾಗಲಿ ಎಲ್ಲ ದುಗುಡ ದುಮ್ಮಾನ

ಈ ದೊಡ್ಡ ನಗುವಿನ ಹಿಂದಿರುವ
ಮೂಕ ರೋಧನ ಮುಚ್ಚಿಡಲಾರೆ ನೀ ನನ್ನಿಂದ
ಅದಕೆ ಇರಬೇಕು
ಎಲ್ಲಾ ಅನ್ನುವರು
ನೀ ಭಾವ ಜೀವಿ
ನಿನ್ನ ಭಾವುಕತೆಯನಿಲ್ಲಿ ಹೇಳು
ಉತ್ತರಾವಿರದಿದ್ದರೂ
ನನ್ನ ಪ್ರೀತಿಯಾಸರೆಯಿದೆ ನಿನಗೆ ಯೋಚಿಸ ಬೇಡ
*ದೀಪಕ್*

ಬುಧವಾರ, ಮೇ 11, 2016

ಮನದ ಮೂಲೆಯಲಿ
ಅನಿವಾರ್ಯದ ಸಂಕೋಲೆಯ
ಬಿಗಿದುಕೊಂಡು
ಬೋರಲು ಬಿದ್ದು
ಮೌನವಾಗಿ ,ರೋಧಿಸುತ್ತಿದೆ
ನಿನ್ನೆಡೆಗಿನ ನನ್ನ ...ಒಲವು...
ಶ್ರೀ ಗೌರಿ

ಕಣ್ರೆಪ್ಮುಚ್ದಾಗೆಲ್ಲ
ನಿಂಗ್ಮುತ್ತಿಕ್ಕಿವ್ನಿ
ನನ್ರೆಪೇಲಡ್ಗಿರೋಳ್ನೀನು
ಸಂಕೋಲೆನ್ಯಾಕ್ಕಡ್ದು
ಈಚೆಗೋಡೋದೀಯೇ
ನೀನೇ ನನ್ಕಣ್ಣಿನ್ರಾಣಿ
ದೀಪಕ್

ಗುಲ್ಲೆಬ್ಸೋ ಗು಼ಂಡ್ನಲ್ನಾನು
ಗುಂಡ್ಕಲುಡ್ಕಂಡು
ನೋವ್ಗೌಸ್ದಿ ಮಾಡ್ಕಂಡು
ಕೊಟ್ದ್ನ ಪಡ್ಕಂಡು
ಸಂಜ್ಗೆ ಬೆಳ್ಗ್ಮರ್ತು
ಬೆಳ್ಗ ಚಂಜಿಮರ್ತು
ನೆತ್ರಾಗ್ಕೈ ಅದ್ಕಂಡು
ಅದ್ರಾಗ್ ಕೊಂಚುಂಡ್ಕಂಡು
ಬದ್ಕೋದೀ ಕನ್ಡಾದ ಕಂದ
ನಮ್ಬಾಸೆ ಗಂಧಾನ
ತಿಳ್ಕೋಬೇಕಂದ್ರೆ ನಿ
ಮುಚ್ಕೊಂಡಪ್ಕಬೇಕಸ್ಟೇ
ನೀತಿಲ್ಲ ರೀತಿಲ್ಲ
ಒಗ್ಳೋದ್ ತೆಗ್ಳೋದಿಲ್ಲ
ಕುಸಿ ಬದ್ಕೇ ನ಼ಂಜೀವ್ನದ್ಪ್ರಾಣ
ಅರ್ಥ್ವಾದ್ರ ನಿನ್ಪುಣ್ಯ
ತೀರ್ಸ್ದೀನೀಮಣ್ರುಣ

ಶುಕ್ರವಾರ, ಮೇ 6, 2016

ಕಾಮನಬಿಲ್ಲು

ಕಾಮನ ಬಿಲ್ಲಿನ ಸಪ್ತವರ್ಣಗಳು ಹೇಳುತ್ತಿದೆ
ನಿನ್ನ ಸೊಗಸಾದ ಪ್ರೀತಿಯ ಭಾವವ
ಬಂದುಬಿಡು ಹುಡುಗ
ಕಾಮನಬಿಲ್ಲಿನ ಮೇಲೆ ಹಾಗೆ ಜಾರಿ
ಕಾಯುತ್ತಿರುವೆನಾ ಇಟ್ಟಕಡೆ
ರಂಗು ರಂಗಿನ ರಂಗವಳ್ಳಿಯ ಚೆಲ್ಲಿ
ಅಶ್ವಿನಿ
ವಲ್ಲಿ ಮೇಲಿನಿಂದ ಕಂಡೆ
ನಿನ್ನ ರಂಗವಲ್ಲಿ
ಮೋಹಿಸಿ
ನಿನ್ನನ್ನು ಕಾಮಿಸಲು
ಬಿಲ್ಲ ಹಿಡಿದು ಜಾರಿದ ರಭಸಕೆ
ಬಿಲ್ಲ ಬಳುಕಿಗೆ
ಇನ್ನೂ ದೂರದೆನಲ್ಲೆ

ಜುಗಲ್ ಬಂಡಿ

ನೀ ಪ್ರೀತಿಯಲ್ಲಿ ಸಾಹುಕಾರ
ಆದರೂ
ನನ್ನ ಒಲವಿಗೆ ಸಾಲಗಾರ
Sri gowri

ನೀ ನನ್ನ ಕನಸುಗಳ ಒಡತಿ
ಆದರೆ
ಇಂದು ಜೀವನದಲ್ಲೂ 
ಇಲ್ಲ ನೀ ಗೆಳತಿ
ನೆನೆದರೂ ಯಾರಿಗೂ ಹೇಳಲಾರೆ
ಅದೆನ್ನೊಡಲ ಬಾವು
ಹೊರಗೆ ಹರಿದಿಲ್ಲ ನಿನ್ನಗಲಿಕೆಯ ನೋವು
ತಲಾಂತರಗಳಿಂದ ನನ್ನೆದೆಯಲಿ ಗೂಡು ಕಟ್ಟಿ
ನಿತ್ಯ ಮರಿಹಾಕುತಿದೆ
ನಿನ್ನ ನೆನಪುಗಳು

ಕಾಲ ಚಕ್ರದ
ಗಾಣದಲಿ  ನೆನಪು ತಿರುಗುತ್ತಿದೆ
ಅದರೆಣ್ಣೆಯ ನಶೆಯಲೆ
ಜೀವನ ನರೆಯುತ್ತಿದೆ ಗೆಳತಿ
ನೀ ನನ್ನ ಕನಸಿನ ರಾಣಿ
ಕನಸುಗಳಲ್ಲಿ ಮಾತ್ರ ರಾಣಿ
Deepak
ನಾ ನಿನ್ನ ಕನಸುಗಳ ರಾಣಿ
ನೀ ನನ್ನ ಕನಸುಗಳ ಸರದಾರ ಕಣೊ
ಎನ್ನ ಹೃದಯದ ಪಿಸುಮಾತೊಮ್ಮೆ ಕೇಳು
ಡವ ಡವ ಎನ್ನುವ ಸದ್ದಿನಲ್ಲಿ
ನಿನ್ ಹೆಸರೇ ಉಲಿಯುತಿದೆ ನೋಡಿಲ್ಲಿ
Naveena
ಹಾಯ್ ನನ್ನ ಹ್ರದಯ
ಛೇಡಿಸುವ
ಹುಡುಗಿ
ಇಂದದನು
ಛೇದಿಸಿದಿಯಲೆ ಭಲೇ
ಕನಸಿನ ರಾಣಿಗಷ್ಟೆ ಕೊರತೆ
ಪದದಲ್ಲಿ ರಾಣಿಯರು ಹಲವಾರು
ಎಲ್ಲ ಲೇಖನಿ ಕುಟ್ಟಿ
ಪದ ಸುಧೆಯ ಹರಿಸುವರು
Deepak

ನಾ ಛೇಡಿಸುವ ಹೃದಯಿ ಅಲ್ಲವೋ
ಪದ ಸುಧೆಯ ಹರಿಸುವ ರಾಣಿಯರಿಗೇ
ನಾ ಮಹಾರಾಣಿ ಕಣೊ
Naveenaa
ರಾಣಿ
ಮಹಾರಾಣಿ ಯುವರಾಣಿಯರೆಲ್ಲ ನೆಪಕೆ ಕಣೆ
ನನ್ನ  ಹುಡುಗಿ ತುಂಬಾ
ಭೋಳೆ ಕಣೆ
ದೀಪಕ್

ಅಂತ್ಯ

ಮಾತುಗಳು ಮರೆಯಾಗಿ,
ಮೌನವೆ ಮನೆ ಮಾಡಿರಲು...
ಹೇ ಹುಡುಗಾ...
ಇಂದ್ಯಾಕೋ ನಮ್ಮಿಬರ,
ಜಗಳಕ್ಕೆ ಅಂತ್ಯ ಬಿದ್ದಾಯ್ತು...
ಪ್ರೀತಿಯೇ ಹೀಗೆ,
ಇದ್ದಾಗ ಒಂದು ರೀತಿ ಭಾವ
ದೂರಾದಾಗ ಹೇಳ ತೀರದ ಅನುಭವ.....

* ಅಶ್ವಿನಿ ಚಂದ್ರಶೇಖರ್ *

ಮಾತು ಅರ್ಥ ಕಳೆದುಕೊಂಡಾಗ
ಮನೆ ಮನ ಮುರಿಯದಿರಲು ಮೌನವಾಗುವುದೆ ಹುಡುಗಿ
ಜಗಳಕೆ ಅಂತ್ಯ ವಿಲ್ಲವೇ
ವಿರಾಮವಷ್ಟೆ ಇದು

ಬದುಕೇ ಹೀಗೆ
ಪ್ರೀತಿಯ ಭ್ರಮೆಯಲ್ಲಿ
ಬಡಬಡಿಸಿದ್ದು
ಪ್ರೆಮ ಸಂಭಾಶಣೆ,
ದುಃಖದ ನಿಟ್ಟುಸಿರು
ಪವಿತ್ರ ಮೌನ
ಕಣ್ಣೀರ ಹನಿಯಾ ಹೆಸರು
ಆನಂದ ಬಾಷ್ಪ !
*ದೀಪಕ್

ಗುರುವಾರ, ಮೇ 5, 2016

ಸೀಮೆ

ಯಾವ ಸೀಮೆಯ
ಹುಡುಗನೋ ನೀನು
ನನ್ನ ಕನಸನ್ನೆಲ್ಲಾ ಕದ್ದು
ಕನವರಿಕೆಯನ್ನಷ್ಟೆ ಬಿಟ್ಟು ಹೋದೆಯಲ್ಲೋ
                                                  ನವೀನ ಧೃತಿ

ಬಯಲುಸೀಮೆಯ
ಹುಡುಗನಾನು
ಕಳ್ಳತನದಿಂದ ಬಲು
ದೂರಕಣೆ
ಸ್ವಲ್ಪ ಹೂರಳಿದರೆ ನೀ
ನಿನ್ನ ಪಕ್ಕದಲ್ಲಿ
ಮಲಗಿರುವೆ ನಾನೇ
ನಿನ್ನ ಕನಸುಗಳ ಸರದಾರ ಕಣೆ

ದೀಪಕ್

ನೀ ಬಯಲು ಸೀಮೆಯ ಹುಡುಗ
ನಾ ಚ೦ಡಿ ಜಗಮೊ೦ಡಿ ಕಣೊ
ನೀ ಕದ್ದ ನನ್ನ ಕನಸುಗಳ
ಎಲ್ಲಿ ಮಾರಿದೆಯೋ...😊
                               ನವೀನಧೃತಿ
ನಾ ಕನಸುಗಳ
ಮಾರುವುದಿಲ್ಲ ಹುಡುಗಿ
ಅರಳಿಸುವೆನು,
ನೋಡು
ನಿನ್ನ ತುಟಿಯಂಚಿನ ನಗುವು
ಅದನ್ನೆ ಹೆಳುತಿಹುದು

ದೀಪಕ್

ಬುಧವಾರ, ಮೇ 4, 2016

ನೆನಪಿನಿಂದ

ತುಳುಕಿದ ಕಣ್ಣ ಹನಿಗೆ
ಏನು ಕಾರಣ ಕೊಡಲಿ
ಮುರಿದ ಕನಸಿಗೆ
ಹೇಗೆ ಮೌನದ ಆಸರೆ ಕೊಡಲಿ...
*
ರೋಧಿಸದಿರು ಹುಡುಗಿ
ಕರ್ಪೂರದಂಥ ನೀ
ಕಣ್ಣೀರ  ಬಿಸಿಗೆ
ಕರಗಿ ಹೋದೀಯೆ
*
ಕಣ್ಣಹನಿ
ಕನಸಿಗಾಸರೆ
ಮೌನ ಮನಸಿನಾಸರೆ
ಕೊಟ್ಟರೆ ಕೊಟ್ಟುಬಿಡು
ಕನಸ
ಕರಗಿಬಿಡು ಈ ನನ್ನ
ಮನಸಲ್ಲಿ
*
ಬೇಡ ಹುಡುಗ ನಿನ್ನ ಪ್ರೀತಿಯ ಬಿಕ್ಕುಗಳು
ನನ್ನೀ ಸಮಾಧಿಯ ಮುಂದೆ
ನಿನ್ನ ಪ್ರೀತಿಗೆ ಯಾವ ಕ್ಷಣದಲಿ ಸೋತು  ಎದ್ದು ಬರುವೆನೋ
ನಿನ್ನ ಮುಂದೆ...
*
ನೀ ಸಮಾಧಿಯೋಳವಿತರು
ನಿನ್ನ ಪ್ರೆಮಾರ್ಥಿಯಾಗಿ
ಹಿಂಬರುವೆ ನಾನು
ಸಮಾಧಿಯ ಹಣತೆಯಾಗಿ
*
ಮುರಿದಾಯಿತು ಮನಸು
ರೋಧಿಸಲು ಇನ್ನೇನಿದೆ ಹುಡುಗ
ನನ್ನ ಕಣ್ಣೀರ ಬಿಸಿಗೆ
ಜೀವವಿಲ್ಲದ ಕರ್ಪೂರವೇ ಕರಗಿದೆ ಎ೦ದಾದರೆ
ಜೀವವಿರುವ ನೀನು ಕರಗಲಾರದೆ ಹೋದೆಯಲ್ಲ
*
ನಾ ಕರಗದಿರುವುದಕೆ
ನೀ ಕರ್ಪೂರದಂತೆಂದು
ತಿಳಿಯಿತು ಜಗಕೆ ಹುಡುಗಿ
ನಾ ಕರಗಿದ್ದರೆ
ನನ್ನ ಕರಿ ರೂಪ
ಎಲ್ಲಿ ನೋಡುತ್ತಿತ್ತು
ಈ ಜಗ
*

ದುಃಖದ ಒಲವು

ದು:ಖದ ಮನೆಯಲ್ಲಿ
ತೋರಣ ಕಟ್ಟಿ ಹಬ್ಬ ಮಾಡಿದ೦ತೆ
ನಿನ್ನೊಲವು ಗೆಳೆಯಾ
ಇತ್ತ ನಗಲೂ ಆಗದೆ ಅತ್ತ ಅಳಲೂ ಆಗದೆ
ಅರ್ಥವಾಗದ ಕ೦ಗಳಲಿ
ನಿನ್ನೊಲವ ಅರ್ಥೈಸ ಹೊರಟಿರುವೆ......
ನವೀನ
ಸುಖದ ಮನೆಯಾವುದುಂಟೆ
ಗೆಳತಿ
ಅಳು ಹುಟ್ಟಿನೊಂದಿಗೆ
ಬರುವ ಉಡುಗೊರೆ
ನಗುವುದ ನಾನೀನು
ಕಲಿಯಬೇಕು
ಕಣ್ಣೊಳು ಕಣ್ಣಿಟ್ಟು ನೋಡು
ನನ್ನ ಒಳಗು ನೀನೆ ಕಾಣುವೆ
ದೀಪಕ್

ತುಳುಕಿದ ಕಣ್ಣ ಹನಿಗೆ
ಏನು ಕಾರಣ ಕೊಡಲಿ
ಮುರಿದ ಕನಸಿಗೆ
ಹೇಗೆ ಮೌನದ ಆಸರೆ ಕೊಡಲಿ...
#

ರೋಧಿಸದಿರು ಹುಡುಗಿ
ಕರ್ಪೂರದಂಥ ನೀ
ಕಣ್ಣೀರ  ಬಿಸಿಗೆ
ಕರಗಿ ಹೋದೀಯೆ
*

ಕಣ್ಣಹನಿ
ಕನಸಿಗಾಸರೆ
ಮೌನ ಮನಸಿನಾಸರೆ
ಕೊಟ್ಟರೆ ಕೊಟ್ಟುಬಿಡು
ಕನಸ
ಕರಗಿಬಿಡು ಈ ನನ್ನ
ಮನಸಲ್ಲಿ
@ಅನಿತಾ

ಹುಣ್ಣಿಮೆ ಅಮಾವಾಸ್ಯೆ

ನಿನ್ನ ಕಣ್ಣಲ್ಲಿ ಸ್ಫುರಿಸುವ
ಒಲವ ಕಾಂತಿಯ
ಚೂರು ಚೂರೇ ಕೊಟ್ಟು ಬಿಡೋ ಇನಿಯ,
ಅಮವಾಸ್ಯೆಯ ಬದುಕಲ್ಲಿ
ಹುಣ್ಣಿಮೆಯ ತುಂಬಿಕೊಳ್ಳುವೆ...
#

ಆಗಿದ್ದರೆ ನಾ ರವಿ
ನೀಡುತ್ತಿದ್ದೆ ನಿನಗೆ
ನಿತ್ಯ ಹುಣ್ಣಿಮೆ ಬೆಡಗಿ,
ನನ್ನ ತನು ಮನ ಧನಗಳ
ನಿನಗರ್ಪಿಸಿದ ಮೇಲೆ
ಇನ್ನೆಲ್ಲಿ ಕಾಂತಿಯ
ನೀಡಲೇ ನಲ್ಲೆ
ಕೋ ಎಂದ ಒಲವ
ನಾ ಹಿಂದಕು ಪಡೆಯಲೊಲ್ಲೆ
ಉದಯಿಸಬೆಕೊಂದು
ನವ ಒಲವ ಕಾಂತಿ
ನೀಡಲು ಹುಣ್ಣಿಮೆಯಾ ದಿನ
*

ಮಂಗಳವಾರ, ಮೇ 3, 2016

ಮೌನಿ ಮಾತು

ಮೌನಿ
ವಿಫಲ ಪ್ರೇಮದ ಹಸಿ ಹಸಿ ಯಾತನೆಗಳು ಬದುಕ ಸಾರವನ್ನೇ ನುಂಗಿರುವಾಗ ನಿಸ್ತೇಜಗೊಂಡ ಕಂಗಳಲಿ ಯಾವ ಭಾವ ಹೊಮ್ಮಿಸಲಿ ಗೆಳೆಯ???
ಮಾತು
ವಿಫಲಗಳು ವಿಫುಲವೆ ಗೆಳತಿ ಫಲ ನೀಡುವ ಮುನ್ನ
ನಂದದಿರಲಿ ಕಂಗಳ ಕಾಂತಿ
ನಮನಂತರವೂ ಅವು ಬೆಳಗಬಲ್ಲವಿತರರನೋವು

ಸೋಮವಾರ, ಮೇ 2, 2016

ಮೀರಿ

ನಾನು ನೀನೆಂಬ
ಭಿನ್ನತೆಯನು ನೀಗಿ
ಇರುವ ಕಾಲವನೆ
ನಮ್ಮದಾಗಿಸಿ
ಹಂಗುಗಳ ಮೀರಿ
ಭಾವಗಳ
ಹಂಚಿಕೊಳಬೆಕು
ನಮ್ಮೊಲವಿನ ನಡುವೆ
ತೊಗಲು
ಮೂಳೆ ಮಾಂಸಗಳೂ
ತೊಡಕಾಗಬಾರದೇ
ಹುಡುಗಿ

ಬ್ಲಾಗ್ ಆರ್ಕೈವ್

Its blog I have created to enter my day to day search & feel like sharing the same with like minded people. I solicit a comment from all my friends.