ಹಗಲುರುಳಿ ಇರುಳಾಗುವುದು ದಿನ
ಕಳವಳಿಸುವುದು ನನ್ನೀ ಮನ
ರಾತ್ರಿ ಮಲಗಬೇಕೆಂಬುದ ನೆನೆದು
ಏಕೆಂದರೆ ನನಗೆ ನಿದ್ರೆ ಕಡಿಮೆ
ಬೆಳಿಗ್ಗೆ ಬೆವರುವವರೆಗೆ ಓಟ
ಕುಡಿಯಲು ನೀರುತಂಬಿಗೆ ಲೋಟ
ದಣಿಯದಿದ್ದರೆ ಇದೆ ದೊಡ್ಡಕಾಟ
ಏಕೆಂದರೆ ನನಗೆ ನಿದ್ರೆ ಕಡಿಮೆ
ರಾತ್ರಿ ಓದಲು ರಾಶಿ ಹೊತ್ತಿಗೆ
ಮಾರಿ ಅವುಗಳ ಎನ್ನುವಳು
ಮಡದಿ ಮೆತ್ತಗೆ
ಜೋರು ಹೇಳಲವಳಿಗಿಲ್ಲ ಗುಂಡಿಗೆ
ಏಕೆಂದರೆ ನನಗೆ ನಿದ್ರೆ ಕಡಿಮೆ
ರಾತ್ರಿ ಮಲಗಲು ಲೋಟಹಾಲು
ಅದರಲೆಚ್ಚು ಗಸಗಸೆಯ ಪಾಲು
ಅದಕಾರೂ ಹಾಕರು ಅಡ್ಡಗಾಲು
ಏಕೆಂದರೆ ನನಗೆ ನಿದ್ರೆ ಕಡಿಮೆ
ಮುಗಿದವೆಲ್ಲ ನಿದ್ರೆಯಸ್ತ್ರ
ಗುಳಿಗೆ ನೋಡು ಕೊನೆಯ ಶಸ್ತ್ರ
ಬೇಗ ಮುಗಿಸಬೇಕದರ ನಿತ್ಯ ಶಾಸ್ತ್ರ
ಏಕೆಂದರೆ ನನಗೆ ನಿದ್ರೆ ಕಡಿಮೆ
ಸನಿಹ ನೀನು ಬರುವೆಯೇನು
ನನ ಕೈಗೆ ತಲೆಕೊಟ್ಟು ಮಲಗುವೆಯೇನು
ನಿನ ಅಪ್ಪಿ ಮಲಗುವೆ ನಾನು
ದೂರವೆಲ್ಲಿ ಹೋದೆನೀನು
ಚಳಿಯಲಿಲ್ಲಿ ಒಂಟಿ ನಾನು
ಅದಕೆ ನನಗೆ ನಿದ್ರೆ ಕಡಿಮೆ
-ದೀಪಕ್ ಭ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ