ಶುಕ್ರವಾರ, ಸೆಪ್ಟೆಂಬರ್ 19, 2025

ಕೆಲಸವಿಲ್ಲದೆ 
ಕಾಲ ಕಳೆವಾಗ 
ಕಾಲದಲ್ಲಿ
 ಹೂತುಹೋಗಿದ್ದ
 ಅವಳ ನೆನಪುಗಳ 
ಒಂದೊಂದೇ
 ಪುಟಿಯ ತೊಡಗಿದವು

ಇದು ಬೇಕೆ ಎಂದಿತು ಒಳ ಮನ
ಅದರ ಮಾತನೆಂದು ಕೇಳಿದ್ದೆ ಎಂದು ಯೋಚಿಸುವಾಗ
ಫೋನ್ ರಿಂಗಣಿಸಿತು
ಕಾಸು ಕೊಟ್ಟು ಕೊಂಡ ಪೀಡೆ
ಎಂದು ಶಪಿಸುತ್ತ ಎತ್ತಿಕೊಂಡೆ
ಹೆಲೋ ಏನು ನೋವೆ?
ಅಯ್ಯೋ ಛ 
ಬನ್ನಿ ನೋಡುವ ಎಂದು ತುಂಡರಿಸುವಾಗ
ಎಲಾ ಕಪಟಿ ಎಂದಿತು ಮನ

ಎಶ್ಟು ಸಮಯದಿಂದ ಬೇಯುತ್ತಿರುವ ನೀನು 
ಇನ್ನೊಬ್ಬರಿಗೆ ಬನ್ನಿ ನೋಡುವ ಎಂದೆಯಲ್ಲ ಎನುವಾಗಾ
ಪಾಪಿ ಹೊಟ್ಟೆ
ವ್ಯಾಪಾರಂ ದ್ರೋಹ ಚಿಂತನಂ
ಎಂದು ತೇಪೆ ಹಚ್ಚಿತು

‌ ರಾತ್ರಿ ಎಚ್ಚರವಾದಾಗ 
ನಿದ್ರೆಗೆ ಜಾರಲು ಹೆಣಗುವಂತೆ
ನೆನಪಿಗೆ ಜಾರಲು ಹೋದೆ,
ಸೋಲು

ಇದೊಂಥರ ಪಿಕಲಾಟ
ಓದಲು ಹೋದರೆ
ಯೋಚನೆಗಳು ಮುತ್ತುತ್ತವೆ
ಅದರ ಬೆನ್ನು ಹಿಡಿಯ ಹೋದರೆ
ನಿದ್ರೆ ಆವರಿಸುತ್ತದೆ
ನಿದ್ರಿಸಲು ಹೋದರೆ 
ಯೋಚನೆಗಳು ಬೆನ್ನು ಹತ್ತುತ್ತವೆ
ಸೋಲು

ಗೆಲ್ಲುವುದು ಕಲಿಯಲೇ ಇಲ್ಲವೆ
ಬದುಕಿನಲ್ಲಿ?
ಹುಟ್ಟಿನಿಂದ ಸಾವಿನವರೆಗೂ
ಇನ್ನೊಬ್ಬರ ಬಿಕ್ಶೆ
ನನ್ನದೇನಿದೆ ಎಂದು ಯೋಚಿಸಹೋದಾಗ
ಮಾತ್ತೆ ಮಾರ್ದನಿಸಿತು-
 ಸೋಲು

ಸೋಲು ನನ್ನ ಆಯ್ಕೆಯೇ?
ಇಲ್ಲ
ನಾನು ಗೆಲುವನ್ನು ಆಯ್ದುಕೊಳ್ಳಲಿಲ್ಲ
ಅದಕ್ಕೆ ಉಳಿದದ್ದು ನನ್ನ ಪಾಲಿಗೆ ಬಂತು
ಅಂದರೆ ಆಯ್ದುಕೊಳ್ಳದೇ ತಟಸ್ಥರಾಗಿರುವುದು ಸೋಲೆ ಎಂದರೆ
ಹೊಉದು 
ಪ್ರಾಣಿ ಜಗತ್ತಿಗೆ ಹೇಗೆ ಸಾಮಾಜಿಕ ನಿಲುವುಗಳು ಅನ್ವಯಿಸದೋ ಹಾಗೆ
ಗೆಲುವಿನ ಜೊತೆಗಿರದವನಿಗೆ ಸೋಲು ಅಂಟಿಕೊಳ್ಳುತ್ತದೆ
ಹೇಗೆ ಬೆಳಕು ಕತ್ತಲೆಯನೋಡಿಸುವುದೋ ಹಾಗೆ



ಶನಿವಾರ, ನವೆಂಬರ್ 9, 2024

ಕೆಲಸದಾಕೆ

ನಿನ್ನೆ ಚಿಕಿತ್ಸಾಲಯ ಮುಗಿಸಿ ರಾತ್ರಿ ಒಂಬತ್ತಕ್ಕೆ ಮನೆಗೆ ಹಿಂತಿರುಗಿದೆ. ಕೆಲವು ವಾರಗಳಿಂದ ಮನೆಯಲ್ಲಿ ಕಸ ಹೊಡೆದು ನೆಲ ಒರೆಸಿ ಪಾತ್ರ ತೊಳೆಯಲು ಮಾಡಲು ಯಾರೂ ಇಲ್ಲ. ಪತ್ನಿ ಉಪ ವೈದ್ಯಾಧಿಕಾರಿ ಯಾಗಿ ಕಾಲೇಜು ಸೇರಿದ ಮೇಲೆ ಇದಿನ್ನೂ ಕ್ಲಿಷ್ಟವಾಯಿತು.
ಪತ್ನಿ ಬೆಳಿಗ್ಗೆ ಅಡುಗೆ ಕೆಲಸ ಮುಗಿಸುತ್ತಾಳೆ ಅಮ್ಮ ಉಳಿದ ಅಡುಗೆ ಮಾಡುತ್ತಾರೆ, ಒಗೆಯುವ ಯಂತ್ರದ ಬಟ್ಟೆಗಳನ್ನು ಒಣಗಲು ಹಾಕುತ್ತಾರೆ. ಸಾಂದರ್ಭಿಕ ಪಾತ್ರೆಗಳನ್ನು ತೊಳೆದು ಕೊಳ್ಳುತ್ತಾರೆ. 

ಅದಕ್ಕೆ ಪರಿಹಾರ ಹುಡುಕುತ್ತಿರುವ ನಾವೆಲ್ಲರೂ ಕಂಡವರಿಗೆಲ್ಲ ಮನೆಕೆಲಸಕ್ಕೆ ಯಾರಾದರೂ ಬೇಕಿತ್ತು ಇದ್ದರೆ ಹೇಳಿ ಎಂದು ಕೇಳುವುದು ಮಾಮೂಲಾಗಿದೆ. ಮನೆ ಸ್ವಚ್ಚವಾಗಬೇಕಲ್ಲ. 
ಯಾರೂ ಸಿಗದಿದ್ದಾಗ, ಮತ್ತೇನು ಮಾಡುವುದು ಪತ್ನಿಯ ಜೊತೆಗೆ ಸೇರಿ ನಾನೂ ನೆಲ ಒರೆಸುವ ಕೆಲಸ ಮಾಡಲು ಶುರುವಿಟ್ಟುಕೊಂಡೆ. ಆಕೆ ಒಂದು ಕಡೆಯಿಂದ ಕಸ ಗುಡಿಸುತ್ತಾ ಹೋದರೆ ಇನ್ನೊಂದು ಕಡೆಯಿಂದ ನಾನು ಕೋಲು ಹಿಡಿದು ನೆಲ ಒರೆಸುವುದು. ಇದ್ಯಾವುದೋ ನೆಲ ಒರೆಸುವ ಬಕೆಟ್,ಅದಕ್ಕೊಂದು ಕೋಲು. ಕೋಲಿಗೆ ದಾರದ ದೊಡ್ಡ ಕುಚ್ಚು. ಬಕೆಟ್ ನೀರಿನಲ್ಲಿ ಅದ್ದಿ ಒತ್ತಬೇಕು ಅದು ನೀರನ್ನು ಹೀರಿಕೊಳ್ಳುತ್ತದೆ, ಪಕ್ಕದಲ್ಲೇ ಒಂದು ಬಟ್ಟಲಿನಾಕರದ ಸ್ಥಳ, ಅಲ್ಲಿ ಒರೆಸುವ ಕೋಲನ್ನಿಟ್ಟು ಒತ್ತಿದರೆ ದಾರದ ಕುಚ್ಚಿರುವ ಭಾಗದಲ್ಲಿರುವ ಬೇರಿಂಗ್ ಸಹಾಯದಿಂದ ಆ ಭಾಗ ತಿರುಗಿ ನೀರು ಹೊರ ಹೋಗುತ್ತದೆ. ಅಂತೂ ಬಗ್ಗಿ ಬಟ್ಟೆಯನ್ನು ಅದ್ದಿ ಹಿಂಡಿ ನೆಲ ಒರೆಸುವ ಕಷ್ಟ ತಪ್ಪಿಸಿ, ಬಗ್ಗದೆ ನೆಲ ಒರೆಸುವ ಹೊಸ ಸೂತ್ರ. ಬಗ್ಗಿ ನೆಲ ಒರೆಸುವ ಬಟ್ಟೆ ಮನೆಯ ಹಳೆ ಲುಂಗಿ, ಬನಿಯನ್, ಸೀರೆಯಾದರೆ, ಈ ನೆಲ ಒರೆಸುವ ಆಯುಧ ಸಾವಿರದ್ದು. ಕೆಳಗಿನ ಬಕೆಟ್ಟಿಗೆ ಎರಡು ಚಕ್ರ ಕೊಟ್ಟರೆ ಕಾಲಿನಲ್ಲಿ ತಳ್ಳಿಕೊಂಡು ನೆಲ ಒರೆಸಿ ಮುಗಿಸಬಹುದು.

 ನಮ್ಮ ಈ ಪಾಡನ್ನು ನೋಡಿದ ವಿಲಾಯತ್ ತಮ್ಮ "ಅಲ್ಲ ಇದಕ್ಯಾಕ್ ಇಷ್ಟು ತಲೆ ಬಿಸಿ ಮಾಡ್ಕೊಂಡಿದಿರ, ನಾನು ಮನೆಯಲ್ಲಿ ಕಸಗುಡಿಸುವ ಯಂತ್ರ ಇಟ್ಕೊಂಡಿದಿನಿ, ನೀನು ಒಂದು ತಗೋ, ರಾತ್ರಿ ಎಲ್ಲ ಮಲಗಿರುವಾಗ ಅದರ ಪಾಡಿಗದು ಎಲ್ಲಾನೂ ಸ್ವಚ್ಚ ಮಾಡತ್ತೆ. ನೆಲ ಕೂಡ ಒರೆಸತ್ತೆ, 15ದಿನಕ್ಕೆ ಒಂದುಸಲ ನೀರು ತುಂಬಿಸಿದರೆ ಆಯ್ತು ತಲೆನೋವು ಇರೋಲ್ಲ" ಎಂದ. 

ಒಂದು ವರ್ಷದ ಹಿಂದೆ, ಹೀಗೆ ಕೆಲಸದವಳು ಇಲ್ಲದಾದಾಗ ಒಂದು ಕಸಗುಡಿಸುವ ಯಂತ್ರವನ್ನು ತರಿಸಿದ್ದೆ. ಅದು ಅಡ್ಡಾದಿಡ್ಡಿ ಒದ್ದಾಡುತ್ತಾ ಕಸಗುಡಿಸಿತು, ಸ್ವಲ್ಪ ನೆಲನು ಒರೆಸಿತು. ಅದರ ಚಕ್ರಕ್ಕೆ ಕೂದಲು ಸುತ್ಕೊಳತ್ತೆ, ಮತ್ತೆ ಅದನ್ನ ತೆಗಿತ ಕೂರಬೇಕು ಎನ್ನುತ್ತಾಳೆ ಹೆಂಡತಿ. ನನಗೆ ತೆಗೆಯಲು ಅಡ್ಡಿಯಿಲ್ಲ, ಆದರೆ ಅದನ್ನು ನಿತ್ಯ ಪರೀಕ್ಷಿಸಿ ಕೂದಲು ತೆಗೆಯೋದಕ್ಕೆ ಅಂತ್ಯ ಇದ್ಯ? ಮಗು ಹುಟ್ಟುತ್ತೆ, ಬೆ ಳೆಯತ್ತೆ, ಉಚ್ಚೆ ಕಕ್ಕ ಮಾಡತ್ತೆ ಅದನ್ನು ಸ್ವಚ್ಚ ಮಾಡ್ತೇವೆ, ಆದರೆ ಅದಕ್ಕೊಂದು ಅಂತ್ಯ ಇದೆ. ಮಗು ಬೆಳೆದು ದೊಡ್ಡದಾಗುತ್ತದೆ, ಅವೆಲ್ಲ ನಿಂತು ಹೋಗತ್ತೆ, ಯಂತ್ರದ ಚಾಕರಿ ಯಾರು ಮಾಡೋದು ಜೀವಮಾನ ಪೂರ್ತಿ, ಅದು ೮೫ಸಾವಿರ ಕಾಸು ಕೊಟ್ಟು, ಯಪ್ಪಾ ನನಗೆ ಕೋಲು ಹಿಡಿದು ನೆಲ ಒರೆಸುವುದೆ ವಾಸಿ ಅನ್ಸತ್ತೆ, ಕಾಸು ಖರ್ಚು ಮಾಡಿ, ಕೂದಲು ಸಿಕ್ಕೊಂಡಿದೆ ತಗಿ ಅಂತ ಯಾರು ಹೇಳಿಸಿ ಕೊಳ್ಳೋದು ದಿನ ಎನ್ನುತ್ತಾ ಅದನ್ನು ವಾಪಸು ಕಳಿಸಿದ್ದಾಗಿತು .
. 

ಕೆಲಸದವಳ ಪುರಾಣ ಇಲ್ಲಿಗೆ ನಿಲ್ಲಲಿಲ್ಲ. ನನ್ನ ಅತ್ತೆ, ಮಗಳ ಫಜೀತಿ ನೋಡಲಾರದೆ, ಮಗಳಿಗೆ ಅನುಕೂಲ ಆಗಲಿ ಎಂದು ಒಬ್ಬಳು ಕೆಲಸದಾಕೆಯನ್ನು ಕರೆದುಕೊಂಡು ಬಂದಿದ್ದರಂತೆ. ನನ್ನಾಕೆ ಕೆಲಸ ಹೇಳುವಾಗ ಸಂಜೆ 5.30ರಿಂದ 8.30ರ ವರೆಗೆ ನನ್ನ ಜೊತೆ ಇರಬೇಕು, ನಾನು ಹೇಳಿದ ಕೆಲಸವನ್ನೆಲ್ಲಾ ಮಾಡಬೇಕು ಎಂದಳು. ಆಕೆ ಆಗಲಿ ಎಂಟು ಸಾವಿರ ಸಂಬಳ ಕೊಡಿ ಅಂದಳಂತೆ. ವ್ಯವಹಾರ ಕುದುರಲಿಲ್ಲ. ಅಲ್ಲ ನಾನು ಹೇಳಿದ ಕೆಲಸ ಎಲ್ಲ ಮಾಡಬೇಕು ಅಂದರೆ ಅಲ್ಲಾವುದ್ದೀನನ ಅದ್ಭುತ ದೀಪವನ್ನೇ ತರಬೇಕು ಅನ್ಸತ್ತೆ. 

 ನಿನ್ನೆ ಮುರಿದುಬಿದ್ದ ಮಾತುಕತೆಯ ಪ್ರಭಾವ, ಅಡುಗೆ ಮನೆಯಲ್ಲಿ ಸಿಂಕ್ ತುಂಬಾ ಪಾತ್ರೆಗಳು, ಒಲೆಯ ಪಕ್ಕ ಅಡುಗೆ ಮಾಡಿದ ಹಿಟ್ಟು, ಸಾರು, ಅನ್ನದ ಪಾತ್ರೆಗಳು, ಹಿಟ್ಟಿನ ಡಬ್ಬಿಗಳು, ಲೋಟಗಳು ಎಲ್ಲವೂ ಕಟ್ಟೆಯ ಮೇಲೆ ಭಯಜನಕವಾಗಿ ರಾರಾಜಿಸುತ್ತಿದ್ದವು. ಇಷ್ಟು ಸಾಲದೆಂಬಂತೆ ಮಗಳು ಕ್ರಾಫ್ಟ್ ಕಾಗದವನ್ನು ಸಣ್ಣ ಸಣ್ಣ ಚೂರುಗಳಾಗಿ ಮಾಡಿ ಮನೆಯಲ್ಲೆಲ್ಲಾ ಹರಡಿದ್ದಳು.  

 ಅಮ್ಮ ಮಲಗುವೆ ಎಂದು ಕೋಣೆ ಸೇರಿದರು. ಪತ್ನಿ ಅಯ್ಯಪ್ಪ ನನ್ ಕೈಯ್ಯಲ್ಲಾಗಲ್ಲ ಎಂದು ಕುಳಿತು ಬಿಟ್ಟಳು. ಎಲ್ಲ ದಿಕ್ಕೂ ಪಾಳು. 

 ನಾನು ಊಟ ಮುಗಿಸಿದೆ. ಮಗಳಮೇಲೆ ಪತ್ನಿ ಗಲೀಜು ಮಾಡುತ್ತೀಯ ಎಂದು ಜೊರು ಮಾಡುತ್ತಿದ್ದಳು. ಆಕೆಗೆ ಸಹಾಯವಾಗಲಿ ಎಂದು, ಕಟ್ಟೆಯ ಮೇಲಿದ್ದ ಡಬ್ಬಗಳನ್ನು ಎತ್ತಿಡಲಾರಂಭಿಸಿದೆ. ಆಕೆ ಬಂದು ಕೈಜೋಡಿಸುವಳು ಎಂಬ ವಿಶ್ವಾಸವಿತ್ತು. ಆಕೆ ಬಂದಳು, ಬಂದವಳೇ ನಿನಗೆ ಎಷ್ಟಾಗತ್ತೋ ಅಷ್ಟು ಮಾಡು ನಾನು
ಮಲಗ್ತೀನಿ ಎಂದು ಹೊರಟು ಹೋದಳು. ಆಕೆಯ ಹಿಂದೆ ಮಗಳು ಹೋಗಿದ್ದು ನನ್ನ ಪುಣ್ಯ ಇರಬೇಕು, ಅಪ್ಪ ನಾನ್ ಸಹಾಯ ಮಾಡಲಾ ಅಂತ ನಿಲ್ಲಲಿಲ್ಲ.

ಸಿಟಿ ಬಸ್ ನ ಫುಟ್ ಬೋರ್ಡ್ ಪ್ರಯಾಣಿಕರು ಪೊಲೀಸರು ಹಿಡಿಯುತ್ತಾರೆ ಎಂದು ಒಳ ಹೋಗಿ ಕುಳಿತುಕೊಳ್ಳುವ SP ಸಾಂಗ್ಲಿಯಾನ ಚಲನಚಿತ್ರದಂತೆ ಎಲ್ಲ ಡಬ್ಬಗಳು ಒಳ ಸೇರಿದವು. 
ಒಲೆಗಳ ಮೇಲಿರುವ ಅಡ್ಡಣಿಗೆಗಳನ್ನು ತೆಗೆದು, ಒಂದು ಹಸಿ ಬಟ್ಟೆಯಲ್ಲಿ ಒರೆಸಿದೆ. ಬೆಳಿಗ್ಗೆ ಮಾಡಿದ್ದ ರೊಟ್ಟಿ, ಸಾರು, ರಾತ್ರಿಯ ಮುದ್ದೆ, ಹುರುಳಿಕಾಳು ರುಚಿ ನೋಡಿದ್ದ ಒಲೆ ಹಾಗೂ ಕಟ್ಟೆಗಳು ಹಠಕ್ಕೆ ಬಿದ್ದವು. ತ್ರಿವಿಕ್ರಮನಂತೆ ಅಲ್ಲೇ ಇದ್ದ ಪಾತ್ರೆಗುಂಜು ಜೊತೆಗೆ ಸ್ವಲ್ಪ ಸಾಬೂನು ತೆಗೆದುಕೊಂಡು ಎಲ್ಲವನ್ನೂ ಉಜ್ಜಿ ತೆಗೆದೆ. ಒಲೆಯ ಬರ್ನರ್ ಗಳನ್ನೂ ಎತ್ತಿ ಸ್ವಚ್ಚ ಮಾಡಿದೆ. ಸಾಕಷ್ಟು ಹಳೆಯ ಕರಕಲು ಸರಕಿತ್ತು.
 
ನಂತರ ಅಖಂಡ ಪಾತ್ರೆಗಳ ಜೊತೆ ಯುದ್ಧಸಾರಿ ಹೊಡೆದಾಡಲು ಸಜ್ಜಾದೆ. ಎಲ್ಲಿಂದ ಆರಂಭವೋ... ಎನ್ನುತ್ತಾ ಎಲ್ಲ ದೊಡ್ಡ ಪಾತ್ರೆಗಳು, ಕುಕ್ಕರ ಗಳನ್ನು ತೆಗೆದು ಪಕ್ಕಕ್ಕಿಟ್ಟು,, ತಟ್ಟೆಗಳನ್ನು ಉಜ್ಜಿ ಬೆಳಗಿದೆ. ನಂತರ ಅನ್ನದ ಕೈ, ಸಾರಿನ ಕೈ, ಪಲ್ಯದ್ದು, ಚಮಚೆಗಳು, ಬಟ್ಟಲುಗಳು, ಎನ್ನುತ್ತಾ ಎರಡನೇ ಹಂತದಲ್ಲಿ ತೊಳೆದು ಮುಗಿಸಿದೆ. ಮೂರನೆಯ ಹಂತದಲ್ಲಿ ಕುಕ್ಕರ್ ಗಳು, ಅದರ ಗ್ಯಾಸ್ಕೆಟ್, ಮುಚ್ಚಳ, ವೇಯ್ಟ್ ತೊಳೆದೆ. 
ನಾಲ್ಕನೇ ಸುತ್ತಿನಲ್ಲಿ ಮುದ್ದೆ ಮಾಡಿದ್ದ ಪಾತ್ರೆ, ಹಾಲಿನ ಪಾತ್ರೆ ಹಾಗೂ ಸಿಂಕಿನಲ್ಲಿ ಉಳಿದಿದ್ದ ಎಂಜಲು ಎಲ್ಲವನ್ನೂ ತೆಗೆದು ಮುಸುರೆ ಡಬ್ಬಿಗೆ ಹಾಕಿದೆ ಹಾಗೂ ಅವನ್ನೂ ಎರಡೆರಡು ಬಾರಿ ತೊಳೆದೆ. 

 ನಿಂತಿದ್ದ ಜಾಗ ಕೆಳಗಡೆ ಪೂರ್ತಿ ಬಚ್ಚಲಿನಂತಾಗಿತ್ತು. 
ಒಂದು ಸ್ವಚ್ಚವಾದ ವಸ್ತ್ರವನ್ನು ತೆಗೆದುಕೊಂಡು ಎಲ್ಲ ಚಮಚಗಳನ್ನು ಸೌಟುಗಳನ್ನು ಒರೆಸಿ, ಕಟ್ಲರಿಗೆ ಸೇರಿಸ ಹೋದರೆ, ಯಾರೋ ಮಾಟ ಮಂತ್ರ ಮಾಡಿಬಿಟ್ಟ ಹಾಗೆ ಅಲ್ಲಿ ಸಾಸಿವೆ, ಒಣಗಿದ ಅನ್ನ, ಹರಿಷಿನದ ಪುಡಿ ಇದೆ. 
ಅಲ್ಲಿದ್ದ ಎಲ್ಲ ಸಾಮಾನುಗಳನ್ನು ಹೊರಗಿಟ್ಟು, ಕಟ್ಲರಿಯನ್ನು ಬಟ್ಟೆ ತೆಗೆದುಕೊಂಡು ಒರೆಸಿದೆ. ನಂತರ ಚಮಚೆಗಳು ಒಂದುಕಡೆ, ಸೌಟುಗಳು ಒಂದುಕಡೆ ಮುದ್ದೆ ಕೋಲು, ಲಟ್ಟಣಿಗೆ, ಮರದ ಚುಂಚಕ ಒಂದುಕಡೆ, ಚಾಕು ಕತ್ತರಿ, ಸೋಸುವುದು, ಕುಟ್ಟುವ ಕಲ್ಲು, ಕುಕ್ಕರ್ ವೇಯ್ಟ್ ಒಂದುಕಡೆ ಜೋಡಿಸುತ್ತಾ, "ನಾನು ಇದನ್ನು ಮಾಡೋಕೆ ಶುರು ಮಾಡಿದರೆ, ನನ್ನ ಶಿಸ್ತಿನ ದೆಸೆಯಿಂದ ಮನೆಯಲ್ಲಿ ಎಲ್ಲರಿಗೂ ಪೀಕಲಾಟ ಅನ್ಸತ್ತೆ" ಎಂದುಕೊಂಡು ಮುಂದುವರಿದೆ. ನೋಡ ನೋಡುತ್ತಲೇ ತೊಳೆದ ಎಲ್ಲ ಪಾತ್ರೆಗಳು ಆಧುನೀಕರಣ ಗೊಂಡಿರುವ ಅಡುಗೆ ಮನೆಯ ಎಲ್ಲಾ ಮೂಲೆಗಳಲ್ಲೂ ಅಡಗಿಕೊಂಡು ಕುಳಿತವು. 

 ಸಿಂಕ್ ಕೆಳ ಭಾಗದಲ್ಲಿ ನೀರಿದ್ದದ್ದನ್ನು ಒಂದು ಬಟ್ಟೆ ಯಲ್ಲಿ ಒರೆಸಿದೆ. ಕಾಲು ಕಪ್ಪು ಬಣ್ಣ ವಾಗಿತ್ತು. ಪೊರಕೆ ತೆಗೆದುಕೊಂಡು ಅಡಿಗೆ ಮನೆಯನ್ನು ಗುಡಿಸಿದೆ, ಸಮಾಧಾನ ವಾಗಲಿಲ್ಲ, ಮತ್ತೆರಡು ಬಾರಿ ಗುಡಿಸಿದೆ. ಹೊರ ಬಂದರೆ ಡೈನಿಂಗ್ ಟೇಬಲ್ ಮೇಲೆ ಒಂದು ರಾಶಿ ಸಾಮಾನುಗಳು! ಎಲ್ಲವನ್ನೂ ಸ್ವಸ್ಥಾನ ಸೇರಿಸಿ, ಡೈನಿಂಗ್ ಹಾಲ್, ಹಾಗೂ ಹಾಲ್ ಗಳ ಕಸ ಗುಡಿಸಿದೆ. ನೆಲ ಒರೆಸ ಬಹುದು ಎನಿಸಿದರೂ, ಸ್ವಲ್ಪ ಜಾಸ್ತಿನೇ ಆಯ್ತು ಕೆಲಸ, ಆಗಲೆ ರಾತ್ರಿ ೧೨.೩೦ ಆಗಿದೆ ಎಂದುಕೊಂಡು ಹೋಗಿ ಮಲಗಿದೆ. ಸ್ವಲ್ಪ ಬೆನ್ನು ನೋಯುತ್ತಿತ್ತು.

ಇಷ್ಟೆಲ್ಲಾ ಮಾಡಿದ ಮೇಲೆ ನನಗೆ ಪತ್ನಿಯ ಮೇಲೆ ಮರುಕ ಹುಟ್ಟಬೇಕಿತ್ತು, ಪಾಪ ದಿನ ಇವನ್ನೆಲ್ಲ ಮಾಡ್ತಾಳೆ ಅಂತ, ಆದರೆ ನನಗೆ, ಇದೇನ್ ಮಹಾ ಕೆಲಸ ಅಂತ ಎಂಟು ಸಾವಿರ ಕೇಳಿದಳು ಆ ಕೆಲಸಕ್ಕೆ ಬಂದವಳು ಎನಿಸಿತು ಹಾಗೂ ನಿತ್ಯ ಇದನ್ನೇ ಮಾಡಿದರೆ ವ್ಯಾಯಾಮ, ನಡಿಗೆ ಇವೆಲ್ಲಕ್ಕಿಂತಲೂ ಉತ್ತಮ ದೈಹಿಕ ಶ್ರಮ ಎನಿಸಿತು. 

ಬೆಳಿಗ್ಗೆ ಎದ್ದು ಅಡುಗೆ ಮನೆಗೆ ಹೋದಾಗ ನೀ ಮಾಡಿದ್ದು ಸಹಾಯ ಆಯ್ತು ಅಂತ ಹೇಳ್ತಾಳೆ ಪತ್ನಿ ಅಂದು ಕೊಂಡರೆ, ರಾತ್ರಿ ಬರ್ನರ್ ಕ್ಲೀನ ಮಾಡಿದೆಯಾ ಉರಿತಿಲ್ಲ ಅನ್ನೋ ಪ್ರಶ್ನೆ ಎದುರಾಗೋದೆ. ಸರಿ ಬಿಡು ಎಂದು ತಿಂಡಿ ತಿಂದು ಚಿಕಿತ್ಸಾಲಯ ತಲುಪಿದ ಮೇಲೆ ಅಮ್ಮ ಕರೆ ಮಾಡಿದಾಗ , ನೀನು ಕ್ಲೀನ್ ಎಷ್ಟು ಚೆನ್ನಾಗಿ ಮಾಡಿದೆಯಾ ಅಂದರೆ ತಿಂಡಿ ತಿಂದಾದ ಮೇಲೂ ಅಡುಗೆ ಮನೆಯಲ್ಲಿ ಯಾವ ಕಸ ಕೊಳೆನು ಇಲ್ಲ ಎಂದು ಹೇಳಿದರು.

ಇಲ್ಲಿ ಸಮಸ್ಯೆ ಏನು ಎಂದು ಅರ್ಥವಾಗುತ್ತಿಲ್ಲ. ನಮ್ಮ ಮನೆಯ ಕೆಲಸಗಳನ್ನು ನಾವು ಮಾಡಿಕೊಳ್ಳಲಾಗದಷ್ಟು ಕೆಲಸವಿದೆಯೆ ನಮಗೆ? ಇನ್ನೊಬ್ಬರು ಬಂದು ಕೆಲಸ ಮಾಡಿಕೊಟ್ಟರೆ ನನ್ನ.ಮನೆ ನಡೆಯುತ್ತದೆ , ಇಲ್ಲದಿದ್ದರೆ compromised ಜೀವನ ಮಾಡಬೇಕೆ? ನಾವು ಸ್ವಾವಲಂಬಿಗಳಾಗುವುದು ಯಾವಾಗ ಎಂದೆಲ್ಲ ಪ್ರಶ್ನೆಗಳು ಮೂಡಿದವು. 

ಇಷ್ಟೆಲ್ಲಾ ಆದ ಮೇಲೆ ಚಿಕಿತ್ಸಾಲಯದಲ್ಲಿ ಸಹಾಯಕಿ ನ್ಯಾಯಾಲಯದಲ್ಲಿ ಯಾವುದೋ ದಾವೆ ಇದೆ ಎಂದು ಕೆಲಸಕ್ಕೆ ಚಕ್ಕರ್. ಇಲ್ಲೂ ನನದೇ ಕೆಲಸ. ನನ್ನ ಕೆಲಸ ನಾನು ಮಾಡಿಕೊಳ್ಳುವುದಕ್ಕೆ ನನಗೆ ಯಾವ ಬೇಸರವೂ ಇಲ್ಲ.

ನನ್ನ ಮಗಳ ಶಾಲೆಯಲ್ಲಿ ಅರಿವು ಹಬ್ಬ ಎಂದು ಎಲ್ಲ ಪೋಷಕರು ಸೇರಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡುತ್ತಾರೆ. ಅಲ್ಲಿಯ ನಾಟಕದಲ್ಲಿ ಭಾಗವಹಿಸಿದ್ದ ನನಗೆ, ಅವರು ಸಂಗೀತ, ಹಾಡು, ರಂಗ ಪರಿಕರಗಳು ಯಾವುದಕ್ಕೂ ಇನ್ನೊಬ್ಬರ ಮೇಲೆ ಅವಲಂಬಿತರಾಗುವುದಿಲ್ಲ. ಎಲ್ಲವನ್ನೂ ನಾಟಕ ಮಾಡಲು.ಮುಂಬರುವ ಪೋಷಕರೇ ನಿವಾರಿಸಿಕೊಳ್ಳಬೇಕು. ಅಲ್ಲಿ ಪಾತ್ರಧಾರಿ ಕಚ್ಚೆ ಉಡುವ ಸಂದರ್ಭವಿದ್ದರೆ, ಕಚ್ಚೆ ಉಡಿಸುವುದಿಲ್ಲ, ಉಡುವುದನ್ನು ಕಲಿಸುತ್ತಾರೆ. ಹಾಗೆ ನನ್ನ ಮನೆಯಕೆಲಸ ನಾನೇ ಮಾಡಿಕೊಳ್ಳುವ ಎಂಬ ದೃಢ ಸಂಕಲ್ಪಕ್ಕೆ ನಾಂದಿಯಾಯಿತು ನಿನ್ನೆಯ ರಾತ್ರಿ. 
ಅದಕ್ಯಾವ ಯಂತ್ರವೂ ಬೇಡ, ಏನೂ ಬೇಡ, ಕೆಲಸ.ಮಾಡುವ ಮನವಿರಬೇಕು, ಉಳಿದದ್ದೆಲ್ಲಾ ಆಗುವುದು.

ಕೆಲಸದಾಕೆಯ ಬವಣೆ ಗಳೂ ತುಂಬಾ ಇರುತ್ತವೆ. "ಅವರ ಮನೆಯಲ್ಲಿ ಕೆಲಸ ಜಾಸ್ತಿ", "ಕಸ ತುಂಬಾ ಇರತ್ತೆ", "ತಿಂಡಿ ಕೊಡಲ್ಲ", "ರಜೆ ಕೊಡಲ್ಲ", "ಸಂಬಳ ಸಾಕಾಗಲ್ಲ", "ಗಂಡ ಹೋಗಬೇಡ ಅಂತಾನೆ", "ಮನೆ ದೂರ" ಹೀಗೆ. 
ಅವರ ಅವಶ್ಯಕತೆ ಹಾಗೆ ಇರುತ್ತವೆ. ಬಡ್ಡಿ ರಹಿತ ಸಾಲ, ಮುಂಗಡ ಹಣ, ದಿನವೂ ತಿಂಡಿ, ಊಟ, ಹಬ್ಬ ಹರಿದಿನಗಳಲ್ಲಿ ವಿಶೇಷ ಸತ್ಕಾರ, ಉಡುಗೊರೆ.  

ಅವರನ್ನು ನಮ್ಮೊಡನೆ ನಾವು ಹೋಗುವ ಪ್ರವಾಸಗಳಿಗೂ ಕರೆದುಕೊಂಡು ಹೋಗಬೇಕು ಎನಿಸುತ್ತದೆ. ಆದರೆ ಇಲ್ಲಿಯವರೆಗೂ ಅದಕ್ಕೆ ಭಾಜನರಾಗುವಂತಹ ಕೆಲಸದವರು ಸಿಕ್ಕಿಲ್ಲ. 

ಇನ್ನೊಂದು ಮನೆ ಕೆಲಸಕ್ಕೆ ಯಾವಾಗಲೂ ಸ್ತ್ರೀಯರೇ ಬರುವುದು, ಕೆಲಸ ಮಾಡಿಸಿಕೊಳ್ಳುವವರೂ ಸ್ತ್ರೀಯರೇ.

 ನನ್ನ ಚಿಕಿತ್ಸಾಲಯದಲ್ಲಿ ಕಳೆದ ಇಪ್ಪತ್ನಾಲ್ಕು ವರ್ಷದಲ್ಲಿ ಸಾಕಷ್ಟು ಕೆಲಸದವರು ಬಂದು ಹೋದರು, ಅವರಲ್ಲಿ ಎಲ್ಲರೂ ಸ್ತ್ರೀಯರೇ ಹಾಗೂ ಒಬ್ಬ ಹೈ ಸ್ಕೂಲ್ ಬಾಲಕ ಚಿಕಿತ್ಸಾಲಯದ ಕೆಲಸ ಹೇಗಿರುತ್ತದೆ ಎಂದು ನೋಡಲು ಮೂರು ತಿಂಗಳು ಕೆಲಸ‌ ಮಾಡಿದ್ದ. ಇಂದು ಆತ ಒಳ್ಳೆಯ ಹಣಕಾಸು ಸಂಸ್ಥೆಯಲ್ಲಿ ವ್ಯವಸ್ಥಾಪಕ ನಾಗಿ ಕೆಲಸ ಮಾಡುತ್ತಿದ್ದಾನೆ. 

ಮುಂಬೈ ಬೆಂಗಳೂರಿನಂತಹ ನಗರಗಳಲ್ಲಿ ಮನೆ ಕೆಲಸ ಮಾಡುವವರನ್ನು ನಿರ್ವಹಿಸುವ ಸಂಸ್ಥೆಗಳು ಇವೆಯಂತೆ. ಅವರು ಗ್ರಾಹಕರಿಂದ ಇಂತಿಷ್ಟು ಎಂದು ಪಡೆದು, ಅವರಿಗೆ ಕೆಲಸದವರನ್ನು ಒದಗಿಸುತ್ತಾರಂತೆ. ಇದರ ಸತ್ಯಾಸತ್ಯತೆ ತಿಳಿಯದು.

ಅದೆಲ್ಲ ಏನೇ ಆಗಲಿ ನಮ್ಮ ಮನೆ ಕೆಲಸಗಳನ್ನು ನಾವು ಮಾಡಿಕೊಳ್ಳುವುದು ಕ್ಷೇಮ. ಮತ್ತೊಬ್ಬರ ಮೇಲೆ ಅವಲಂಬಿತ ರಾಗುವುದು ನಮಗೆ ಶ್ರೆಯಸ್ಸಲ್ಲ.

ಬುಧವಾರ, ಜುಲೈ 24, 2024

ಬಜೆಟ್

ಮಾಡುತ್ತಾರೆ ಹಲ್ವಾ
ಬಜೆಟ್ ಗೆ ಮುನ್ನ  ,

ಜನ ಯೋಜಿಸಿದ್ದರು  ಆಗುತ್ತದೆ ಹಲವು ಸುಂಕಗಳ ಮನ್ನಾ,

ರಿಯಲ್ ಎಸ್ಟೇಟ್ ಗೆ ಕೊಟ್ಟರು ಇಂಡೆಕ್ಸೆಷನ್ ಗುನ್ನ

ಸುಂಕವಿಳಿಸಿ ಎಂದರು ನೀ ಕೊಳ್ಳು ಚಿನ್ನ ಚಿನ್ನ
ದೀಪಕ್ ಭ

ಗುರುವಾರ, ಜೂನ್ 8, 2023

ಶಾಯಿ

ಒರೆಸಿಬಿಡು ಅಳಿಸಿಬಿಡು ಗುರುತಿರದ ಹಾಗೆ, ಹುಡುಕಿದರು ಕೆದಕಿದರು ಮತ್ತೆ ಸಿಗದಹಾಗೆ, ದಂಡವಾದದು ಮತ್ತೆ ನೆನಪಾಗದ ಹಾಗೆ -DEEPAK

ಮಂಗಳವಾರ, ಜನವರಿ 17, 2023

ನಮ್ಮ ಶಕ್ತಿಯ ನಾವರಿತಿರಬೇಕು



ಆನೆ ಇರುವೆ ಜಿದ್ದಿಗೆ ಬಿದ್ದವು
ಯಾರು ಬಲಶಾಲಿ ಎಂದು

ಆನೆ ಸೋಂಡಿಲಲಿ 
ಮರದ ಕೊಂಬೆ  ಮುರಿಯಿತು
ಕಲ್ಲಲಿ ಕಾಲ್ಚೆಂಡಾಡಿತು

ಇರುವೆ ತಣ್ಣಗೆ 
ತನಗಿಂತ ಮೂರು ಪಟ್ಟು
ಭಾರವ ಹೊತ್ತು
ಆನೆಯ ಸೋಲಿಸಿತು

ಶುಕ್ರವಾರ, ಸೆಪ್ಟೆಂಬರ್ 9, 2022

Complete man

ಬೆಳಿಗ್ಗೆ ನನ್ನ ಫ್ರೆಂಡ್ ಹತ್ರ ಮಾತಾಡ್ತಾ complete man  ಅಂದ್ರೆ ಏನು? ಅಂತ ಕೇಳಿದೆ. ಅವನು raymond ಬಟ್ಟೆ ಉಟ್ಟರೆ complete man ಅಂದ:-)😂.  
ಈ complete man complete man ಅಂತ ಕೇಳ್ತೀವಿ ಆದ್ರೆ  complete woman ಅಂತ ಕೇಳಲ್ಲ ಬದಲಿಗೆ woman of substance ಅಂತ ಕೇಳ್ತೀವಿ. 

  ಹೆಂಗಸರೆಲ್ಲ complete ಗಂಡಸರೆಲ್ಲ incomplete ಹಾಗೂ complete  ಅಗೋದಕ್ಕೆ ಮದುವೆ ಆಗೋದು ಅಂತಲೂ ಕೇಳಿದ್ದೆ. 😁
 ಅಮ್ಮ ಅಡಿಗೆ ಮಾಡುತ್ತಿದ್ದರು, 😊ಮದುವೆಯಾದ ಮೇಲೆ ಹೆಂಡತಿ ಅಡಿಗೆ ಶುರು ಮಾಡಿದಳು,😋 ಮೊದಮೊದಲು ಬಾಯಿಮಾತಿಗೆ ಸಕತ್ ಸೂಪರ್ ಅಂತ ತಿಂದು, ಒಂದು ವರ್ಷದೊಳಗೆ ಅಮ್ಮನ ಕೈರುಚಿ ಬೇಕು ಅನ್ನೋ ಹಂಬಲ ಶುರುವಾಗತ್ತದೆ. 😑
 ಅಮ್ಮನ ಕೈರುಚಿ ನೆನಸಿಕೊಂಡು ಮನೆಯ ನೆಮ್ಮದಿ ಕಳೆದುಕೊಂಡಿರುವವರಿದ್ದಾರೆ,😶 ಸಿಗುತ್ತಿದ್ದ ಊಟ ಕಳೆದುಕೊಂಡವರಿದ್ದಾರೆ, 🤐ಸೋಡಾ ಚೀಟಿ ಪಡೆದುಕೊಂಡ ನತದೃಷ್ಟರೂ ಇದ್ದಾರು. ಅದಕ್ಕೆ ಬೇಗ ತಲೆ ಓಡಿಸಿ ರೆಸ್ಟೋರೆಂಟ್ ಗಳು, ಫಾಸ್ಟ್ ಫುಡ್, ದರ್ಶಿನಿ, ಸ್ಟ್ರೀಟ್ ಫುಡ್, ಮಲ್ಟಿ ಕ್ಯೂಸಿನ್, ಸ್ವಿಗ್ಗಿ, ಝೋಮ್ಯಾಟೋ, ಪಿಜ್ಜಾ ಹೀಗೆ ಹತ್ತು ಹಲವು ಆಚೆ ತಿನ್ನುವ ಸಂಸ್ಕೃತಿ ಬೆಳೆಯಿತು. ನಾವಿರೋದು cephalic era ಅಲ್ಲವೇ?
🤨ಹಣ ಪೀಕಬೇಕಾದ ಗಂಡಂದಿರಲ್ಲಿ ಕೆಲವರು ನಾವೇ ಅಡಿಗೆ ಮಾಡಿ ತಿನ್ನುವುದು ಎಲ್ಲದಕ್ಕಿಂತ ಕ್ಷೇಮ🤩 ಶ್ರೇಯ ಎಂದು ಅಡಿಗೆಮನೆಗೆ ಅಡಿಯಿತ್ತು , ಸೌಟನ್ನು ಹಿಡಿದು, ಕಂಪ್ಲೀಟ್ ಮ್ಯಾನ್ ಆಗುವತ್ತ ಹೆಜ್ಜೆ ಇಟ್ಟ. 🤗
ಅಡಿಗೆ ಮಾಡಲು ಇರುವ ದೊಡ್ಡ ತೊಡರುಗಾಲು ತಾಯಿಯಿಂದ ಹರಿದು ಬಂದಿರುವ ರೂಢಿಯ ಅಡುಗೆಗಳ ರೆಸಿಪಿ ತಿಳಿಯದ ಮ್ಯಾನ್, ಗೂಗಲ್ ತಾಯಿಯಬಳಿ ರೆಸಿಪಿ ಕೇಳಿ ಅಡುಗೆಯಾರಂಭಿಸಿದ ಕಂಪ್ಲೀಟ್ ಆಗಲು. 🤑
complete woman ಆದ ಹೆಂಡತಿ, ಅಯ್ಯೋ ನೀನು ಅಡಿಗೆಮನೆಯನ್ನೆಲ್ಲ ಗಲೀಜು ಮಾಡ್ತಿಯ,😥 ಇರೋ ಎಲ್ಲ ಪಾತ್ರೆನೂ ಉಪಯೋಗಿಸಿ ಗುಡ್ಡೆ ಹಾಕ್ತೀಯ, 😫ಅಂತ ಕಂಪ್ಲೀಟ್ ಆಗಲು ಬಿಡಲೇ ಇಲ್ಲ. ಈ ಹಂತದಲ್ಲಿ ಕೆಲವರು ಡ್ರಾಪ್ ಔಟ್ ಆಗುತ್ತಾರೆ. ಛಲ ಬಿಡದ ಕೆಲವರು, ಅಡುಗೆಯನ್ನು ಮಾಡಿ, ಪಾತ್ರೆಗಳನ್ನು ತೊಳೆದು ಕಂಪ್ಲೀಟ್ ಆಗುವತ್ತ ಹೊರಡುತ್ತಾರೆ. 😏
"ಅಯ್ಯೋ ಪ್ಯಾಂಟ್ರಿ ಯಲ್ಲಿ ಅಷ್ಟೊಂದ್ ಪಾತ್ರೆ ಎತ್ತಿಡೋರ್ಯಾರು" 🙄ಅಂತ ಹೇಳುವ ಪತ್ನಿ ಮತ್ತೆ ಗಂಡಿಗೆ ನೀನು incomplete ಎಂಬ ಸಂದೇಶ ನೀಡುತ್ತಾಳೆ. 😔
ಛಲಬಿಡದ ಆತ😝  ಆ ಎಲ್ಲ ಪಾತ್ರೆಗಳನ್ನು ಅಡಿಗೆ ಮನೆಯ  ಎಲ್ಲ ಡ್ರಾ ಗಳಲ್ಲಿ ತುಂಬಿಸಿ ಕಂಪ್ಲೀಟ್ ಆದೆ ಎಂದು  ಬೀಗುವ ಮುನ್ನವೇ, 🙃
"ಅಯ್ಯಯ್ಯೋ ಇದನ್ನ ಬಲಗಡೆ ಇಡಬೇಕು,😥 ಆದನ್ನ ಮೇಲ್ಗಡೆ ಇಡಬೇಕು,😓 ಅಯ್ಯೋ ಅದು ನಾಯಿ ಬಟ್ಟಲು ಆಚೆ ಇಡಬೇಕಿತ್ತು,😫 ಇದು ಕಟ್ಲೇರಿನಲ್ಲಿಡಬೇಕು,😪 ಅದು ಕ್ರಾಕಾರಿ ಯೂನಿಟ್ ನಲ್ಲಿ , 😲ಇದೆಲ್ಲ microwavable ಇದನ್ನ  ಪ್ರತ್ಯೇಕವಾಗಿ ಇಡಬೇಕು☹️, ನಿಮಗ್ಯಾರು ಹೇಳಿದ್ರು ಇದನ್ನೆಲ್ಲ ಮಾಡೋಕೆ ?" 😠
ಅಂತ ಗಂಡಸರನ್ನು  ಸಂಪೂರ್ಣ ನಿಷ್ಪ್ರಯೋಜಕ, ಅಡಿಗೆಮನೆಯ ಜ್ಞಾನವಿಲ್ಲ ಎಂದು ಜರೆದು ಬಿಡುವರು. 😵
ಹೌದು, ತಲತಲಾಂತರಗಳಿಂದ ತಾಯಿ , ಅಜ್ಜಿ, ಮುತ್ತಜ್ಜಿ, ಅತ್ತೆ, ನಾದಿನಿ ಹೀಗೆ ಹಲವಾರು ಸ್ಥರಗಳಿಂದ ಎಲ್ಲಾಕಡೆಯ ಒತ್ತಡ, ಕುಹುಕಗಳನ್ನು ನಿವಾರಿಸಿ ತನ್ನದೇ ಆದ neutral ಝೋನ್ ಕಂಡುಕೊಂಡು, ಎಲ್ಲರಿಗೂ ಸಮ್ಮತವಾಗುವಂತೆ  ಅಡಿಗೆಮನೆಯ management ಕಲಿತಿದ್ದಾಳೆ ಹೆಣ್ಣು, ಅವಳನ್ನು  ಅಡಿಗೆಮನೆಯಲ್ಲಿ ತೃಪ್ತಿಗೊಳಿಸುವಂತೆ ತಯಾರಾಗುವ ಗಂಡೇ complete man.😂

ಇತ್ತ COMPLETE 🤧ಆಗುವ ಹಂಬಲದಲ್ಲಿ ಪುರುಷ ಯಾವಯಾವ ಪಾತ್ರೆ ಎಲ್ಲೆಲ್ಲಿಡಬೇಕು🤒 ಅಡಿಗೆಯಾದ ನಂತರ ಎಂಬುದನ್ನು ಕರಗತಮಾಡಿಕೊಂಡು ನಾನಿನ್ನೆನು COMPLETE MAN ಎಂದುಕೊಳ್ಳಬೇಕು ಅಷ್ಟರಲ್ಲಿ ಹೆಂಡತಿ ರಿ😡 ಇದೇನ್ ಅವಾಂತರ ಮಾಡಿದೀರ ಎಲ್ಲ ಹಸಿ ಪಾತ್ರೆಗಳನ್ನ ಜೋಡಿಸಿದಿರ ಬೂಸ್ಟ್ ಬರತ್ತೆ, 🤢ಅಲ್ಲಿ ಚೂರು ಬೂಸ್ಟ್ ಬೆಳೆದಂಗಿತ್ತು ,🥺ಮೊನ್ನೆ ಕ್ಲಿನ್ ಮಾಡಿದ್ದೆ ,ನೋಡಿ ಕ್ಲಿನ್ ಮಾಡಿದಮೇಲೂ ಇನ್ನೊಂಚೂರ್ ಉಳ್ಕೊಂಡಿದೆ,😷
 ಹಸಿ ಪಾತ್ರೆಗಳನ್ನು ನೀವು ಇಟ್ಟೆ ಹೀಗಾಗಿರೋದು🥵 ಎಂದು ಮತ್ತೆ INCOMPLETE STATUS ಖಾಯಂ ಮಾಡುತ್ತಾಳೆ. 
🤯ಮತ್ತೆ ಕಿಂಗ್ BRUCE ನಂತೆ ಪುರುಷ ತನ್ನ COMPLETE MAN STATUS ಗೋಸ್ಕರ ಪಾತ್ರೆಗಳನ್ನು ತೊಳೆದು ಒರೆಸಿ ಆಯಾ ಸ್ಥಾನದಲ್ಲಿಡುವ ಹೊತ್ತಿಗೆ 🥶ಅತ್ತಲಿಂದ ಮತ್ತೊಂದು ದನಿ ಬರತ್ತೆ ಅಯ್ಯೋ ಈ ಹಾಳು ಬಟ್ಟೆ ತೊಳೆಯೊದ್ರಲ್ಲೇ ನನ್ನ ಜೀವನ ಕಳೆದೋಯ್ತು ಅಂತ.😭   ಅದಕ್ಕೆ ವಾಶಿಂಗ್ ಮಿಷನ್ ಇದೆಯಲ್ಲ  ಎಂದು ಕೇಳಿದರೆ ಅದು ನಮ್ಮಗಳ ಬಟ್ಟೆಗಾಗತ್ತೆ ನೀವ್ ಆಚೆ ಹಾಕಿಕೊಳ್ಳುವ ಶರ್ಟ್ ಗಳ ಕಾಲರ್ ಕೊಳೆ ಹೋಗೋದಿಲ್ಲ 😂ಅದನ್ನ ಸೋಪಿನ ನೀರಲ್ಲಿ ನೆನೆಸಿಟ್ಟು ಕಾಲರ್ ಎಲ್ಲ ಉಜ್ಜಿ ಹಾಕಿದ್ರೆ ಅಮೇಲ್ ಎಲ್ಲ ಕ್ಲಿನ್ ಆಗತ್ತೆ. ಒಮ್ಮೆ ಆಯ್ತು ಅಡಿಗೆ ಮನೆಯ ಜೊತೆ ಇದನ್ನು ಕಲಿತರೆ ನಾನು ಕಂಪ್ಲೀಟ್ 🤣🤣ಎನ್ನುವ ಭ್ರಮೆಯಲ್ಲಿ ಗಂಡಸರುಅದಕ್ಕೆ ಕೈ ಹಾಕಿದರು ಅಂತ ಇಟ್ಕೊಳ್ಳಿ ಶುರುವಾಗತ್ತೆ, ಅಯ್ಯೋ ಬಟ್ಟೆ ಸೋಪ್ ಸೋಪಾಗಿದೆ, 🤔 ಎಷ್ಟು ಸೋಪ್ ಹಾಕಿದ್ರಿ?ಕಲರ್ ಬಟ್ಟೆಜೊತೆ ನಿಮ್ ಬಟ್ಟೆ ಹಾಕಬೇಡಿ ಬಿಳಿ ಅಂಗಿ ನೋಡಿ ಹೇಗಾಗಿದೆ, 😢ಅಯ್ಯೋ ಕಾಲರ್ ಕೊಳೆನೆ ಹೋಗಿಲ್ಲ ಹೇಗ್ ಉಜ್ಜಿದ್ರಿ,😕 ಅಯ್ಯೋ ಬ್ರಶ್ ಹಾಕಿದ್ರೆ ಕಾಲರ್ ಹಾಳಾಗತ್ತೆ ಸೋಪಚ್ಚಿ ಕೈಯಲ್ಲೇ ತಿಕ್ಕೋದು ನಾನು...🤢 

ಹೀಗೆ ಮನೆಯಲ್ಲೇ ಸಣ್ಣ ಕಾರ್ಖಾನೆಯನ್ನು🏠 ನಡೆಸುತ್ತಾ ನಮ್ಮನ್ನು incomplete ಆಗಿರಲು ಬಿಟ್ಟ ತಾಯಂದಿರಿಗೂ ಹಾಗೂ ನಮ್ಮನ್ನು complete ಆಗುವತ್ತ ಹುರಿದುಂಬಿಸಿ ನಿರಾಶೆಗೊಳ್ಳುವ ಹೆಂಡತಿಯರಿಗೂ ಒಂದು ನಮಸ್ಕಾರ. 🤠😇👻
***
ಡಾ. ದೀಪಕ್ ಭ
08.09.2022

ಮಂಗಳವಾರ, ಆಗಸ್ಟ್ 23, 2022

ಚಿತ್ತಾರ

ಚಲಿಸುತ್ತೋರುವ ಬೈಕ್ ಸವಾರನ ಹೆಲ್ಮೆಟ್ ಗೆ ತಾಗಿ  ಅಥವಾ ಕಾರಿನ ವಿಂಡ್ ಶೀಲ್ಡ್ ಗೆ ಡಿಕ್ಕಿ ಹೊಡೆದು ಪಾಪ ಅದೆಷ್ಟು ಚಿಟ್ಟೆಗಳು ಅಸುನೀಗಿದವೋ ಲೆಕ್ಕವಿಲ್ಲ, 
ಮಗು ಅದೆಷ್ಟು ಚಿಟ್ಟೆ ಕಂಬಳಿ ಹುಳುಗಳನ್ನು ನೋಡಿ ಸೂಜಿಗ ಪಡುವುದು
ಹಸಿರು ನೀಲಿ ಬಣ್ಣದಿಂದ.

ಸೋಮವಾರ, ಏಪ್ರಿಲ್ 4, 2022

ಹುಟ್ಟು

,

ಬುದ್ಧ ಹೇಳಿದ ಆಸೆಯೇ ದುಃಖಕ್ಕೆ ಮೂಲ
 ಗೆಳೆಯರು ಎಂಬ ಮೋಹ ತೊಡೆಯಲೊಲ್ಲದು, ಬಾಲಿಶತನಕೆ ಕೊನೆಯು ಎಲ್ಲಿದೆ ?
ಬಹುಶಃ ಇಲ್ಲೇ  ನನ್ನವರ ನಡುವೆ; ಮೆರೆವೆನು ಅಳಿದೇನು ಎಂಬುದರಲ್ಲಿದೆ.

ಹೀಗೆ ಸ್ವಗತವಿ ಜೀವನ
ನಾನು ನನ್ನವರು ನನ್ನದು ಎಂಬ ಭ್ರಮೆಯೆರಡು ದಿನವೋ,
ಸಮಯದ ಪುಟದಲ್ಲಿ ನಾ ಚುಕ್ಕಿಯ ಒಂದು ಭಾಗವಷ್ಟೇ,
ಸಮಷ್ಟಿಯಲ್ಲಿ ಇನ್ನೆಷ್ಟು ನಾನುಗಳು ತುಂಬಿರಬಹುದು?
ಸೃಷ್ಟಿ ಅದೇನನ್ನೆಲ್ಲ ಹೊತ್ತು ನಡೆದಿರಬಹುದು..
ಸೃಷ್ಟಿಗೇ ಗೊತ್ತು
ಅದರಾಘಾದತೆ,
ಆದರೂ ನಾನು ಎಂಬ ಹಮ್ಮಿನೊಳಗೆ ಮತ್ತೆ...
ನಿಮಗ್ಯಾರಿಗೂ ನೆನಪಿಲ್ಲ, ಅದು ನಿಮ್ಮ ತಪ್ಪಲ್ಲ ನನ್ನದು
-ಡಾ.ದೀಪಕ್ ಭ

ಹೆಕ್ಕು

ನಿನ್ನ ನೆನೆದಾ ಅಂದು
ಹಾದಿತುಂಬಾ ಗುಲಾಬಿ ಪಕಳೆಗಳು
ಘಮಕೆ ಸೋತು ಹೆಕ್ಕದೇ ಹಾಗೆ ಮುಂದೆಬಂದೆ

ಹೀಗೆ ಕುಳಿತಿದ್ದಾಗ

ಹೀಗೆ ಕುಳಿತಿದ್ದಾಗ...
ಎಲ್ಲಿ ಬತ್ತಿ ಹೋದವೋ ಈ ಬಿರುಬಿಸಿಲಿನಲ್ಲಿ,
ಪುಟಿಪುಟಿದು ಹುಟ್ಟುತ್ತಿದ್ದ ಭಾವನಕ್ಕರಗಳು ನೆಳಲಿನಾವಿಷ್ಕಾರದಲ್ಲಿ?

 ಇಲ್ಲಿ ಸೋಡಾಚೀಟಿಯನು ಕೊಟ್ಟು  ಹೋದದ್ಡೆಲ್ಲಿ,
 ಅಮ್ಮನ ಒಡಲಿನಲ್ಲಿ, ಕಂದನ ಮಿದುಳಿನಲ್ಲಿ, 
ಕರ್ತವ್ಯದಂಟಿನಲ್ಲಿ

ಎಲ್ಲರ ನಡುವಿದ್ದೂ ಒಬ್ಬಂಟಿ,
 ಕಾಡುವ ನೆನಪುಗಳು 
ಕಾವ್ಯವಾಗದೆ ಮುಷ್ಕರವ ಹೂಡಿವೆ ಜಂಟಿ;
ಇದು ವರವೋ ಶಾಪವೋ
 ಬಗೆಹರಿಸಬೇಕು ಕಾಲದ ತೋಟಿ 
ಕಾಲಕ್ಕೆ ಬಿಟ್ಟ ಎಷ್ಟೋ ನಿರ್ಧಾರಗಳು 
ಕಾಲವಾದವು,
  ಜಡ ಸಾಮ್ರಾಜ್ಯದೊಳು ಮುಳುಗಿ ಮಿಂದು ಉಸಿರುಗಟ್ಟಿದವು

ಝಾಡಿಸಿ ಏಳಬೇಕಿದೆ 
ಇಚ್ಛೆಯ ಬತ್ತಿಯ ಹಿಡಿದು,
ನಿಷ್ಠುರತೆಗಳ ಸುಡಬೇಕಿದೆ ಕರುಳ ಬಳ್ಳಿಯಿಂದ ಹಿಡಿದು

ಮತ್ತೆ ನಿಸ್ತೇಜವಾಗುತ್ತ ವೆ ಎಲ್ಲ ಭಾವಗಳು 
ಒರತೆಯ ಕೊರತೆಯಿಂದ,
ಉದಯಿಸಬೇಕು ಜ್ಞಾನಗಂಗೆ
ಹೊತ್ತಿಗೆ ಹೊತ್ತಿಗೆಯಿಂದ..

-ದೀಪಕ್

ಭಾನುವಾರ, ಜೂನ್ 20, 2021

ಪೂರ ಬೆಂದೀತೆಂದು

ಮುಖದ ಮಕಮಲ್ಲಿನ ಪರದೆಯ ತೆಗೆದು ನೀನೊಮ್ಮೆ ನಕ್ಕುಬಿಡಬೇಕಿತ್ತೇ ಗೆಳತಿ,

ಚಮಡಿಯ ಕಪ್ಪನು ದಾಟಿ ಹೃದಯದೊಳಗಿಳಿದು ಜೀವನಾರ್ಭಟವನ್ನೊಮ್ಮೆ ನೋಡಬೇಕಿತ್ತು

ನಿಸ್ತಂತು ಮಾತುಗಳ ತೊರೆದು
ಅಕ್ಷಿಗಳ ಮಾತನ್ನಾದರೂ ನೀ ಹೀರಬೇಕಿತ್ತೆ ಗೆಳತಿ

ಪತಿಸುತರ ಹಂಗ ತೊರೆದು ಆ ಚಣವನಲ್ಲೇ 
ನಾವು ಅನುಭವಿಸಲಿಕ್ಕಿತ್ತು

ಅದಾಗಲಿಲ್ಲ,
ಅದು ಸಂಭವಿಸಿಲ್ಲವೆಂಬ ಖೇದ
ನಿತ್ಯ ಸುಡುತ್ತಿದೆ ಏಕಾಂತವನ್ನು,

ಅರೆ ಬೆಂದಾಚಣಗಳನು
ಪೂರ ಸುಡುತಿರುವೆ 
ಅಂದುಳಿದ
ಈ ಪದಗಳ ಕೆಂಡದಿಂದ,
ಪೂರ ಬೆಂದೀತಿಂದು...

ಶುಕ್ರವಾರ, ಮೇ 14, 2021

ತಕರಾರಿ ಹರಟೆ

ತಕರಾರಿ ಹರಟೆ

ನಿನ್ನೆ ಮಧ್ಯಾಹ್ನ ups ನ ಪ್ಲಾಸ್ಟಿಕ್ ಹೊರ ಕವಚ ಮುರಿದಿದ್ದನ್ನು ನೋಡಿದೆ. ಲಾಕ್ ಡೌನ್ ಕಾರಣ ಆದನ್ನು ಸರಿಮಾಡಲು ಫೆವಿಕ್ವಿಕ್ ದೊರೆಯಲಿಲ್ಲ. ಬೆಳಿಗ್ಗೆ 5.30ಕ್ಕೆ ಎದ್ದವನೆ ಕಾಫಿ ಕುಡಿದು ಅಂಗಡಿಗೆ ಹೊರಟೆ. ಫೆವಿಕ್ವಿಕ್ ಕೇಳಿದರೆ ಪರಿಚಿತ ಅಂಗಡಿಯವನು ಎರಡು ಬೇಕಲ್ಲವೇ ಎಂದು ಕೊಡಹೋದ. ಒಂದೇ ಸಾಕೆಂದು ಹತ್ತು ರೂ ನೀಡಿದ್ದಕ್ಕೆ ತಡಕಾಡಿ ಒಂದು ರೂಪಾಯಿಯ ಐದು ನಾಣ್ಯಗಳನ್ನ ನೀಡಿದರು. ಇನ್ನೂ ಸ್ವಲ್ಪ ದೂರ ನಡೆಯೋಣ ಎನಿಸಿತು. ಮುಂದುವರೆದೆ, ವೃತ್ತದ ಸಮೀಪ ಫರಂಗಿ ಹಣ್ಣನ್ನು 30ರೂ ಕಿಲೋ ಎಂದು ಮಾರುತ್ತಿದ್ದರು, "ತಕ್ಕಡಿ ಇಲ್ಲವೇನಪ್ಪ" ಎಂದು ಕೇಳಿದ್ದಕ್ಕೆ ಆಲ್ಲೇ ತರಕಾರಿ ಮಾರುವವರ ಪಕ್ಕದಲ್ಲಿದ್ದ ಹಣ್ಣಿನಂಗಡಿಯಿಂದ ತಕ್ಕಡಿ ತೆಗೆದು ಗಾಡಿಯಲ್ಲಿರಿಸಿಕೊಂಡು ಹಣ್ಣನ್ನು ತೂಗಿ  ನನಗೆ ಮಾರಿದ. ತರಕಾರಿ ಬೇಕೆಂದು ಹಿಂದಿನ ದಿನ ಬಿಗ್ ಬ್ಯಾಸ್ಕೆಟ್ ನಲ್ಲಿಹಣ್ಣು ತರಕಾರಿಗಳನ್ನು ಆರಿಸಿ ಹಣ ಪಾವತಿಸಲು ಹೋದಾಗ all available slots are booked we will be back soon  ಎಂಬ ಸಂದೇಶ ನೋಡಿ ಕೊರೊನಾ ಆರ್ಭಟ ಎಷ್ಟಿದೆಯಲ್ಲ, ಎಲ್ಲರೂ ಮನೆಯ ಬಾಗಿಲಿಗೆ ತರಕಾರಿ ತರಿಸಿಕೊಳ್ಳುತ್ತಾರೆ ಈಗ, ಅದೂ ಚೌಕಾಸಿ ಇಲ್ಲದೆ ಎಂದುಕೊಂಡು ಸುಮ್ಮನಾಗಿದ್ದೆ.   

     ಕೈಯಲ್ಲೊಂದು ಚೀಲವಿದ್ದಿದ್ದರೆ ಎಲ್ಲ ತರಕಾರಿಯನ್ನು ಕೊಂಡೊಯ್ಯಬಹುದಿತ್ತು ಎಂದು ಅತ್ತಿತ್ತ ನೋಡಿದಾಗ, ತರಕಾರಿ ಅಂಗಡಿಯಾಕೆ ಒಂದು ಈರುಳ್ಳಿ ಚೀಲವನ್ನು ಮಡಿಚಿಡುತ್ತಿದ್ದಳು. 
"ಗಜ್ಜರಿ ಹೇಗೆ?"ಎಂದು ಕೇಳಿದೆ, ನನ್ನತ್ತ ಒಮ್ಮೆ ನೋಡಿ 40ರೂ ಎಂದಳು,ಅರ್ಧ ಕಿಲೋ ಕೊಡಿ ಎಂದೆ. ಹಾಗೆ ಆ ಈರುಳ್ಳಿ ಚೀಲವನ್ನು ಇಸಿದುಕೊಂಡೆ.
 "ಹೀರೆಕಾಯಿ?" 
ಮತ್ತದೇ 40, "ಅರ್ಧ ಕಿಲೋ ಕೊಡಿ" ಎಂದೆ, 
"ಮೂಲಂಗಿ?" 
ಮತ್ತೆ 40 ಎಂದಳು. 
"ಬೀನ್ಸ್ ?"
40ರೂ ಅರ್ಧ ಕಿಲೋ ಎಂದಳು ಖಿಲಾಡಿ, ಬೇಡ ಎಂದ ನಾನು "ನುಗ್ಗೆ ಹೇಗೆ?" ಎಂದು ಕೇಳಿದೆ. 60 ರೂ ಕಿಲೋ ಎಂದವಳಿಗೆ "ಕಾಲು ಕಿಲೋ ಕೊಡಿ" ಎಂದೆ. 
ಹಿಂದೆ ನಾನು ಸಣ್ಣವನಿದ್ದಾಗ ಮನೆ ಮುಂದೆ ಇರುತ್ತಿದ್ದ ನುಗ್ಗೆ ಗಿಡದಲ್ಲಿ ಕಾಯಿಗಳನ್ನ ಕೇಳಿದವರಿಗೆ ಕಿತ್ತುಕೊಂಡು ಹೋಗಿ ಎಂದು ಉಚಿತವಾಗಿ ಕೊಡುತ್ತಿದ್ದದ್ದು ನೆನಪಾಗಿ ಆಕೆಗೆ ಹೇಳಿದೆ, "ಅದಾನ್ಯರು ತಿಂತಿದ್ರು ಮೊದ್ಲು ಬರೀ ಸೊಪ್ಪು ಉಪಯೋಗಿಸ್ತಿದ್ದುದ್ದು " ಎಂದಳಾಕೆ. 
ಸೊಪ್ಪಿನ ಗುಡ್ಡೆಯತ್ತ ಬೆಟ್ಟು ಮಾಡಿ "ಹೇಗೆ" ಎಂದಾದಕ್ಕೆ "ಕೊತ್ತಂಬರಿ ಐದು,ಸಪ್ಸಿಗೆ ಐದು ಪುದಿನ ಎಂಟು ಉಳಿದದ್ದೆಲ್ಲ ಹತ್ತು ರೂಗೆ ಮೂರು ಕಟ್ಟು"
ಒಂದಷ್ಟು ಸೊಪ್ಪು ತೆಗೆದುಕೊಂಡೆ. "ಟೊಮ್ಯಾಟೋ ಹೇಗೆ?" ಅಂದದಕ್ಕೆ "10ರೂ ಕಿಲೋ ಕೊಡಲೇ" ಎಂದಳು. "10 ರೂಗೆ ಎರಡು ಕಿಲೋ ಕೊಡ್ತಾರಲ್ಲ?" ಎಂದದಕ್ಕೆ ತಗೊಳಿ ಎಂದು ಒಂದುಕಾಲು ಕಿಲೋ ತೂಗಿ ಅವಳೇ ಕೊಟ್ಟಿದ್ದ ಚೀಲಕ್ಕೆ ಹಾಕಿದಳು. "ಕೋಸು ಹೇಗೆ?" ಎಂದಾದಕ್ಕೆ "ಎಲೆಕೋಸು 15 ಗೆಡ್ಡೆ 40"ಎಂದವಳಿಗೆ ಎಲೆಕೋಸು ಕೊಡು ಎಂದು ತೆಗೆದುಕೊಂಡೆ. "ನಿಂಬೆಹಣ್ಣು ಬೇಡವೇ?" ಎಂದು ಚೀಲದಿಂದ 5ನಿಂಬೆಹಣ್ಣು ತೆಗೆದು ಇಪ್ಪತ್ತು ರೂ ಎಂದಳು.
"ಹತ್ತು ರೂ ಗೆ ಕೊಡಮ್ಮ ಸಾಕು"ಎಂದಾದಕ್ಕೆ ಎರಡು ನಿಂಬೆ ಹಣ್ಣು ಕೊಟ್ಟಾಗ 
"ಅವಾಗ ಒಂದು ಹೆಚ್ಚ ಕೊಡ್ತಿದ್ದೆ ಇವಾಗ ಇಲ್ಲವಾ?" ಅಂದ ನನಗೆ "ಏನೋ ಜಾಸ್ತಿ ತಗೊಂಡರಿ ಅಂತ ಕೊಡೋಕ್ಬಂದೆ" ಅಂದಳು.
 ಒಟ್ಟು ಎಷ್ಟಾಯಿತು ಎಂದು ನನ್ನಿಂದಲೇ ಲೆಕ್ಕ ಹಾಕಿಸಿ ಹಣ ಇಸಿದುಕೊಂಡಳು.

 ಮನೆಗೆ ತೆರಳಿದೆ. 
ತರಕಾರಿಯನ್ನು ಪರಿಶೀಲಿಸುತ್ತಾ ಮನೆಯಾಕೆ ಇದೆಷ್ಟು, ಇದು, ಎಂದು ನನ್ನ ವಿಚಾರಣೆ ಶುರುವಾಯಿತು. ಓ ಬಿಗ್ ಬ್ಯಾಸ್ಕೆಟ್ ನಲ್ಲೂ ಅಷ್ಟೇ ಇದೆ ಎನ್ನೋ ಉದ್ಗಾರ. 
ತರಕಾರಿ ಫ್ರೆಶ್ ಆಗಿ ಚೆನ್ನಾಗಿದೆ,  ಕೊತ್ತಂಬರಿ ಸೊಪ್ಪು ಸಣ್ಣ ಕಟ್ಟಿದೆ, ಐದು ರೂ ಜಾಸ್ತಿ ಆಯ್ತು, ಟೊಮ್ಯಾಟೋ ಸ್ವಲ್ಪ ಹಳೆಯದಿದ್ದಂತಿದೆ, ನಿಂಬೆಹಣ್ಣು ಕೊಳೆಯೋಕ್ ಶುರುವಾಗಿದೆ ಯಾಕೆ ನೋಡ್ಕೊಂಡ್ ತರಲಿಲ್ವಾ? ಈ ತರಕಾರಿ ಅಂಗಡಿಯವರು ಸ್ವಲ್ಪ ನೋಡೋದಿಲ್ಲ ಅಂತ ಗೊತ್ತಾದ್ರೆ ಹ್ಯಾಮಾರಿಸಿ ಬಿಡ್ತಾರೆ, ನನಗೊಂದುಸಲ ಮಾವಿನ ಹಣ್ಣಲ್ಲಿ ಹೀಗೆ ಮಾಡಿದ್ರು ಎಂದು ಹೇಳತೊಡಗಿದಳು.  "ಅಂತೂ ಬೆಳಿಗ್ಗೆ ಬೆಳಿಗ್ಗೆ ಹೋಗಿ ದಂಡಕ್ಕೆ ದುಡ್ಡಿತ್ತು ಬಂದೆ ಅನ್ಸತ್ತೆ" ಎಂದ ನನಗೆ, "ಅದ್ಯಾಕೆ ಹಾಗ್ ಹೇಳ್ತೀರಾ ಚೆನ್ನಾಗಿದೆ ಎಂದೂ ಹೇಳಿದೆನಲ್ಲ" ಎಂದು ನನ್ನೆದುರು ಕೈಯಲ್ಲಿ ಸೌಟು ಹಿಡಿದು ಟೊಂಕಕ್ಕೆ ಕೈಕೊಟ್ಟು ನಿಂತಾಗ "ನಿನಗೇನು ಹೇಳಲಿಲ್ಲ ನಾನು, ನನಗೆ ಹಾಗನ್ನಿಸಿತು ಅಷ್ಟೇ" ಎಂದು ಬಚಾವಾದೆ. 
ನಿತ್ಯ ಏರುತ್ತಿರುವ ಬೆಲೆಗಳು ಲಾಕ್ ಡೌನ್, ಸಿಗದ ಮಾರುಕಟ್ಟೆ, ಬಿಗ್ ಬಾಸ್ಕೆಟ್ನಂತಹ ಮಾರುಕಟ್ಟೆ ತಂತ್ರಜ್ಞರ ಮುಂದೆ ಒಂದು ಕೊಳೆತ ನಿಂಬೆಹಣ್ಣು ಲೆಕ್ಕವೇ?

 ನಂತರ ನಾನು ತಿಂಡಿ ತಿನ್ನುತ್ತಿದ್ದಾಗ
ಮಧ್ಯಾಹ್ನ ಚಿತ್ರಾನ್ನ ಮಾಡಿಬಿಡುವೆ ಜಾಸ್ತಿ ದಿನ ಇಟ್ಟರೆ ನಿಂಬೆಹಣ್ಣು ಕೊಳೆತು ಹೋಗುತ್ತದೆ ಎಂದು ನಾನು ತರಕಾರಿಯಲ್ಲಿ ತಂದ ನಿಂಬೆಹಣ್ಣಿಗೆಉಪಸಂಹಾರದ ಸಮಾಧಾನಕರ ಮಾತೊಂದು ಉದುರಿತು, (ಆಯುಧ ಪೂಜೆಯಂದು ಇದೆ ನಿಂಬೆಹಣ್ಣಿನ ಮೇಲೆ ಕಾರನ್ನು ಚಲಾಯಿಸುವಾಗ ಏನು ಅನಿಸುವುದಿಲ್ಲವೇನೋ?) 
"ಚಾಕು ತಗೊಂಡು ಕೊಳೆತ ಭಾಗ ಕತ್ತರಿಸಿ ಬಿಸಾಡು, ನೀನು ಅದನ್ನು ಉಪಯೋಗಿಸೋವರೆಗೂ ಅದು ಕೆಡಲ್ಲ" ಎಂದು ನಿಂಬೆ ಹಣ್ಣಿಗೆ ಶಾಸ್ತ್ರಚಿಕಿತ್ಸೆಮಾಡಿ ಬೆಳಗಿನ ತಿಂಡಿಯನ್ನು ಮುಗಿಸಿ, ಚಿಕಿತ್ಸಾಲಯಕ್ಕೆ ಹೊರಟೆ.

ಶುಕ್ರವಾರ, ಮೇ 7, 2021

ಪ್ರೇಮಿಸುವುದೆಂದರೆ 
ಸಾವಿನ ನಂತರವೂ 
ಬದುಕುವುದು!

ಸೋಮವಾರ, ಮಾರ್ಚ್ 29, 2021

ಹೋಳಿ

ಬಣ್ಣಗಳ ನಡುವೆ ಕಪ್ಪುಬಿಳುಪು
 ಮೂಡುವುದೇ ಒಣಪು

ಯಾರೊಬರುವರು 
ರಂಗತರುವರು
 ಮರೀಚಿಕೆ

ಆವಿಯಾದ ಕಣ್ಣೀರ ಹಿಂದೆ 
ನನ್ನೊಳಗೆ ಕಂಡೆ
ಸಪ್ತವರ್ಣಗಳದಂಡೆ

ಮತ್ತೆ ಹಂಬಲಿಸಲಿಲ್ಲ
ಬಣ್ಣಗಳ ಬಿಲ್ಲ

ಬುಧವಾರ, ಮಾರ್ಚ್ 17, 2021

ಕೋವಿಡ್ ಕೋವಿ


ಮತ್ತೆ ಬೆಳಗಾಯಿತು,
ರಾತ್ರಿ ಪೂರ ನಿದ್ರೆಯಲ್ಲಿ ಕಳೆದು 
ಇಂದು ಮತ್ತೆ ಬೆಳಗಾಯಿತು,
ನೆರೆ ಮನೆಯ ಬಚ್ಚಲ ಸದ್ದಿಗೆ ಎಚ್ಚರಾಯಿತು!

ಕಾಣದ ವೈರಿಯೊಡನೆ ಹೋರಾಡುತ,
ಢಾಳಾಗಿ ಉಂಡೆದ್ದು..
ಹೊಟ್ಟೆಭಾರಕ್ಕೆ ನಿದ್ರೆಗೆ ಜಾರಿದ್ದ 
ಅನರ್ಹ ಶಿಸ್ತಿನ ಸಿಪಾಯಿ, 

ಸಂಬಳ ಕಾಣದೆ,  ಗಂಟೇ ಇರದ ಯೋಧನಿಗೆ
ನಿದ್ರೆ ಇನ್ನೂ ಮುಗಿದಿರಲಿಲ್ಲ,
ಮುಂಚೂಣಿಯಲ್ಲಿರುವ ಯೋಧ ನೀನು
ಸತ್ತೀಯೆ ಮಲಗು ಎಂದ ಕಮಾಂಡರ್ ಗೆ
ಯಾಕೋ ಮಲಗಿದ್ದ ಯೋಧರನ್ನು 
ಬಡಿದೆಬ್ಬಿಸಿ 
 ಯುದ್ಧಕ್ಕೆ ಒಮ್ಮೆ ಕಳಿಸಬೇಕೆನಿಸಲಿಲ್ಲ.

ಸಂಬಳ ವಿರದಿದ್ದರೂ ಜೀವ ಉಳಿಯಿತಲ್ಲ 
ಎಂದು ಹಿಪೊಕ್ರಿಟನಿಗೆ ಹಿಪೊಕ್ರೆಸಿ ತೋರುತ್ತಾ
 ಕುರಿಗಳಂತಿದ್ದರೆಲ್ಲ,
ಜನ ಹುಳುಗಳಂತೆ ಸಾಯುತ್ತಿದ್ದರೂ
ಮರೆತೇ ಬಿಟ್ಟರು 
ಓದಿದ್ದ ಮೆಡಿsin
ಇನ್ನ ಬದುಕಿರುವುದೇ ಒಂದು sin
-ದೀಪಕ್

ಮಂಗಳವಾರ, ಮಾರ್ಚ್ 16, 2021

ಬ್ರಹ್ಮ

ಅದು ಹಾಗಲ್ಲ ಮಗು

ರಚ್ಚೆ ಬಿಡಲಿಲ್ಲ
ರಾತ್ರಿ ಗಾಢ ಕತ್ತಲೆ ಗಂಟೆಎರಡು
ಕತ್ತಲೆಯೊಳಗೆ ಏಳುತ್ತಾ ಕೂರುತ್ತಾ ಒಮ್ಮೊಮ್ಮೆ ಮೂಗ ಮುಚ್ಚಿ
ಮಲಗಲೊಲ್ಲೆ 
ಎಂಬಳುವಿನ ಪ್ರತಿಭಟನೆ
ಹಾಲು ಕುಡಿದರೆ ಮಲಗೀಯಾಳು
.... ಇಲ್ಲ
ಭುಜದಲಿ ಪ್ರಭಾತಫೆರಿ
ನಡು ನಡುವೆ ಇದಾವ ಪರಿಯ ಸೇಡು
ಏನು ಅರಿಯದು ಹೌದು

ನಾನಪ್ಪ  ಆದರೆ
ರಕ್ತಮಾಂಸ ನನದಲ್ಲ
ನಾನೇನು ಹೊತ್ತೆನೆ ಹೆತ್ತೆನೆ
ಹಾಲೂಡಿದೆನೆ
ಅಪ್ಪನ ಪಟ್ಟ
ನಾಲ್ಕು ಕಾಸಖರ್ಚು ಮಾಡಲು
ನನ್ನವರೆಂದು ಹುಸಿ ಕರುಬಲು
ಕೋಟಿಕೋಟಿ ಬ್ರಹ್ಮರಲಿ ಫಲಿಸಿದೊಂದೆ ಬ್ರಹ್ಮ
ಉಳಿದ ಬ್ರಹ್ಮರು
ಓಟದಲ್ಲಿ ಸೋತರು
ಪ್ರಳಯದಲಿ ಹೋದರು
ಆದರೂ ನಾನಪ್ಪ
ಸ್ಖಲಿತ ಫಲಿತ ದಲಿತಬ್ರಹ್ಮ

ಇಂದು ಮುಂಜಾನೆ

ಇಂದು ಮುಂಜಾನೆ ರವಿ ಮೂಡದೆ ಕೆಲಹನಿಗಳು ಗಿಡ ಮರ ನೆಲ ರಸ್ತೆಗಳ ತೋಯ್ಸಿದವುಹೊರ ಬಂದಾಗ ಹನಿ ಹೊತ್ತ ಹೂವು ತಗೆ ತೂಗುತ್ತಿತ್ತು
ರಸ್ತೆಯ ತುಂಬಾ ಪಾರಿಜಾತ ಆಕಾಶ ಮಲ್ಲಿಗೆ ಹೂಗಳ ಹಾಸಿತ್ತು  ಬೀಸುವ ತಂಗಾಳಿಯಲಿ ಮಣ್ಣಿನ ಘಮವಿತ್ತು ಜೊತೆಗೆ ಹೂವಿನ ಪರಿಮಳವು ಬೆರೆತಿತ್ತು
ಮೈನ ಕೆಂಬೂತ ಚಿಟ್ಟು ಪಾರಿವಾಳ ಅಳಿಲುಗಳು ಕಚೇರಿಯ ನಡೆಸಿತ್ತು 

ಜೊತೆಗೆ ದೂರದಲ್ಲಿ ಮಯ್ಗಾರ ಮಾದೇವ ಎಂಬ ಗಲಾಟೆ ಪ್ರಕೃತಿ ಸೊಬಗಿಗೆ ದೃಷ್ಟಿ ಬೊಟ್ಟಿನಂತಿತ್ತು
ಮಲಗಿದ್ದ ಮಗಳು ಬಟ್ಟಲುಕಂಗಳ ತೆಗೆದು ಏನದೇನೆಂದು ದೃಷ್ಟಿಯಲೇ ಕೆದಕಿತ್ತು

ಇಂದಿನ ಮಳೆ

ಅಂತರ್ಜಾಲದ ಈ ಮಳೆಯಲ್ಲಿ ಚಳಿಯಲ್ಲಿ ಪೆನ್ನು ಕಾಗದಗಳು ಕಮರಿ ಹೋದವು
ಪುಸ್ತಕಗಳು ಧೂಳು ತಿಂದವು

ಮೋಡಗಳ ತುಂಬುತ್ತಾ
ಜನರ ಸಮಯವನ್ನು ತಿನ್ನುತ್ತ
ಜನಕ್ಕೆ ಜಗಳದ ಸರಕನೀಡಿ
ಕೆಲಸ ಕಿತ್ತು ಭ್ರಮೆಯ ಹಚ್ಚಿ  ಗುಂಡಿ ಬಂದ್ ಆಗಲು ಎಲ್ಲ ನಿಸ್ತೇಜ
ಕಳೆದದ್ದೇನೆಂದು ಎಂದೂ ತಿಳಿಯದು
ಪಡೆದ ಭ್ರಮೆಯ ಸರಕ ಇಟ್ಟು ಕೊಳ್ಳಲಾಗದೆ ಮಾರಲಾಗದೆ ಮತಿಭ್ರಮಿಸುವ ಮುನ್ನ 

ಎಚ್ಚೆತ್ತು ಕೊಳ್ಳಬೇಕು

ಪುಟ್ಟ ಪ್ರಪಂಚದ ಪುಟಾಣಿ

ಭಾನುವಾರ ಕೆಲಸಕ್ಕೆ ರಜೆ. ತಿಂಡಿ ಮುಗಿಸಿ ಕ್ಯಾಮೆರಾ ಹಿಡಿದು ಮನೆ ಮುಂದಿನ ಹೂಕುಂಡ ಗಳಲ್ಲಿರುವುದನ್ನು ತ್ರಿಪಾದಿ ಸಹಾಯದಿಂದ ಚಿತ್ರಿಸುತ್ತಿದ್ದೆ.  ಆರೋಗ್ಯಕಳೆದು ಕೊಳ್ಳುತ್ತಿರುವ ವೀಳ್ಯದೆಲೆ ಬಳ್ಳಿಯ ಕೊಂಬೆ ಮೇಲೆ ಏನೋ ಓಡಿದಂತಾಯಿತು. ಕ್ಯಾಮೆರಾದಿಂದ ಕಣ್ಣುಕಿತ್ತು ಗಿಡದೆಡೆಗೆ ನೋಡಿದೆ. ಏನೂ ಕಾಣಲಿಲ್ಲ. ಕಣ್ಣಾಮುಚ್ಚಾಲೆಯಾಡುತ್ತಿರಬಹುದೇ ಎಂದು ಎಲೆಗಳನ್ನು ಅತ್ತಿತ್ತ ಸರಿಸಿ ನೋಡಿದೆ. ಟಿಸಿಲಿನಲ್ಲಿ ಈ ಭೂಪ!
 ಚಿತ್ರಿಸಿ ವಿಡಿಯೋ ಮಾಡಿದೆ ಇದರದ್ದು. ಅದೇನು ಚಟುವಟಿಕೇರಿ ಈ ಜೇಡದ್ದು ಅಬ್ಬಾ! ಒಂದು ಕಡೆ ನಿಲ್ಲೋದಿಲ್ಲ. ಅತ್ತಿತ್ತ ಒಡೆಲ್ ಕೆಳಗೆ ಅವಿತು ಬಿಡೋದು ಕೆಲವೊಮ್ಮೆಬಳ್ಳಿಯ ಟಿಸಿಲ ಮೇಲೆ ಓಡಾಡೋದು. , ನಾನು ವರ್ಣ ರಂಜಿತವಾಗಿ ಗೂಗಲ್ ಗಾಗಲ್ ಸಹಾಯದಿಂದ bhageera ಅಂದುಕೊಂಡಿದ್ದೆ. ಗೆಳೆಯ ವಿಪಿನ್  ಇದನ್ನು carrhotus species ಅಂತ ತಿಳಿಸಿದರು.  Carrhotus ನೆಗೆ ಜೇಡದಲ್ಲಿ 32 ವಿವಿಧ ಪ್ರಭೇಧಗಳಿರುವುದಂತೆ. 
ಹಂಬಲಿಸಿ ಪಡೆದ ನೀನು
Humble ಆಗಿಸಲು
ಬೇಡ ಬರಬೇಡ ಎಂದೇಯ

ಒಳಗ ತಿವಿತಿವಿದು 

ಬ್ಲಾಗ್ ಆರ್ಕೈವ್

Its blog I have created to enter my day to day search & feel like sharing the same with like minded people. I solicit a comment from all my friends.