ನಿನ್ಹೆಸರು ಕೇಳಿದಾಗ ಕಳವಳದಿ
ಏರುಪೇರಾಗುವ ಉಸಿರಿಗೆ
ಬಿಗಿವ ಸಂಕೋಲೆಯಾಗಬೇಡ
ಕರ್ಕಶ ಹಾಡಾಗಬೇಡ
ಮೋಹದ ಮುಸುಕಿನ
ಗುದ್ದಾಟಗಳ ಶಬ್ದಕ್ಕೆ ಬೆಚ್ಚಿ
ಅಡಗಿ ಕೂತಿವೆ ನಾಳಿನ ಕನವರಿಕೆಗಳು
ಹೆದರಿಸುವ ಗುಡುಗಾಗಬೇಡ
ಆಯತಪ್ಪಿದ ಬದುಕಲ್ಲಿ
ಭರವಸೆಯ ಕಂದೀಲು ಹಿಡಿದು ಹೆಜ್ಜೆ ಹಾಕುವ ಪ್ರಯತ್ನದಲ್ಲಿರುವೆ ಎರಗುವ ಸಿಡಿಲಾಗಬೇಡ
ಹೆದರಿಸುವ ಬಿರುಗಾಳಿಯಾಗಬೇಡ
ನಿನ್ನ ನೆನಪಿನ ದಾಳಿಗೆ
ಸಿಕ್ಕು ವ್ಯಸ್ತವಾದ ಹೃದಯಕೀಗ ವಿಶ್ರಾಂತಿ ಬೇಕಿದೆ
ಮನವ ಕೊರೆಯುವ
ಅಸ್ಪಷ್ಟ ತುಡಿತವಾಗಬೇಡ
ವಾಸ್ತವವ ಒಪ್ಪಿಕೊಳ್ಳುವ ಅನಿವಾರ್ಯದಲ್ಲಿರುವೆ
ಧುತ್ತನೆ ಎದುರಾಗಬೇಡ
ಭೂತಕಾಲದ ನೆನಪು ಹಿಡಿದು
ಮುಚ್ಚಿದ ಮನದ ಬಾಗಿಲ ಮತ್ತೆಂದೂ ತಟ್ಟಬೇಡ ...
# ಶ್ರೀಗೌರಿ
ನಿನ್ಹೆಸರು ಕೇಳದಾಗ ಕಳವಳದಿ
ಏರುಪೇರಾಗುವ ಉಸಿರಿಗೆ
ಬಿಗಿವ ಸಂಕೋಲೆಯಪ್ಪುಗೆಯಾಗು
ಕರ್ಕಶತೆಯ ಮೀರಿಸುವ ಹಾಡಾಗು
ಮೋಹದ ಮುಸುಕ ಹರಿ
ಗುದ್ದಾಟಗಳ ಶಬ್ದಕ್ಕೆ ಬೆಚ್ಚಿ
ಅಡಗಿ ಕೂತಿವೆ ನಾಳಿನ ಕನವರಿಕೆಗಳು
ಭರವಸೆಯ ಗುಡುಗಾಗು
ಆಯತಪ್ಪದ ಬದುಕಲ್ಲಿ
ಭರವಸೆಯ ಕಂದೀಲು ಹಿಡಿದು
ಹೆಜ್ಜೆ ಹಾಕುವ ಪ್ರಯತ್ನದಲ್ಲಿರುವರಳು
ನನ್ನ ಬೆಡಗಿ
ಅವಳೆದೆಯ ದನಿಯಾಗು
ತಂಪು ಗಾಳಿಯಾಗು
ನಿನ್ನ ನೆನಪಿನ ಮೋಹಕೆ
ಸಿಕ್ಕು
ಹೃದಯಕೀಗ ನಿನ್ನ ಸನಿಹ ಬೇಕಿದೆ
ಮನವ ಆಹ್ಲಾದಿಸುವ
ಮಧುರ ತುಡಿತವಾಗು,
ವಾಸ್ತವವ ಎದುರಿಸುವ
ಶಕ್ತಿಯ ಚಿಲುಮೆಯಾಗು,
ನನ್ನಬದುಕ ಮಿಡಿತಗಳಲಿ ಎದುರಾಗು,
ಭೂತಕಾಲದ ನೆನಪು ಹಿಡಿದು
ಮುಚ್ಚಿದ ಮನದ ಬಾಗಿಲ ಮತ್ತೆ ತೆಗೆದಿಡುವೆ
ನಿನಗಾಗಿ ನಿನ್ನ ಪ್ರೀತಿಗಾಗಿ...
# ದೀಪಕ್
,
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ