ಸೋಮವಾರ, ಡಿಸೆಂಬರ್ 25, 2017

ಸುಮ್ಮನಿರು

ಸುಮ್ಮನಿದ್ದು ಬಿಡೆ ಹುಡುಗಿ
ಚಂದಿರನೊಡನೆ
ಚಕ್ಕಂದವಾಡುವ ಸಾಗರನೇಕೆ ನಿನಗೆ ಬೇಕು?

ಅವನು ನಿನಗೂ ಇರುವುದು ಬರೀ ಕಣ್ಣೀರಉಪ್ಪಿನ ಋಣ ,
ನಿನ್ನ ಋತು ಚಕ್ರ ಚಂದಮನೊಡಗೂಡಿ ಚಕ್ಕಂದವಾಡುವುದೇ!
ಹುಣ್ಣಿಮೆಯ ಅಲೆಗಳಲಿ
ಬಯಕೆಗಳ
ನೊರೆ ಏಳಿಸಿ  ಚಕ್ಕಂದವಾಡುವನು
ಮತ್ತೆರಡುವಾರದಲಿ ರಕ್ತದೋಕುಳಿಯಲಿ
ಗುಳ್ಳೆಗಳನೊಡೆವನು

ಚಂದಮ ಸಾಗರರ ಚಕ್ಕಂದದಲಿ
ಜಪ್ಪಿಸಿ ಅಪ್ಪಿದೊಡೆ
ಬಯಕೆಫಲ ಹುಡುಗಿ
ಯೋಚಿಸು ನಿನಗೇನು ಬೇಕೆಂದು
-ದೀಪಕ್

ಗುರುವಾರ, ಡಿಸೆಂಬರ್ 21, 2017

ಕವಿತೆಹುಟ್ಟುವ ಸಮಯ

ಏನನ್ನೋ ಯಾರನ್ನೋ
ನೆನೆದನಗೆ
ಬರೆಯಲಾಗದಿನಿಯ

ಉತ್ಕಟಕ್ಕರೆಯ
ಭಾವಗಳು
ಅಕ್ಕರ ರೂಪ
ಪಡೆದಾಗ
ಕವನವಾಗುವುದೋ
ಗೆಳೆಯ

ನದಿ ಮೂಲ
ಋಷಿ ಮೂಲ
ಕವನದಾ ಮೂಲವನಾ
ಬೊಮ್ಮನೇ ಬಲ್ಲ
ಪಿಡಿದು ಬರೆದು
ನುಡಿವುದಷ್ಟೇ
ಎನ್ ಕಾಯಕ
ಇದಕೆ ಸಂಶಯಬೇಡ
ಸುರರಈಶ

ಪದಗಳ ಗಾಳದಿ
ಭಾವದ ಶ್ರುತಿಗೆ
ಹಿಡಿದು ದುಡಿಸಬೇಕು
ತಿದಿಯನು ಒತ್ತಿ
ತಿದ್ದಿ ತೀಡಿ
ರೂಪು ನೀಡಬೇಕು

ಎಲ್ಲೋ ಮೀಟಿ
ಏನೋ ತಾಗಿ
ಹಳೆಯ
ಮಧುರ ನೆನಪು
ಹೃದಯದ ಮಿಡಿತ
ಏರಿದ ಬಡಿತ
ಜೀವಕೆ
ವಿಲಿವಿಲಿ ನುಲಿತ
ನೆನಪುಗಳೇ
ನಿನಗಿದೋ
ಅಶ್ರು ತರ್ಪಣ
ಆಗದು ನಿಮ್ಮೊಂದಿಗೆ
ಕಾವ್ಯ ಸಿಂಚನ
-ದೀಪಕ್

ಶುಕ್ರವಾರ, ಡಿಸೆಂಬರ್ 15, 2017

ವಿದ್ಯೆ

ವಿದ್ಯೆ ವಿನಯ ಕಲಿಸುವುದಂತೆ
ಆದರೆ
ನಾ ನೋಡಿದ್ದು
ದೇಶ ತೊರೆವುದನ್ನಷ್ಟೇ
***

ವಿದ್ಯೆ ಸಹನೆ ಕಲಿಸುವುದಂತೆ
ಆದರೆ ಕಲಿತವರಲಿ
ಒಣ ಪ್ರತಿಷ್ಠೆ
ಅಸಹನೆ ಮತ್ಸರ...
***

ಹೆಣ್ಣುಕರುಣಾಮೃತ
ನಾದಿನಿ ಅತ್ತೆಯರಿಗೆ
ಬರೀ ಬಾಯಿಮಾತ

***


ಬುಧವಾರ, ನವೆಂಬರ್ 29, 2017

ಕೃಷ್ಣ

ಕೇಳಲಿಲ್ಲ ಮೊರೆ
ಕಾಣಲಿಲ್ಲ ಮೋರೆ
ಎದುರು ಬಾರೆ
ಮೊಗವ ತೋರೆ
ಕಾಣೆಯಾಯಿತು ತಾರೆ
ಸರಿಸು ನಸುಕಿನತೆರೆ

ಸೋಮವಾರ, ನವೆಂಬರ್ 27, 2017

ಸದ್ದೇ ಮಾಡುತ್ತಿಲ್ಲ

ಸದ್ದೇ ಮಾಡುತಿಲ್ಲ
ನಿನ್ನ ರಥ ಚಕ್ರ ಪಾಂಚಜನ್ಯ
ಮುರಿಯಲಾಗುತಿಲ್ಲವೇ
ಶ್ರುತಕೀರ್ತಿಗಿತ್ತ ವರ
ಹೋಯಿತೆಲ್ಲಿ
ನಿನ್ನ ಯದಾ ಯದಾ
ನಾವೆಲ್ಲ
ಬೇಡುತಿಹೆವು
ದಯ ದಯ

ಕುಬ್ಜನಾಗಿದ್ದುಬಿಡುವೆ

ಭೋರ್ಗರೆವ ಸದ್ದು ಹೊರಗೆ
ನೆನಪ ಕಲರವ ಒಳಗೆ

ದೂರದಲ್ಲಿ ಕೇಳುತಿತ್ತು
ನಾನಿನಗೆ ಜೋಡಿ ಅಲ್ಲವೇನು

ಪಾತಾಳ ಗರಡಿಹಿಡಿದು
ಕತ್ತಲಲಿ ಕೆಳಗಿಳಿದು
ದೊರೆಯದ್ದರ ಶೋಧ

ಅಂತರಾಳದೊಳೆಲ್ಲೂ
ಕೇಳಲಿಲ್ಲ
ನಿನ್ನಹೃದಯ ಬಡಿತ
ಇಲ್ಲಿ ಬರೀ ವ್ಯರ್ಥ ತುಡಿತ

ಕಟ್ಟಡಮೇಲೇರಿದಷ್ಟು
ಆಳ ಪಾಯ
ನಮಬಂಧಕಪಾಯ

ಕಿಡಕಿ ಗಾಳಿ ಉಲ್ಲಾಸ
ನನಗೆ
ಒಳಗೆ ಬಿರು ಸೆಖೆ ನಿನಗೆ

ನಿನಗೇನು ಗೊತ್ತು
ನೀ ಕೇಳಬಹುದು
ಕಣ ಕಣಕೆ ಚಣ ಚಣವೂ
ಉಣ ಬಡಿಸುವಾಹ್ಲಾದ ?

ಅನಿಸುತ್ತದೆ
ನಾಬೆಳೆವುದೂ ಬೇಡ
ನೀ ಆಳಕಿಳಿವುದೂ ಬೇಡ
ನಾ ಕುಬ್ಜನಾಗಿದ್ದುಬಿಡುವೆ
ಹುಡುಗಿ

ಮಂಗಳವಾರ, ನವೆಂಬರ್ 14, 2017

ನನಸು 2

ದಿನಗಳುರುಳುತ್ತಿವೆ
ಅಗಮನಕೆ
ದಿನಗಳೆಣಿಕೆ
ನಡೆಯುತ್ತಿದೆ
ಬಲಿಯಾಗದ ಸಮಯ
ಬದುಕಿಗರ್ಥ ಕಾಣುವ ಪರಿ
ನಡುವೆ
ಹೊಯ್ದಾಡುತ್ತಿದೆ ಜೀವನ

ಸಮಯವೇ ಚಿಂತೆ
ಉರುಳದೆಂದು
ಬೇಸತ್ತಿದೆ
ನಿತ್ಯ ಜಪಮಾಡು
ಮನದಲಿ
ಬೇಗಬಾರೆಂದು
ಬೇಗೆ ತೀರೆಂದು
ನೀನೇ ನನ್ನಯ ಬಿಂಬ
ಬೆರಿನ್ನೇನಿಲ್ಲ

ಭಾನುವಾರ, ನವೆಂಬರ್ 5, 2017

ನನಸು೧

ಹುಟ್ಟದಾನಿನ್ನಿಂದ
ನಿರೀಕ್ಷಿಸಲೇನಿದೆ ಕಂದ
ಹುಟ್ಟಿಬಾ
ನಗುತ ಬಾ
ಊನರಹಿತವಾಗಿ ಬಾ
ಮನಗಳು 
ಜಿಡ್ಡುಹಿಡಿಯುತಿವೆ
ಅದ ನೀ ಬೆಸೆ ಬಾ
ಸಾಮಾಜಿಕ ತೊಡರ
ನೀಗಿಸುವ
ಮುಗ್ಧ ನಗೆಯ
ಬೀರುಬಾ
ಆರಾಗಿಹರನೇಳು
ಮಾಡುಬಾ

ಗೋಪಾಲ

ಸದ್ದೇ ಮಾಡುತಿಲ್ಲ
ನಿನ್ನ ರಥ ಚಕ್ರ ಪಾಂಚಜನ್ಯ,
ಮುರಿಯಲಾಗುತಿಲ್ಲವೇ
ಶ್ರುತಕೀರ್ತಿಗಿತ್ತ ವರ?
ಹೋಯಿತೆಲ್ಲಿ
ನಿನ್ನ ಯದಾ ಯದಾ ,
ನಾವೆಲ್ಲ
ಬೇಡುತಿಹೆವು
ದಯ ದಯ

ಗುರುವಾರ, ನವೆಂಬರ್ 2, 2017

ಕಿಡಿ

ಹೊತ್ತಿದೆ ಕಿಡಿ,
ಕಾಪಿಡು
ಗಾಳಿನೀಡು
ಬಿರುಗಾಳಿಯ ತಡೆ
ಉರುವಲ ನೀಡು
ಉಸಿರುಗಟ್ಟಿಸದೆ
ಹೊಗೆ ಕೆಮ್ಮು
ಬರದಂತೆ
ಆತುರ ಬೇಡ,
ತಾಳ್ಮೆ ಕಾಳಜಿಯೆ
ಗೆಲುವಿ ಸೂತ್ರ

ಬುಧವಾರ, ನವೆಂಬರ್ 1, 2017

ಅರಿವು

ಮುನ್ನುಗ್ಗಿ ನಡೆನೀ,
ಜಾತಿ ಕುಲಗಳ ಮೀರಿ
ಮಂದಿರ ಮಸೀದಿಗಳನು 
ಮರೆತು
ಹಿರಿಯ ಕಿರಿಯರೆನ್ನದೆ
ಮೇಲು ಕೀಳೆಂದೆನ್ನದೆ
ಅಂಧಾಕಾರವನೆಲ್ಲ
ತೊಡೆದು
ನಾವೆಲ್ಲರೊಂದೆ
ಎಂದರಿವಿನೆಡೆಗೆ
ದೀಪಕ್
🙏🏿

ಕುರುಬನೊಬ್ಬ ಬೇಕು

ಕುರುಬನೊಬ್ಬ ಬೇಕು
ಮೆಂದೆ ಚದುರಿ ಹೋಗದಂತೆ
ಬ್ಯಾ ಬ್ಯಾ ರಾಗ ಹೊರಡಿಸುವಂತೆ
ದೊಡ್ಡಿಹಾದಿಯ ತೋರಲು
ಕುರುಬನೊಬ್ಬ ಬೇಕು

ತುಪ್ಪಳ ಅತಿಯಾಗದಂತೆ
ನೆರೆಯ ನೆಲವನು ಮೇಯದಂತೆ
ಚುಟುಕು ಹುಲ್ಲನು ಮೆಯಿಸುತ್ತ
ಹುಲಿಯ ಬಾಯಿಗೆ
ಬೀಳದಂತೆ ಕಾಯಲು,
ದೊಡ್ಡಿಗೂ ಹುಲ್ಲು ಹೊರುವಂತ
ಕುರುಬನೊಬ್ಬ ಬೇಕು
ಈ ಸಾಹಿತ್ಯ ಪಯಣಕೆ
ಕುರುಬನೊಬ್ಬ ಬೇಕು

ಮಂಗಳವಾರ, ಅಕ್ಟೋಬರ್ 24, 2017

ಅಭಿವೃದ್ಧಿ


ಮರ ಕಡಿದರು
ಕಂಬ ನೆತ್ತರು
ತುದಿಗೊಂದು
ಕ್ಯಾಮರ

ಮಂಗಳವಾರ, ಅಕ್ಟೋಬರ್ 17, 2017

ನೋವೆಂದು

ನೋವೆಂದು ಕುಳಿತಾರೆ
ಯಾರೀಗೆ ಸುಖ ಉ಼ಂಟೊ
ನೋವಾ ಕಂಡವರೇ
ಜಗವೆಲ್ಲ
ನೋವ ಕಂಡವರೇ
ಜಗವೆಲ್ಲಾ ಇದ್ದಾರು
ನೋವೆಂದು
ಹಲುಬುವರ್ಯಾರಿಲ್ಲ

ನೋವೆಂದು ಹಲುಬುತಾ
ಜೀವಾಬಿಟ್ಟವರಿಲ್ಲ
ಜೀವ ಬಿಟ್ಟವನು ಹಲುಬಿಲ್ಲ
ಜೀವಾ ಬಿಟ್ಟವನು ಹಲುಬಿಲ್ಲ
ಶಿವನಾಣೆ
ನೋವ ಸುಖವಾನವನೆಂದು
ಉಂಡಿಲ್ಲ

ನೋವಾ ದುಃಖವನುಂಡೂ
ಸುಖದಾ ನಿದ್ರೆಯಕಂಡು
ಬಂದಾ ಬದುಕೇ
ಜಯಬದುಕು
ಬಂಧ ಬದುಕೇ
ಜಯಬದುಕು
ಶಿವನಾಣೆ
ಹಲುಬುವಾ ಬದುಕು
ಏನ್ ಬದುಕೊ
-ದೀಪಕ್

ಬುಧವಾರ, ಅಕ್ಟೋಬರ್ 11, 2017

ಭೂ'ರಮೆ'

ಮನದೊಳಿದ್ದುದನು ಸುರಿದಳು
ತಾಪ ಆವಿಯಾಯಿತು  ಮರುಗಿ ಮತ್ತೂ ಸೃವಿಸಿದಳು
ನದಿಯಾಗಿ ಹರಿದಳು
ಅವ ಅಷ್ಟೇ ವೇಗಾವಾಗಿ ಹೀರಿಕೊಳ್ಳುತ್ತಲೇ ಹೋದ ಅಂದಿನಿಂದಿಂದಿನವರೆಗೂ ಅವರ ಆಟವಿನ್ನೂ ಮುಗಿದಿಲ್ಲ.

ನನಗೊಂದು ಹೆಸರಿಡು ಗೆಳೆಯ ಸ್ನೇಹಿತ ಮಗ ಅಪ್ಪ ಇನಿಯ ಮಾಮ ಕಾಕ?
ನೀ ಹೀಗೇ ಸುಂದರ ಹುಡುಗಿ
ಹೆಸರು ಕೆಡಿಸುವುದು ನಿನ್ನಂದವ

ಆಕೆ ಬಿಡಲಿಲ್ಲ
ಹೆಸರಿಡೆಂದು ಭೋರ್ಗರೆದಳು
ರಚ್ಚೆಹಿಡಿದಳು
ಸೋನೆಯಾದಳು
ಇವ ಉತ್ತು ಬಿತ್ತಿ
ಬೆಳೆಯುತ್ತ ಹೋದ

ದಣಿದು ವಿಶ್ರಮಿಸಿದಳು
ಇವ ಕಡಿದು ಸುಗ್ಗಿ ಮಾಡಿದ
ಹೆಸರಿಲ್ಲವೆಂಬುದ ನೆನೆದು ಕುದ್ದಳು
ಬೆವರಹನಿಗಳಾದವು
ತುಂತುರು
ರಚ್ಚೆಹಿಡಿವಳೆಂದಿವನು
ನೊಗ ಕಟ್ಟಿ ಸಜ್ಜಾದ
ಮುನಿಸಿಕೊಂಡವಳು
ಹಿಂತಿರುಗಿದಳು
***
ಬರುವಳೆಂದು ಕಾಯ್ದ
ಕಾದು ಬೆಂಡಾದ
ಕೊರಗಿದ
ಮರುಗಿದ
ನರಳಿದ
ಕಂಗಾಲಾದ
ಬಾರೆಂದು
ಬೇಡಿದ
ಕಾಡಿದ
ಹೆಸರಿಡುವೆನೆಂದ
ಪೂಜಿಸುವೆನೆಂದ
ಸ್ತುತಿಸುವೆನೆಂದ

ಹೆಸರಿಡಬೇಕೆಂದಳು
ನಿತ್ಯ ನಮಿಸೆಂದಳು
ಭಜಿಸಬೇಕೆಂದಳು
ಭುಜಿಸಬೇಕೆಂದಳು
ಪೂಜಿಸಬೇಕೆಂದಳು
ಇವನೆಲ್ಲವನೊಪ್ಪಿದ
ಅವಳಡಿಯಾಳಾದ
**

ಯುಗ ಯುಗಗಳಾದರು
ಇನ್ನೂ ಮುಗಿದಿಲ್ಲ
ಇವರ ಚಕ್ಕಂದ
ಇವನವಳ ಕಂದ
ಇವರ ಜೋಡಿ
ಬಲು ಚಂದ

-ದೀಪಕ್

ದೊಡ್ಡವರು

ಇವರು ದೊಡ್ಡವರು
ಬೆಳೆದಪ್ರೌಢರು
ಡೊಂಕಕೀಯ್ವ ಬೆಲೆ
ಸುಂಕಕಿಲ್ಲ

ಸಿಹಿರೋಗಿಗು ಬೇಕು
ಪಾಕದಲಿದ್ದಿಹ ಕಬ್ಬು
ಮೆಂತೆಹಾಗಲಗಳಿವರಿಗೆ ಗಬ್ಬು

ಏಣಿ ಹಿಡಿವವಬೇಕು
ಮೇಲಕೇರೆ
ಹೇಳದಿರುವವ ಬೇಕು!

ಎಚ್ಚರಿಸುವವ ಬೇಕು
ಎಬ್ಬಿಸದಂತಿರಬೇಕೆಬ್ಬಿಸಿ

ಸೆರೆ ಬೇಕು
ಸೆರಗು ಬೇಕು
ಬೆಳಗದುಸುಕಲಿರಬೇಕು

ಗುರುವಾರ, ಅಕ್ಟೋಬರ್ 5, 2017

ತಳ್ಳು

ತಳ್ಳುತ ದೂರ ದೂರ
ನೀಸನಿಹವಿರೆಂದು ದೂರ
ಹೇಳಿದುದ ಮರೆಯದೆಬಾರ
ಮರೆತೇಕಿದೆಂದು ದೂರ
ನಂಬದಿರೆ ಹೊಣೆಯಾರ
ಅಲ್ಲುಳಿವುದು ಬರೀ ತಕರಾರ
ಒಡಗೂಡುವುದು ಕಹಿನಾರು
ಮನಸು ದೂರ ದೂರ
ಸಂಬಂಧಗಳಾರುವುವು ದೂರ
ಮತ್ತೆ ದೂರದೂರ ಎಂಬ ದೂರ
ದೂರದಾಚೆಗಿನ ಬದುಕ ಸುಂದರ
ತೊರೆನೀ ದೂರ
ನೋಡು ಬಾರ
ನೀ ಒಲವತೋರ

ಗುರುವಾರ, ಸೆಪ್ಟೆಂಬರ್ 21, 2017

ಬೋಧನೆ

ಹೃದಯ ತೆರೆದಿಡೆಂದು
ಬೋಧಿಸುವರು
ತೆರೆದಿಡೆ,
ಕುದಿವರು
ಒಡೆವರು
ಮುರಿವರು
ಮುರಿದು
ಸಂಭ್ರಮಿಸುವರು
ಜಗ
ಹೇಳುವುದೊಂದು
ಮಾಡುವುದು
ಇನ್ನೊಂದು
-ದೀಪಕ್

ದಡ್ಡ

ಹಾಕು ಪೆಗ್ಗಿನ ಮೇಲೆ ಪೆಗ್ಗು
ಯಾಕಂದರೆ ನೀ ದೊಡ್ಡ  ಗುಗ್ಗು
ತಿಳಿ ಮುರಿಯಲಾಗದು
ಜನರ ಸೋಗು
ದುಃಖದಲಿ
ಕಳೆದು ಕೊಳುವೆ
ನೀ ಬದುಕ ಮೊಗ್ಗು
ಹಾಕು ಪೆಗ್ಗಿನ ಮೇಲೆ ಪೆಗ್ಗು
ಹಾಗೆ ಸುಮ್ಮನೆ

ಮಂಗಳವಾರ, ಜುಲೈ 25, 2017

ಹಾದಿಯಲಿ ತೂಕಡಿಸುತ

ಹಾದಿಯಲಿ ತೂಕಡಿಸುತ
ನೆನಪುಗಳು ಸಾಲು ಸಾಲು,

ಮಧುರ ಕಾಡುವ ನೆನಪುಗಳು
ದೂರ ಜಾರಿದಷ್ಟು
ಮುತ್ತುವ ನೆನಪುಗಳು

ನಗು, ಮೈಮಾಟ,ಸನಿಹ, ಅಪ್ಪುಗೆ, ಸಂಗ, ಮಾತುಗಳು ಯಾವುದು ಕಾಡುವುದೋ?

ನೆನಪುಗಳು ಕಾಡುತಾವೇ
ನೀನಿಲ್ಲ
ಇದ್ದಿದ್ದರೆ ಸಾಧ್ಯವಾಗುತ್ತಿತ್ತೇನೋ
ನೆನಪ ಭ್ರಮೆ ಹರಿದು ನೈಜವಾಗಿ
ಬದುಕಲು

ದೀಪಕ್

ಗೆಳತಿ

ಕೆದಕದಿರೆನ್ನಭಾವಗಳ
ಹುದುಗಿಹ ಪ್ರೇಮವ
ಹೆಳವನಾಗಿಹೆನು
ಕನ್ನಡಿಯ ಗಂಟೆಂದು
ಗಂಟಲದುಮಿಹೆನು
ಮಿಸುಕಿಸದಿರು
ನಾ ಅತ್ತು ಬಿಟ್ಟೇನು

ಸೋಮವಾರ, ಜೂನ್ 12, 2017

ಬದುಕು ದೊಂಬರಾಟ

ಯೋಚಿಸಬೇಕಿತ್ತೆ
ನಾ ಉಸಿರುವಮುನ್ನ,
ಬೇರುಗಳ ಸಡಿಲಿಸಿ
ಬೇರುಬಿಡಬೇಕಿದೆ,
ಕನಸಿನರಾಜ್ಯದೊಳು
ವ್ಯಾಜ್ಯಗಲಿಲ್ಲ ನೋಡು

ನಿನ್ನೊಳೊಂದಾದೆ
ಪದ ಗಾಳದಿ,
ಕತ್ತಲಿನಾಳದ ಬೇರುಗಳು
ನಮ್ಮುಸಿರ ಹೀರಲು
ನಿನ್ನಸಿರನುಳಿಸಿದೆ;
ಇನ್ನೇನು ನೀಡಲಾಗಲಿಲ್ಲ
ನೀಗುವಮುನ್ನ,

ಕ್ಷಮೆಯಿರಲಿ
ಜೊತೆಗೆರಡು ಕೊಡಲಿ
ಕಡಿಯಬೇಕು
ಕಡಿದು ಬದುಕಬೇಕು
ನವಿರುಭವಾಗಳ
ನೆತ್ತರಿನಿಂದ
ಕಾಪಿಡಬೇಕು
ಬದುಕು ದೋಂಬರಾಟ
-ದೀಪಕ್

ಶುಕ್ರವಾರ, ಜೂನ್ 2, 2017

4

ಮರದ ಕೆಳಗೆ ತಾನು ಕೂತು
ಕೊಳಲ ಮೇಲೆ ಬೆರಳನಿಟ್ಟು
ತುಟಿಯನೊತ್ತಿ  ಉಸಿರುಕೊಟ್ಟು
ಸುಧೆಯ ಹರಿಸುತಿದ್ದನು

ನೀರಿಗಾಗಿ ಬಂದ ರಾಧೆ
ಮನದಪೂರ ಅವನ ಬಾಧೆ
ನೀರಮರೆತು
ಗಾನದಲ್ಲೇ ಮಿಂದು ನೆನೆದು ಎದ್ದಳು
ಮುರುಳಿಗಾನ ಮೋಹನಾಂಗ
ಭಾವಬಿರಿದು ಹಾಡುತಿರಲು
ನರ್ತಿಸುವರ
ಗೆಜ್ಜೆಹೆಜ್ಜೆಗೆ
ಇಳೆಯು ಪುಳಕಗೊಂಡಿತು

ತುಂಬು ಕಳೆಯ
ಹಾಸು ಹೊದ್ದು ಮಲಗಿರಲು
ಲತೆಯತುಂಬ ಮಲ್ಲೆ ಘಮಲು
ಊರತುಂಬಿ ಹರಡಿರಲು
ಚೋರನಿವನು
ಎದೆಯಭಾವ ಹರಿ ಹರಿದು
ರಾಗ ಹೊಮ್ಮಿಸುತಿದ್ದನು
ಮೈಮರೆತ ಭೂಮಿತಾಯಒಡಲು
ಕಣ್ಣುಮುಚ್ಚಿ
ನಾದಪುಳಕದಿ
ತಾಳಹಾಕುತಿದ್ದಿತು

3

ಕೊಳಲ ನಾದ
ಆಹಾ ಸ್ವಾದ
ಕೇಳಲಿಂಪು
ನಿರ್ವಿವಾದ
ಕಣ್ಣ ಮುಚ್ಚಿ ಕರಣ ಬಿಚ್ಚೆ
ಮೈಮನ ರೋಮಾಂಚನ

ನದಿಯ ಹಾಗೆ
ಸ್ವರವು ಹರಿಯೆ
ಸ್ವಾದಿಸುವರು
ಆಲಿಸುವರು
ಭುಜಿಸಿ ಭಜಿಸಿ
ನೃತ್ಯಿಸುವರು
ಕೇಳಲಿವನ
ಮುರಳಿನಾದ
ಬದುಕು ಪುಳಕ
ಎನುವರು
-ದೀಪಕ್

2

ಕೊಳಲ ಮೊರೆತ
ಏನೋ ಸೆಳೆತ
ಕೇಳುತೆಲ್ಲ ಸ್ಥಂಭೀಭೂತ

ನಾದ ಹೊಮ್ಮುತಿರಲು
ಹೊರಗೆ
ಧುಮುಕುತಿತ್ತು
ಕೇಳ್ವ ಕಿವಿಗೆ
ಬೆರಳ ವರಸೆ
ನಾದವನ್ನು
ಏರುಪೇರು ಮಾಡಲು

ಎದೆಯ ಭಾವ ಹೊರಗೆ ಹರಿದು
ಕೊಳಲಿನೊಡಲ ತುಂಬುತಿರಲು
ಬೆರಳನಾಟ್ಯ ಭಾವಲಾಸ್ಯ
ಕಣ್ಣುಮನವ ತುಂಬಿತು
-ದೀಪಕ್

ಗುರುವಾರ, ಜೂನ್ 1, 2017

1

ಕಡೆವಕೋಲ ದೂರತಳ್ಳಿ
ಮೊಸರ ಗಡಿಗೆ ಹಿಂದೆ ಬಿದ್ದು
ಸಿಕ್ಕ ಬೆಣ್ಣೆಯನ್ನು ಮೆದ್ದು
ಕೊಳಲ ನುಡಿಸುತಿದ್ದನು

ಕೊಳಲ ನುಡಿಸೆ
ಮನವ ತಣಿಸೆ
ಕುಡಿದಂತೆ
ಹಾಲು ಬೊಗಸೆ
ನೆರೆದರು ಸೊಗಸ ಕೇಳಲು
ಮೇಯುತಿದ್ದ ತರುಗಳೆಲ್ಲ
ಆಲಿಸುತ್ತ ನಿಂತವು

ನೀರತರಲು ಹೊರಟ ನೀರೆ
ದನಿಯ ಕೇಳಿ ಸನಿಹ ಬಾರೆ
ಮುದ್ದು ಕಂದನನ್ನು ಕಂಡು
ಜಗವ ಮರೆತು ಬಿಟ್ಟಳು
-ದೀಪಕ್

ಸೋಮವಾರ, ಮೇ 15, 2017

ಪ್ರೀತಿ

ನಸುಕಲ್ಲಿ ಹರಿದಾ ನಿದ್ರೆ
ವಿಷಯಗಳ ಚಿಂತಿಸುತ ಬಿದ್ದೆ
ಪ್ರೀತೀಯ ಅರ್ಥವನುಡುಕುತ ತಡವರಿಸುತ್ತಿದ್ದೆ

ಗೆಳತಿ ಉಸಿರಿದಳು
ಪ್ರೀತಿ ಮನದ
ಪ್ರತಿಮೆ ಕಣೋ ,
ಪದ ಪದಾರ್ಥವ
ಮೀರಿದ ಭಾವ...
ಪಡೆಯಲೇನೂ
ಇಲ್ಲಾ ಇದರಲಿ;
ಕೊಡುತ
ನಲಿಯುವುದನ್ನ ಕಲಿ;
ತಪ್ಪ ಕ್ಷಮಿಸುವ
ಭಾವವೆ ಪ್ರೀತಿ,
ತಪ್ಪ ಒಪ್ಪುವುದದರಲೊಂದು
ನಿತಿ ,
ಸಿಟ್ಟು ಸೆಡವುಗಳನು ಮೀರಿ ಬದುಕನು
ಮುಂತಳ್ಳುವುದೇ
ಪ್ರೀತಿ,
ಮಹಾತ್ಯಾಗ ಮೂರ್ತಿ  ಕಣೋ
ಕೊಟ್ಟಷ್ಟು ಅರ್ಥಗಳ
ಪಡೆವುದದೊಂದೆ
ನಮ್ಮ ಮಿತಿಯ 
ಮೀರುವುದದೊಂದೆ

ನಿದ್ರೆಭಂಗವಾಗಿ ಎದ್ದವಗೆ
ಬರಲಿಲ್ಲ ಮತ್ತೆ ನಿದ್ರೆ

ಅತ್ತು ಬಿಡಬಾರದೇ

ಇನ್ನೆಷ್ಟು ದಿನ
ಹೆರಿಗೆಯಾಗದ
ಭಾವಗಳ
ಹೊತ್ತು ತಿರುಗುವೆ?

ಕೇಳು,
ಸಣ್ಣ  ನೋವು ಗಳಿಗೂ
ಅತ್ತು ಬಿಡಬೇಕು
ಕಣ್ಣೀರಿಗೇನು
ಗೊತ್ತುಭಾವಾಭಾವ?
ಅದುದರಿದರೆ ಮೂಡುವುದು
ತೃಪ್ತಿಭಾವ

ಕಂಡ ಕನಸುಗಳನೊತ್ತೆಷ್ಟು
ತಿರುಗುವೆ ಹೇಳೆ?
ಸ್ವಲ್ಪ ಬಯಕೆ
ಸ್ವಾರ್ಥಗಳ
ಮೈಗೂಡಿಸಿಕೊ
ಎಲ್ಲ ತೊರೆದ
ಸಂತರಲ್ಲ ನಾವು
ನಮಗಿಂತ ಮುಖ್ಯ
ಬೇರಾವುದೂ ಇಲ್ಲ
ಬೇರೆಯದಲಕ್ಷಿಸುವುದೂ
ಬೇಕಾಗಿಲ್ಲ
ಕೆಲ ಹನಿಗಳನುಳಿಸಿಕೊ
ಹಸಿಯಾಗದಿರೆ
ಒಡಲಿಗೆ ಬೇಕಾದೀತು
ಒಮ್ಮೆ ಅತ್ತು ಬಿಡಬಾರದೇ
-ದೀಪಕ್

ಸೋಮವಾರ, ಏಪ್ರಿಲ್ 24, 2017

ಹೀಗೆ

ಏಕಾಂತದೊಂದಿಗೆ ಮೌನವಾಗಿ
ಸಂಭಾಷಿಸುತ್ತಿರುತ್ತೇನೆ...
ಏನೀ ಜೀವನ
ಏನಿದರುದ್ದೇಶ
ನನ್ನಿರುವಿಕೆಯರ್ಥವೇನು

,,,,,,,,,,ಯಾರಾದರೂ ಬಂದು
ಯೋಚನಾ ಲಹರಿಯನು
ಮುರಿಯುತ್ತಾರೆ
,,,,
ಮತ್ತೆ ಏಕಾಂತ , ಯೋಚನೆಗಳು
ಏನೀ ಸಂಬಂಧಗಳು
ಯಾತಕೀ ಇಹ ಬಂಧುಗಳು
ಉತ್ತರ ಸಿಗದೆ
ಪುಸ್ತಕ ಅನುಭವಗಳ ಮೊರೆ
ಹೋಗುತ್ತೇನೆ ...
ಮತ್ತೆ ಏಕಾಂತ
ಬೆಂಬಿಡದ ಭೂತ
ಅದರೊಂದಿಗೆ
ಮುಂದುವರಿಯುವ ಬದುಕು
ಯೋಚನೆಗಳ ಸಾಲು ಸಾಲು
-ದೀಪಕ್

ಶನಿವಾರ, ಏಪ್ರಿಲ್ 1, 2017

ಹನಿಹನಿ

ಹೀಗೇಕೆ
ನಿನ್ನ ಮಾತುಗಳು
ನನ್ನ ಕಿವಿಗೆ ಬರೀ ಸಡ್ಡು
***
ಅತಿಯಾಗಿ ಪ್ರೀತಿಸುವುದರ ಮೊದಲ ಲಕ್ಷಣ ಗೋಳುಹೊಯ್ದುಕೊಳ್ಳುವುದು
ಉದಾ ನಾನು ನೀನು
***
ಏನು ಮಾತನಾಡುವೆನೆಂದೆನಗೆ ತಿಳಿಯದು ,
ಕಾರಣ ನಿನ್ನ ನೋವ ನಲಿವಾಗಿಸಬಲ್ಲೆಎಂಬ ವಿಶ್ವಾಸ

***
ನಿಸ್ತಂತುದನಿಗೆ ನೀ ಸಿಗದ ದಿನ ಪಾಪ;
ನಿನ್ನ ಸಿಗಿವಷ್ಟು ಕೋಪ

ಶನಿವಾರ, ಮಾರ್ಚ್ 18, 2017

ನಾನೊಬ್ಬ ನಾಸ್ತಿಕ

ನಿತ್ಯ ಮಜ್ಜನ
ಶುಭ್ರಉಡುಪುಟ್ಟು
ದೇವರ ಮನೆಗೆ ಹೋಗಿ
ಗಣೇಶ ಲಿಂಗ ಬಸವರ
ನೀರೊಳದ್ದಿ
ಬಟ್ಟೆಯಲಿ ಒರೆಸಿ
ಮಂಟಪದಲಿ ಜೋಡಿಸುತ
ಸತ್ಯಂ ಮಾತಾ ಗೊಣಗು

ದೀಪಕೆಣ್ಣೆಯ ಸುರಿದು
ಕೆರೆದೊಂದುಕಡ್ಡಿಯಲೆರಡೂ
ದೀಪವ ಹಚ್ಚಿ
ಮೂರು ಗಂಧದಕಡ್ಡಿಗಳಿಗೆ
ಬೆಂಕಿ ತಾಗಿಸಿ
ಕುಂಕುಮ
ಹೂವು
ವಿಭೂತಿ
ಗಂಧ
ಗಂಟೆಯ ಸದ್ದು
ಪೂರ್ಣಮಾದಾ
ಪೂರ್ಣಮಿದಂ
ಪಠಣ
ಕರ್ಪೂರದಾರತಿ
ಧೂಪದೊಗೆಗಳ ನಡುವೆ ಕುಳಿತು
ಕಣ್ಮುಚ್ಚಿ
ಉರು ಹೊಡೆದ
ವಕೃತುಂಡ ಮಹಾಕಾಯ
ಓಂ ಭೂರ್ ಭುವಸ್ವಃ
ಬದುಕ ಕ್ರಿಯೆ

ನಿರಾಕಾರಕಾಕಾರವನೀಡಿ
ಪ್ರತಿಷ್ಠಾಪಿಸಿ
ಭುಜಿಸಿ ಭಸ್ಮ ಮಾಡುವುದು

ಕಾಮನ ಬಿಲ್ಲು

ಸಪ್ತ ವರ್ಣ ನೀಡಿ
ಬೆಳಕು ಬೆಳ್ಳಗಾಯಿತು
ಸಪ್ತ ವರ್ಣ ಹೀರಿ
ಕಣ್ಣು
ಕಪ್ಪಗಾಯಿತು

ಗುರುವಾರ, ಫೆಬ್ರವರಿ 9, 2017

ಹೈಕು

ಸೃಷ್ಟಿಯಲಿರುವುದೆಲ್ಲವೂ
ಸೊಟ್ಟ
ಉದಾಹರಣೆ

ಮಂಗಳ ಗ್ರಹ

ಸಂಜೆ ಪಡುವಣದಿ
ಮತ್ತದೇ
ಮಂಗಳಗ್ರಹ

ದಶಕಗಳ  ಹಿಂದೆ
ಗ್ರಂಥಾಲಯದಾಚೆ
ಮೂಲೆಯಲಿ ಕುಳಿತು
ಗೆಳತಿಗೆಹೇಳಿದ್ದ ನೆನಪು

"ನಾವೆಲ್ಲಿದ್ದರೇನು
ನೆನಪಾದಾಗ
ಮಂಗಳ ನೋಡಿ ಮಾತಾಡು
ನಾನೂ ಹಾಗೆ
ಮಾಡುವೆ"

ಗೆಳತಿ ನನ ನೆನೆದಿರಬೇಕಿಂದು,
ಮಂಗಳನ ನೋಡುತ್ತ
ಆ ಹಳೇ ತಾಜಾ ಮಾತು
ನೆನಪಾಯಿತು

ಮಂಗಳಗ್ರಹ ನೋಡುತ
ಹೇಳಿದೆ
"ನಾನಿನ್ನ ಇಂದಿಗೂ ಪ್ರೀತಿಸುವೆ ಗೆಳತಿ
ನಾನಾರೋಗ್ಯ
ನೀನಾರೋಗ್ಯವೇ ?"
ಜೊತೆಗೊಂದು ಮುಗುಳ್ನಗು
ಅವಳದನು ಕಂಡಾಗ
ನೆನಪಾಗಲೆಂದು

ಒಮ್ಮೆ ಮಕ್ಕಾಳಾಟವೆನಿಸುವುದು
ಆದರೂ
ಏನೋ ತೃಪ್ತಿ ಭಾವ
-ದೀಪಕ್

ಶುಕ್ರವಾರ, ಫೆಬ್ರವರಿ 3, 2017

ಒಂಟಿತನ

ಒಂಟಿತನವೇನೆಂದು
ಕೇಳದಿರು ನನ್ನನ್ನು
ಕಳೆದಿರುವೆ ದಶಕವನು
ಒಂಟಿ ಸಲಗದಂತೆ
ಕಟ್ಟೆಯ ಅಶ್ವತ್ಥದಂತೆ

ಒಂಟಿಯಾಗಿ 
ಪೂರಾ ಮಾಡಿದ್ದೆಲ್ಲ
ಅರ್ಧ
ಅಲ್ಲಿರಲಿಲ್ಲ
ನೋಡು ನಿನ್ನರ್ಧ

ಅದಕ್ಕೆ
ಹೆಜ್ಜೆಜ್ಜೆಗೂ ಮೂದಲಿಕೆ
ಸಂಶಯ
ಎಲ್ಲದಿಕ್ಕುಗಳಲು
ನಿನ್ನ ಶೋಧ
ಜೊತೆಗೆನ್ನ ಕ್ರೋಧ

ಬದ್ಧ

I
ಹಲವಾರು ಬಾರಿ

ಮನೆತೊರೆದಿದ್ದೇನೆ,

ಮನ ಕೇಳದೆ

ಹಿಂತಿರುಗಿದ್ದೇನೆ?

ನಾನಲ್ಲ ರಾಜ,

ನನಗಿರಲಿಲ್ಲ

ಮಡದಿ ಪುತ್ರ ರಾಜ್ಯ

ಅರ್ಜಿತಾಲರ್ಜಿ ಆಸ್ತಿ

ಆದರೂ

ಹರಿಯಲಾಗದ

ವ್ಯಾಮೋಹ

ಮಾತೃ ಬಂಧ

ನಾ ಕೇವಲ

ಸಂಸಾರಕ್ಕೆ ಬದ್ಧ

ಹಗಲು ರಾತ್ರಿಯ ಕಾಯ್ದು

ರಾತ್ರಿ ಹಗಲನು ಕಾಯ್ದು

ಮೌನದ ಕಫನ್ ಸೇರಲು

ಸಿದ್ಧ

ಅದಕ್ಕೆ

ಅದಕ್ಕೇ

ನಾನಗಲಿಲ್ಲ ಬುದ್ಧ

-ದೀಪಕ್

ಗುರುವಾರ, ಫೆಬ್ರವರಿ 2, 2017

ಮೋಡ

ಮೋಡಗಳ ಹಿಂದೆ
ಓಡುತಿದ್ದವನ ಹಿಡಿದು
ಅಂಗಿ ತೊಡಿಸುತಿದ್ದಳು
ಮೋಡ ಅಳುತ್ತಿತ್ತು...

ಮಂಗಳವಾರ, ಜನವರಿ 31, 2017

ಕನಸು

ಬದುಕಿನಲ್ಲಿ ಕನಸುಗಳು
ಕಳೆದುಹೋಗುತ್ತಿವೆ
ಯಾರಾದರೂ
ಹುಡುಕಿ ಕೊಡಿ

ಸೇವೆಯಾಕಾಂಕ್ಷೆಯನು
ಸಮಾಜ
ಕೊಲ್ಲುತ್ತಿದೆ
ಯಾರಾದರೂ
ದಾರಿಕೊಡಿ

ಅಜ್ಞಾನ
ಸಾಕ್ಷರರಲಿ
ಮೆರೆದು
ಕುಣಿದು
ಕುಪ್ಪಳಿಸುತಿದೆ
ಯಾರಾದರೂ
ಬೆಳಕು ಕೊಡಿ

ಪ್ರೀತಿ ಪ್ರೇಮ ಗಳಿಂದು
ಮಾರುಕಟ್ಟೆ ಸರಕಾಗಿವೆ
ಯಾರಾದರೂ ಅದನ್ನು
ಬಿಡಿಸಿಕೊಡಿ

ಆದರ್ಶತೆ ಇಂದು
ಬೆನ್ನ ಮೂಳೆ
ಮುರಿದುಕೊಂಡಿದೆ
ಯಾರಾದರೂ ಅದಕೆ
ಚಿಕಿತ್ಸೆ ಕೊಡಿ

ನನ್ನ ನಾಳಿನ ಕಂದ
ಕನಸು ಸೇವೆ
ಜ್ಞಾನ
ಪ್ರೀತಿ ಪ್ರೇಮ
ಆದರ್ಶಗಳನ್ನು
ತಪ್ಪು ತಿಳಿಯಬಾರದು

ಕನಸುಗಳು
ಕಳೆದು ಹೋಗಿವೆ
ಯಾರಾದರೂ
ಹುಡುಕಿ ಕೊಡಿ

ಶನಿವಾರ, ಜನವರಿ 21, 2017

ಮರೆಯಬೇಕಿದೆ

ಮರೆಯಬೇಕಿದೆ
ನೆನಪುಗಳನೆಲ್ಲ
ಅಳಿಸಿಹಾಕಿ
ದಿನ
ಬೆಳಗು
ರಾತ್ರಿ
ವಾರ
ತಿಥಿಗಳನು
ನೆನಪಿಗೆ ಬಾರದಂತೆ.

ಪ್ರೀತಿ ಸ್ಫುರಿಸಿದ್ದ
ಗಳೆಯ
ಗೆಳತಿ
ಪ್ರೇಮಿ
ಅಪ್ಪ ಅಮ್ಮ ಅಕ್ಕ ಅಣ್ಣ ತಮ್ಮ ತಂಗಿಯರ ನೆನಪುಗಳನು

ಬೆನ್ನ ಹಿಂದೆ ಚೂರಿ
ಹಾಕಿದವರ
ಮರೆಯಬೇಕಿದೆ
ನೇರ ನುಡಿಯಲು ಬಾರದ
ಭಿಕಾರಿ ಸಮಾಜವ
ಬದಲಿಸಬೇಕಿದೆ

ಶುಕ್ರವಾರ, ಜನವರಿ 20, 2017

ಚೂರುಗಳು

ನೀ ತೊರೆದಮೇಲೆ
ಇನ್ನೂ ಪದಗಳ
ಹುಡುಕುತ್ತಿರುವೆ
ನನ್ನ ವಿರಹದಾಳ
ತೋಡಲು
-
ರಾತ್ರಿ ನಿಬೀಡತೆಯಲಿ
ಬಯಲಾಗಿದ್ದ ಬೆತ್ತಲೆಗಳು
ಇನ್ನೂ ಹಸಿರಾಗಿದೆ ಹುಡುಗಿ
-
ನಾ ಮನೆ ತೊರೆದೆ ,
ನೀನೂ
ಮನೆತೊರೆಯಬೇಕಿತ್ತೆ ಹುಡುಗಿ
ನನ್ನ ನೋವ
ಪಾಲು ಪಡೆಯಲು
-
ನಿನಗೇಳದೇ ಉಳಿದ
ಪ್ರೇಮ ನಿವೇದನೆಗಳಿಂದು
ಪದಗಳ ತುಂಬಿದ
ಕವನವಾಗಿದೆ ಹುಡುಗಿ
-

ನಿನ್ನ ನೋಡದಿರೆ ಹುಚ್ಚೇಳುತಿದ್ದ ಮನ
ನೀನಿರದೇ ಬಾಳುವುದ
ಕಲಿತಿದೆ ಹುಡುಗಿ,
ನಾ ಅದನೋಡಿ
ಕಲಿಯಬೇಕಿದೆ ಇನ್ನೂ
-
ಎಲ್ಲ ಕಳೆದುಕೊಂಡು
ಒಂಟಿ ಷರಾಬಿಯಾಗ
ಹೊರಟಾಗ
ಕೈಹಿಡಿದ ನೀನು ಯಾರೆ
ಸಹಯಾತ್ರಿ
---
ಚಿರ ವಿರಹಿನಾನು
ಪ್ರೇಮಿಗಳಷ್ಟೇ ಬದಲು
ಅಮ್ಮ
ಅಂಕಗಳು
ಆಟ
ಪ್ರಶಸ್ತಿಗಳು
ತಮ್ಮ
ಮನೆ
ಗೆಳೆಯರು
ಲಲನೆಯರು
ಕನಸುಗಳು
ಷರಾಬು
ಅಪ್ಪ
ಯಾರೂಯಾವುದೂ ಇಲ್ಲ
ಭ್ರಮೆ ಈ ಜೀವನ
ನಾ ಚಿರ ವಿರಹಿ
---

ನನಗೆ ನಾನೇ ಗೆಳೆಯ
ನನಗೆ ನಾನೇ ಇನಿಯ
ನನ್ನ ಮೀರುವಯತ್ನ
ಯುಗಗಳಿಂದ
ನಡೆದಿಹುದು
ಕೊನೆ ಇನ್ನೂ ಸಿಕ್ಕಿಲ್ಲ
---

ಬದುಕ ಖಾತರಿ
ವಿನೋದ
ವಿಲಾಸಗಳಿಗಿಂತ
ವಿರಹ
ನೋವುಗಳಲೇ ಹೆಚ್ಚು
----

ಗುರುವಾರ, ಜನವರಿ 19, 2017

ಕನಸು

ನಿನಗಿಲ್ಲವೆ ಕನಸುಗಳು
ಎಲರಂತೆ ಬದುಕಿನಾಸೆಗಳು
ಪ್ರೀತಿ ಗೆಳೆತನದ ಬೆಸುಗೆಗಳು

ಎಲ್ಲವಿಹುದಿಲ್ಲಿ
ಕನಸ ನನಸಾಗಿಸುವರು
ಆಸೆ ಈಡೇರಿಸುವರು
ಪ್ರೀತಿ ಮಾಡುವರು

ಬುಧವಾರ, ಜನವರಿ 18, 2017

ರೂ...

ಬೇರು ಜಾರು ಸೇರಿ
ರೂ ಕಳೆದುಕೊಂಡು
ಬೇಜಾರು ಹುಟ್ಟಿತು
-ದೀಪಕ್

ಮಂಗಳವಾರ, ಜನವರಿ 17, 2017

ಪಾಲಿಷ್

ನಿನ್ನೆ ಶೂ ಪಾಲಿಷ್ ತಂದೆ
ಜೊತೆಗೆ ಸರಣಿ ನೆನಪು
----

ಕಂದು ಪಾಲೀಷ
ಕಪ್ಪುಶೂ ಗೆಹಚ್ಚಿದ್ದ ಕಂಡು
ಗೆಳತಿಗಾರತಿ ಎತ್ತಿದ್ದು
ಕೈ ಗಳಲ್ಲಿ ಕಂದುಬಣ್ಣವಿದ್ದರೂ
ಅದರಲೆ ಒರೆಸಿ ಕೊಂಡ ಕಣ್ಣೀರು ;
ನಿಷ್ಠೂರಿಯಾಗಿ
ನಾಹೊರಳಿ ತೆರಳಿದ್ದು
ನೆನೆದರೆ
ಇಂದು ಸೂಜಿಗವಾಗುವುದು.
------
ಹಾಸ್ಟೆಲ್ಲಿನಲಿ
ಗೆಳೆಯರೊಡಗೂಡಿ
ಮಾಡಿದ ಶೂ ಪಾಲೀಷು
ಇನ್ನೂ ಸ್ಮರಣೀಯ;

ರವಿವಾರದಂದು
ಎಲ್ಲರ ಶೂ ಗಳ ಒಟ್ಟು ಹಾಕಿ
ಆರೇಳು ಮಂದಿ ಒಗ್ಗೂಡಿ
ಯಾಮಾರಿಸಿತಂದ
ಯಾರದೋ
ಪಾಲೀಷು,
ಬ್ರಷ್
ಅನಾಥ ಬನಿಯನ್ನು
ಬೆಡ್ ಶೀಟು.

ಮಗ್ ನೊಳಗಿನ ನೀರಿನಿಂದ
ಹಳೆಯ ಪಾಲೀಷ
ತಿಕ್ಕಲೊಬ್ಬ
ಅದ ಒರೆಸಿ
ಬಿಸಿಲಲಿಡುವನೊಬ್ಬ

ಒಣಗಿದ ಶೂಗಳಿಗೆ
ಬನಿಯನ್ನಿನಲಿ
ಪಾಲೀಷ ಹಚ್ಚಿ
ಅದು ಪೂರ ಶೂಗೆ
ಬ್ರಶ್ನಲ್ಲಿ ತಿಕ್ಕಿ
ಇಬ್ಬರು ಬೆಡ್ ಶೀಟ್ ಹಿಡಿದು
ಶೂ ಫಳಫಳಿಸುವವರೆಗೂ
ಉಜ್ಜಿಬಫಿಂಗ್

ಕೊನೆಗೆ
ಲೇಸ್ ಪೋಣಿಸುವವಗೆ
ಶೂ ರವಾನೆ
ಈ ಸಮಯದಲಿ
ನಮಗೊಬ್ಬ ಮಿತ್ರನಿಂದ
ಸಿಗರೇಟು ಸೇವೆ
ಕೊನೆಗೆ
ಕಾಲ್ಗೆ ಫಳಫಳಿಸುವ ಶೂ
---
ಸಮಯದ
ಮಾಲೀಷಿಗೆ
ಮರೆತುಹೋಗಿದ್ದ
ನೆನಪು ಗಳ
ಮತ್ತೆ ಪಾಲೀಷ ,
ನಿನ್ನೆ ಕೊಂಡ
ಕಪ್ಪು ಶೂ ಪಾಲಿಷ್
-ದೀಪಕ್

ಸೋಮವಾರ, ಜನವರಿ 16, 2017

ಚಿತ್ತಾರ

ನಾ ಬರೀ ಚಿತ್ರವಲ್ಲ ಅಣ್ಣ

ನೋಡ ಇರುವ ರಕ್ತ ಕೆಂಪು

ಎಳೆ ಎಳೆಗಳಾಗಿ

ಪದರದಿ

ಪದ ಜಾರಿಸುವ

ಸಮ್ಮೋಹಿತ ಕುಸುಮನಾ

ನಾ ಬರೀ ಚಿತ್ತಾರ ಅಲ್ಲವಣ್ಣ

ಪ್ರಿಯ ಪ್ರಿಯೆಯರ

ಆಲಿಂಗನದೂತನಾ

ಮಜ್ಜನದಿ ಪೂಸಿಕೊಳುವ

ಅತ್ತರಿನ ಧಾತುನಾ

ನಾ ಬರೀ ಚಿತ್ರಅಲ್ಲವಣ್ಣ

ಔಷಧದೊಳಗೂ ನುಸುಳಿಹ

ಮುಳ್ಳು ರಾಣಿ ನಾ

ನವಾಬ ಲಾಲರ

ಲಾಲನೆಯೊಳು ಬೆಳೆದ

ಗುಲಾಬಿ ನಾನು

ಒಳಗಣ್ಣೊಳು ಕಾಣು

ನಾ ಬರಿ ಚಿತ್ರ ಅಲ್ಲವಣ್ಣ
-ದೀಪಕ್

ಬುಧವಾರ, ಜನವರಿ 4, 2017

 ರಾಜ್ಯ ಆಳುವವರು

.

ಹೌದು,ನಾವೆಲ್ಲರೂ  ಕಳ್ಳರು.

ಚಂದದ ಗೋಪುರಗಳ

 ಕನಸಿನ ಅರಮನೆಗಳ ಕಟ್ಟಿ

ಭೃಮೆಯ ಭ್ರೂಣ ಬಿತ್ತಿ

 ಪೆಡಂಭೂತಗಳ ಬೆಳೆಸುವವರು.

ಹಿತ್ತಾಳೆಯನೇ

ಬಂಗಾರದ ಬೊಗಣಿ ಎಂದು ನಂಬಿಸಿ

ವಾಸನೆಯ ಬಿರಿಯಾನಿ ಬಡಿಸುವವರು.

ಬೇಕು ಬೇಡಗಳ-ಸರಕುಗಳಿಂದ 

ರಾಜಕೀಯ ಮಾಡುವ ದೇಶ ಭಕ್ತರು 

ನಾವು.

ಮುಖನೋಡಿಯೇ 

ಮಣೆಹಾಕುವ,

ತ್ರಿಕಾಲ ಜ್ಞಾನಿಗಳು ನಾವು.

ತತ್ವಗಳಿಲ್ಲದ ತತ್ವಜ್ಞಾನಿಗಳು , 

ಚದುರಂಗ ಪೈಲ್ ವಾನರರು!

ಮಣ್ಣೊಡನೆ ನೆಂಟ ಬೆಸೆದು

ಎಲ್ಲವನೂ ಮಣ್ಣು ಮಾಡುವ

ಸಮಾಧಿವೀರರು.

ಬಣ್ಣದ ಮಾತುಗಳ ಬಲೂನುಗಳನ್ನು

ಮಾರುತ,

ಕಣ್ಣಲ್ಲೇ ಎಲ್ಲ ಅಳೆಯುವ

ಮಹಾನ್ ಚತುರರು

ನಾವು ,

ನಿಮ್ಮ ಕಾಯುವ ಕುರುಬರು.

-ದೀಪಕ್’

ಭಾನುವಾರ, ಜನವರಿ 1, 2017

ನಿಮಿತ್ತ

ಇಲ್ಲದ ಬದುಕಲಿ
ನಾನೆಂಬುದನ ತೂರಿಸಿ
ಎಲ್ಲವ,ತುರಿದು
ಭುಜಿಸಿ
ಹೆಚ್ಚಿದಾಗ ಕಕ್ಕಿ
ಗಂಟಿಟ್ಟು
ಅಜೀರ್ಣತೆಯನೂ ಜೀರ್ಣಿಸಿಕೊಂಡು
ಉಣಲು
ಮಕ್ಕಳು ಮರಿಗಳಿಗೆ
ಹಳಸಿದನು ಉಳಿಸಿ,
ಆ ಮರಿ
ಥೂ ಎಂದುಗಿದು,
ಆಸ್ತಿಯ ಕರಗಿಸಿ
ತುಚ್ಛಿಸಿದಾಗ
ಸಮಾಧಿಯೊಳು ನನ್ನಸ್ಥಿ  ಆಳಲಾಗದೆ ಇರಲಾರದೆ
ನಿರ್ಜಿವ

ನಿಮಿತ್ತವೀ ಬದುಕು
ಇಲ್ಯಾವ ಉದ್ದೇಶಗಳಿಲ್ಲ
ಕಾಲಾಹರಣ ,,,
ಮತ್ತೆ ಮಸಣ
ದೀಪಕ್

ಬ್ಲಾಗ್ ಆರ್ಕೈವ್

Its blog I have created to enter my day to day search & feel like sharing the same with like minded people. I solicit a comment from all my friends.