ಭಾನುವಾರ, ಜೂನ್ 20, 2021

ಪೂರ ಬೆಂದೀತೆಂದು

ಮುಖದ ಮಕಮಲ್ಲಿನ ಪರದೆಯ ತೆಗೆದು ನೀನೊಮ್ಮೆ ನಕ್ಕುಬಿಡಬೇಕಿತ್ತೇ ಗೆಳತಿ,

ಚಮಡಿಯ ಕಪ್ಪನು ದಾಟಿ ಹೃದಯದೊಳಗಿಳಿದು ಜೀವನಾರ್ಭಟವನ್ನೊಮ್ಮೆ ನೋಡಬೇಕಿತ್ತು

ನಿಸ್ತಂತು ಮಾತುಗಳ ತೊರೆದು
ಅಕ್ಷಿಗಳ ಮಾತನ್ನಾದರೂ ನೀ ಹೀರಬೇಕಿತ್ತೆ ಗೆಳತಿ

ಪತಿಸುತರ ಹಂಗ ತೊರೆದು ಆ ಚಣವನಲ್ಲೇ 
ನಾವು ಅನುಭವಿಸಲಿಕ್ಕಿತ್ತು

ಅದಾಗಲಿಲ್ಲ,
ಅದು ಸಂಭವಿಸಿಲ್ಲವೆಂಬ ಖೇದ
ನಿತ್ಯ ಸುಡುತ್ತಿದೆ ಏಕಾಂತವನ್ನು,

ಅರೆ ಬೆಂದಾಚಣಗಳನು
ಪೂರ ಸುಡುತಿರುವೆ 
ಅಂದುಳಿದ
ಈ ಪದಗಳ ಕೆಂಡದಿಂದ,
ಪೂರ ಬೆಂದೀತಿಂದು...

ಶುಕ್ರವಾರ, ಮೇ 14, 2021

ತಕರಾರಿ ಹರಟೆ

ತಕರಾರಿ ಹರಟೆ

ನಿನ್ನೆ ಮಧ್ಯಾಹ್ನ ups ನ ಪ್ಲಾಸ್ಟಿಕ್ ಹೊರ ಕವಚ ಮುರಿದಿದ್ದನ್ನು ನೋಡಿದೆ. ಲಾಕ್ ಡೌನ್ ಕಾರಣ ಆದನ್ನು ಸರಿಮಾಡಲು ಫೆವಿಕ್ವಿಕ್ ದೊರೆಯಲಿಲ್ಲ. ಬೆಳಿಗ್ಗೆ 5.30ಕ್ಕೆ ಎದ್ದವನೆ ಕಾಫಿ ಕುಡಿದು ಅಂಗಡಿಗೆ ಹೊರಟೆ. ಫೆವಿಕ್ವಿಕ್ ಕೇಳಿದರೆ ಪರಿಚಿತ ಅಂಗಡಿಯವನು ಎರಡು ಬೇಕಲ್ಲವೇ ಎಂದು ಕೊಡಹೋದ. ಒಂದೇ ಸಾಕೆಂದು ಹತ್ತು ರೂ ನೀಡಿದ್ದಕ್ಕೆ ತಡಕಾಡಿ ಒಂದು ರೂಪಾಯಿಯ ಐದು ನಾಣ್ಯಗಳನ್ನ ನೀಡಿದರು. ಇನ್ನೂ ಸ್ವಲ್ಪ ದೂರ ನಡೆಯೋಣ ಎನಿಸಿತು. ಮುಂದುವರೆದೆ, ವೃತ್ತದ ಸಮೀಪ ಫರಂಗಿ ಹಣ್ಣನ್ನು 30ರೂ ಕಿಲೋ ಎಂದು ಮಾರುತ್ತಿದ್ದರು, "ತಕ್ಕಡಿ ಇಲ್ಲವೇನಪ್ಪ" ಎಂದು ಕೇಳಿದ್ದಕ್ಕೆ ಆಲ್ಲೇ ತರಕಾರಿ ಮಾರುವವರ ಪಕ್ಕದಲ್ಲಿದ್ದ ಹಣ್ಣಿನಂಗಡಿಯಿಂದ ತಕ್ಕಡಿ ತೆಗೆದು ಗಾಡಿಯಲ್ಲಿರಿಸಿಕೊಂಡು ಹಣ್ಣನ್ನು ತೂಗಿ  ನನಗೆ ಮಾರಿದ. ತರಕಾರಿ ಬೇಕೆಂದು ಹಿಂದಿನ ದಿನ ಬಿಗ್ ಬ್ಯಾಸ್ಕೆಟ್ ನಲ್ಲಿಹಣ್ಣು ತರಕಾರಿಗಳನ್ನು ಆರಿಸಿ ಹಣ ಪಾವತಿಸಲು ಹೋದಾಗ all available slots are booked we will be back soon  ಎಂಬ ಸಂದೇಶ ನೋಡಿ ಕೊರೊನಾ ಆರ್ಭಟ ಎಷ್ಟಿದೆಯಲ್ಲ, ಎಲ್ಲರೂ ಮನೆಯ ಬಾಗಿಲಿಗೆ ತರಕಾರಿ ತರಿಸಿಕೊಳ್ಳುತ್ತಾರೆ ಈಗ, ಅದೂ ಚೌಕಾಸಿ ಇಲ್ಲದೆ ಎಂದುಕೊಂಡು ಸುಮ್ಮನಾಗಿದ್ದೆ.   

     ಕೈಯಲ್ಲೊಂದು ಚೀಲವಿದ್ದಿದ್ದರೆ ಎಲ್ಲ ತರಕಾರಿಯನ್ನು ಕೊಂಡೊಯ್ಯಬಹುದಿತ್ತು ಎಂದು ಅತ್ತಿತ್ತ ನೋಡಿದಾಗ, ತರಕಾರಿ ಅಂಗಡಿಯಾಕೆ ಒಂದು ಈರುಳ್ಳಿ ಚೀಲವನ್ನು ಮಡಿಚಿಡುತ್ತಿದ್ದಳು. 
"ಗಜ್ಜರಿ ಹೇಗೆ?"ಎಂದು ಕೇಳಿದೆ, ನನ್ನತ್ತ ಒಮ್ಮೆ ನೋಡಿ 40ರೂ ಎಂದಳು,ಅರ್ಧ ಕಿಲೋ ಕೊಡಿ ಎಂದೆ. ಹಾಗೆ ಆ ಈರುಳ್ಳಿ ಚೀಲವನ್ನು ಇಸಿದುಕೊಂಡೆ.
 "ಹೀರೆಕಾಯಿ?" 
ಮತ್ತದೇ 40, "ಅರ್ಧ ಕಿಲೋ ಕೊಡಿ" ಎಂದೆ, 
"ಮೂಲಂಗಿ?" 
ಮತ್ತೆ 40 ಎಂದಳು. 
"ಬೀನ್ಸ್ ?"
40ರೂ ಅರ್ಧ ಕಿಲೋ ಎಂದಳು ಖಿಲಾಡಿ, ಬೇಡ ಎಂದ ನಾನು "ನುಗ್ಗೆ ಹೇಗೆ?" ಎಂದು ಕೇಳಿದೆ. 60 ರೂ ಕಿಲೋ ಎಂದವಳಿಗೆ "ಕಾಲು ಕಿಲೋ ಕೊಡಿ" ಎಂದೆ. 
ಹಿಂದೆ ನಾನು ಸಣ್ಣವನಿದ್ದಾಗ ಮನೆ ಮುಂದೆ ಇರುತ್ತಿದ್ದ ನುಗ್ಗೆ ಗಿಡದಲ್ಲಿ ಕಾಯಿಗಳನ್ನ ಕೇಳಿದವರಿಗೆ ಕಿತ್ತುಕೊಂಡು ಹೋಗಿ ಎಂದು ಉಚಿತವಾಗಿ ಕೊಡುತ್ತಿದ್ದದ್ದು ನೆನಪಾಗಿ ಆಕೆಗೆ ಹೇಳಿದೆ, "ಅದಾನ್ಯರು ತಿಂತಿದ್ರು ಮೊದ್ಲು ಬರೀ ಸೊಪ್ಪು ಉಪಯೋಗಿಸ್ತಿದ್ದುದ್ದು " ಎಂದಳಾಕೆ. 
ಸೊಪ್ಪಿನ ಗುಡ್ಡೆಯತ್ತ ಬೆಟ್ಟು ಮಾಡಿ "ಹೇಗೆ" ಎಂದಾದಕ್ಕೆ "ಕೊತ್ತಂಬರಿ ಐದು,ಸಪ್ಸಿಗೆ ಐದು ಪುದಿನ ಎಂಟು ಉಳಿದದ್ದೆಲ್ಲ ಹತ್ತು ರೂಗೆ ಮೂರು ಕಟ್ಟು"
ಒಂದಷ್ಟು ಸೊಪ್ಪು ತೆಗೆದುಕೊಂಡೆ. "ಟೊಮ್ಯಾಟೋ ಹೇಗೆ?" ಅಂದದಕ್ಕೆ "10ರೂ ಕಿಲೋ ಕೊಡಲೇ" ಎಂದಳು. "10 ರೂಗೆ ಎರಡು ಕಿಲೋ ಕೊಡ್ತಾರಲ್ಲ?" ಎಂದದಕ್ಕೆ ತಗೊಳಿ ಎಂದು ಒಂದುಕಾಲು ಕಿಲೋ ತೂಗಿ ಅವಳೇ ಕೊಟ್ಟಿದ್ದ ಚೀಲಕ್ಕೆ ಹಾಕಿದಳು. "ಕೋಸು ಹೇಗೆ?" ಎಂದಾದಕ್ಕೆ "ಎಲೆಕೋಸು 15 ಗೆಡ್ಡೆ 40"ಎಂದವಳಿಗೆ ಎಲೆಕೋಸು ಕೊಡು ಎಂದು ತೆಗೆದುಕೊಂಡೆ. "ನಿಂಬೆಹಣ್ಣು ಬೇಡವೇ?" ಎಂದು ಚೀಲದಿಂದ 5ನಿಂಬೆಹಣ್ಣು ತೆಗೆದು ಇಪ್ಪತ್ತು ರೂ ಎಂದಳು.
"ಹತ್ತು ರೂ ಗೆ ಕೊಡಮ್ಮ ಸಾಕು"ಎಂದಾದಕ್ಕೆ ಎರಡು ನಿಂಬೆ ಹಣ್ಣು ಕೊಟ್ಟಾಗ 
"ಅವಾಗ ಒಂದು ಹೆಚ್ಚ ಕೊಡ್ತಿದ್ದೆ ಇವಾಗ ಇಲ್ಲವಾ?" ಅಂದ ನನಗೆ "ಏನೋ ಜಾಸ್ತಿ ತಗೊಂಡರಿ ಅಂತ ಕೊಡೋಕ್ಬಂದೆ" ಅಂದಳು.
 ಒಟ್ಟು ಎಷ್ಟಾಯಿತು ಎಂದು ನನ್ನಿಂದಲೇ ಲೆಕ್ಕ ಹಾಕಿಸಿ ಹಣ ಇಸಿದುಕೊಂಡಳು.

 ಮನೆಗೆ ತೆರಳಿದೆ. 
ತರಕಾರಿಯನ್ನು ಪರಿಶೀಲಿಸುತ್ತಾ ಮನೆಯಾಕೆ ಇದೆಷ್ಟು, ಇದು, ಎಂದು ನನ್ನ ವಿಚಾರಣೆ ಶುರುವಾಯಿತು. ಓ ಬಿಗ್ ಬ್ಯಾಸ್ಕೆಟ್ ನಲ್ಲೂ ಅಷ್ಟೇ ಇದೆ ಎನ್ನೋ ಉದ್ಗಾರ. 
ತರಕಾರಿ ಫ್ರೆಶ್ ಆಗಿ ಚೆನ್ನಾಗಿದೆ,  ಕೊತ್ತಂಬರಿ ಸೊಪ್ಪು ಸಣ್ಣ ಕಟ್ಟಿದೆ, ಐದು ರೂ ಜಾಸ್ತಿ ಆಯ್ತು, ಟೊಮ್ಯಾಟೋ ಸ್ವಲ್ಪ ಹಳೆಯದಿದ್ದಂತಿದೆ, ನಿಂಬೆಹಣ್ಣು ಕೊಳೆಯೋಕ್ ಶುರುವಾಗಿದೆ ಯಾಕೆ ನೋಡ್ಕೊಂಡ್ ತರಲಿಲ್ವಾ? ಈ ತರಕಾರಿ ಅಂಗಡಿಯವರು ಸ್ವಲ್ಪ ನೋಡೋದಿಲ್ಲ ಅಂತ ಗೊತ್ತಾದ್ರೆ ಹ್ಯಾಮಾರಿಸಿ ಬಿಡ್ತಾರೆ, ನನಗೊಂದುಸಲ ಮಾವಿನ ಹಣ್ಣಲ್ಲಿ ಹೀಗೆ ಮಾಡಿದ್ರು ಎಂದು ಹೇಳತೊಡಗಿದಳು.  "ಅಂತೂ ಬೆಳಿಗ್ಗೆ ಬೆಳಿಗ್ಗೆ ಹೋಗಿ ದಂಡಕ್ಕೆ ದುಡ್ಡಿತ್ತು ಬಂದೆ ಅನ್ಸತ್ತೆ" ಎಂದ ನನಗೆ, "ಅದ್ಯಾಕೆ ಹಾಗ್ ಹೇಳ್ತೀರಾ ಚೆನ್ನಾಗಿದೆ ಎಂದೂ ಹೇಳಿದೆನಲ್ಲ" ಎಂದು ನನ್ನೆದುರು ಕೈಯಲ್ಲಿ ಸೌಟು ಹಿಡಿದು ಟೊಂಕಕ್ಕೆ ಕೈಕೊಟ್ಟು ನಿಂತಾಗ "ನಿನಗೇನು ಹೇಳಲಿಲ್ಲ ನಾನು, ನನಗೆ ಹಾಗನ್ನಿಸಿತು ಅಷ್ಟೇ" ಎಂದು ಬಚಾವಾದೆ. 
ನಿತ್ಯ ಏರುತ್ತಿರುವ ಬೆಲೆಗಳು ಲಾಕ್ ಡೌನ್, ಸಿಗದ ಮಾರುಕಟ್ಟೆ, ಬಿಗ್ ಬಾಸ್ಕೆಟ್ನಂತಹ ಮಾರುಕಟ್ಟೆ ತಂತ್ರಜ್ಞರ ಮುಂದೆ ಒಂದು ಕೊಳೆತ ನಿಂಬೆಹಣ್ಣು ಲೆಕ್ಕವೇ?

 ನಂತರ ನಾನು ತಿಂಡಿ ತಿನ್ನುತ್ತಿದ್ದಾಗ
ಮಧ್ಯಾಹ್ನ ಚಿತ್ರಾನ್ನ ಮಾಡಿಬಿಡುವೆ ಜಾಸ್ತಿ ದಿನ ಇಟ್ಟರೆ ನಿಂಬೆಹಣ್ಣು ಕೊಳೆತು ಹೋಗುತ್ತದೆ ಎಂದು ನಾನು ತರಕಾರಿಯಲ್ಲಿ ತಂದ ನಿಂಬೆಹಣ್ಣಿಗೆಉಪಸಂಹಾರದ ಸಮಾಧಾನಕರ ಮಾತೊಂದು ಉದುರಿತು, (ಆಯುಧ ಪೂಜೆಯಂದು ಇದೆ ನಿಂಬೆಹಣ್ಣಿನ ಮೇಲೆ ಕಾರನ್ನು ಚಲಾಯಿಸುವಾಗ ಏನು ಅನಿಸುವುದಿಲ್ಲವೇನೋ?) 
"ಚಾಕು ತಗೊಂಡು ಕೊಳೆತ ಭಾಗ ಕತ್ತರಿಸಿ ಬಿಸಾಡು, ನೀನು ಅದನ್ನು ಉಪಯೋಗಿಸೋವರೆಗೂ ಅದು ಕೆಡಲ್ಲ" ಎಂದು ನಿಂಬೆ ಹಣ್ಣಿಗೆ ಶಾಸ್ತ್ರಚಿಕಿತ್ಸೆಮಾಡಿ ಬೆಳಗಿನ ತಿಂಡಿಯನ್ನು ಮುಗಿಸಿ, ಚಿಕಿತ್ಸಾಲಯಕ್ಕೆ ಹೊರಟೆ.

ಶುಕ್ರವಾರ, ಮೇ 7, 2021

ಪ್ರೇಮಿಸುವುದೆಂದರೆ 
ಸಾವಿನ ನಂತರವೂ 
ಬದುಕುವುದು!

ಸೋಮವಾರ, ಮಾರ್ಚ್ 29, 2021

ಹೋಳಿ

ಬಣ್ಣಗಳ ನಡುವೆ ಕಪ್ಪುಬಿಳುಪು
 ಮೂಡುವುದೇ ಒಣಪು

ಯಾರೊಬರುವರು 
ರಂಗತರುವರು
 ಮರೀಚಿಕೆ

ಆವಿಯಾದ ಕಣ್ಣೀರ ಹಿಂದೆ 
ನನ್ನೊಳಗೆ ಕಂಡೆ
ಸಪ್ತವರ್ಣಗಳದಂಡೆ

ಮತ್ತೆ ಹಂಬಲಿಸಲಿಲ್ಲ
ಬಣ್ಣಗಳ ಬಿಲ್ಲ

ಬುಧವಾರ, ಮಾರ್ಚ್ 17, 2021

ಕೋವಿಡ್ ಕೋವಿ


ಮತ್ತೆ ಬೆಳಗಾಯಿತು,
ರಾತ್ರಿ ಪೂರ ನಿದ್ರೆಯಲ್ಲಿ ಕಳೆದು 
ಇಂದು ಮತ್ತೆ ಬೆಳಗಾಯಿತು,
ನೆರೆ ಮನೆಯ ಬಚ್ಚಲ ಸದ್ದಿಗೆ ಎಚ್ಚರಾಯಿತು!

ಕಾಣದ ವೈರಿಯೊಡನೆ ಹೋರಾಡುತ,
ಢಾಳಾಗಿ ಉಂಡೆದ್ದು..
ಹೊಟ್ಟೆಭಾರಕ್ಕೆ ನಿದ್ರೆಗೆ ಜಾರಿದ್ದ 
ಅನರ್ಹ ಶಿಸ್ತಿನ ಸಿಪಾಯಿ, 

ಸಂಬಳ ಕಾಣದೆ,  ಗಂಟೇ ಇರದ ಯೋಧನಿಗೆ
ನಿದ್ರೆ ಇನ್ನೂ ಮುಗಿದಿರಲಿಲ್ಲ,
ಮುಂಚೂಣಿಯಲ್ಲಿರುವ ಯೋಧ ನೀನು
ಸತ್ತೀಯೆ ಮಲಗು ಎಂದ ಕಮಾಂಡರ್ ಗೆ
ಯಾಕೋ ಮಲಗಿದ್ದ ಯೋಧರನ್ನು 
ಬಡಿದೆಬ್ಬಿಸಿ 
 ಯುದ್ಧಕ್ಕೆ ಒಮ್ಮೆ ಕಳಿಸಬೇಕೆನಿಸಲಿಲ್ಲ.

ಸಂಬಳ ವಿರದಿದ್ದರೂ ಜೀವ ಉಳಿಯಿತಲ್ಲ 
ಎಂದು ಹಿಪೊಕ್ರಿಟನಿಗೆ ಹಿಪೊಕ್ರೆಸಿ ತೋರುತ್ತಾ
 ಕುರಿಗಳಂತಿದ್ದರೆಲ್ಲ,
ಜನ ಹುಳುಗಳಂತೆ ಸಾಯುತ್ತಿದ್ದರೂ
ಮರೆತೇ ಬಿಟ್ಟರು 
ಓದಿದ್ದ ಮೆಡಿsin
ಇನ್ನ ಬದುಕಿರುವುದೇ ಒಂದು sin
-ದೀಪಕ್

ಮಂಗಳವಾರ, ಮಾರ್ಚ್ 16, 2021

ಬ್ರಹ್ಮ

ಅದು ಹಾಗಲ್ಲ ಮಗು

ರಚ್ಚೆ ಬಿಡಲಿಲ್ಲ
ರಾತ್ರಿ ಗಾಢ ಕತ್ತಲೆ ಗಂಟೆಎರಡು
ಕತ್ತಲೆಯೊಳಗೆ ಏಳುತ್ತಾ ಕೂರುತ್ತಾ ಒಮ್ಮೊಮ್ಮೆ ಮೂಗ ಮುಚ್ಚಿ
ಮಲಗಲೊಲ್ಲೆ 
ಎಂಬಳುವಿನ ಪ್ರತಿಭಟನೆ
ಹಾಲು ಕುಡಿದರೆ ಮಲಗೀಯಾಳು
.... ಇಲ್ಲ
ಭುಜದಲಿ ಪ್ರಭಾತಫೆರಿ
ನಡು ನಡುವೆ ಇದಾವ ಪರಿಯ ಸೇಡು
ಏನು ಅರಿಯದು ಹೌದು

ನಾನಪ್ಪ  ಆದರೆ
ರಕ್ತಮಾಂಸ ನನದಲ್ಲ
ನಾನೇನು ಹೊತ್ತೆನೆ ಹೆತ್ತೆನೆ
ಹಾಲೂಡಿದೆನೆ
ಅಪ್ಪನ ಪಟ್ಟ
ನಾಲ್ಕು ಕಾಸಖರ್ಚು ಮಾಡಲು
ನನ್ನವರೆಂದು ಹುಸಿ ಕರುಬಲು
ಕೋಟಿಕೋಟಿ ಬ್ರಹ್ಮರಲಿ ಫಲಿಸಿದೊಂದೆ ಬ್ರಹ್ಮ
ಉಳಿದ ಬ್ರಹ್ಮರು
ಓಟದಲ್ಲಿ ಸೋತರು
ಪ್ರಳಯದಲಿ ಹೋದರು
ಆದರೂ ನಾನಪ್ಪ
ಸ್ಖಲಿತ ಫಲಿತ ದಲಿತಬ್ರಹ್ಮ

ಇಂದು ಮುಂಜಾನೆ

ಇಂದು ಮುಂಜಾನೆ ರವಿ ಮೂಡದೆ ಕೆಲಹನಿಗಳು ಗಿಡ ಮರ ನೆಲ ರಸ್ತೆಗಳ ತೋಯ್ಸಿದವುಹೊರ ಬಂದಾಗ ಹನಿ ಹೊತ್ತ ಹೂವು ತಗೆ ತೂಗುತ್ತಿತ್ತು
ರಸ್ತೆಯ ತುಂಬಾ ಪಾರಿಜಾತ ಆಕಾಶ ಮಲ್ಲಿಗೆ ಹೂಗಳ ಹಾಸಿತ್ತು  ಬೀಸುವ ತಂಗಾಳಿಯಲಿ ಮಣ್ಣಿನ ಘಮವಿತ್ತು ಜೊತೆಗೆ ಹೂವಿನ ಪರಿಮಳವು ಬೆರೆತಿತ್ತು
ಮೈನ ಕೆಂಬೂತ ಚಿಟ್ಟು ಪಾರಿವಾಳ ಅಳಿಲುಗಳು ಕಚೇರಿಯ ನಡೆಸಿತ್ತು 

ಜೊತೆಗೆ ದೂರದಲ್ಲಿ ಮಯ್ಗಾರ ಮಾದೇವ ಎಂಬ ಗಲಾಟೆ ಪ್ರಕೃತಿ ಸೊಬಗಿಗೆ ದೃಷ್ಟಿ ಬೊಟ್ಟಿನಂತಿತ್ತು
ಮಲಗಿದ್ದ ಮಗಳು ಬಟ್ಟಲುಕಂಗಳ ತೆಗೆದು ಏನದೇನೆಂದು ದೃಷ್ಟಿಯಲೇ ಕೆದಕಿತ್ತು

ಇಂದಿನ ಮಳೆ

ಅಂತರ್ಜಾಲದ ಈ ಮಳೆಯಲ್ಲಿ ಚಳಿಯಲ್ಲಿ ಪೆನ್ನು ಕಾಗದಗಳು ಕಮರಿ ಹೋದವು
ಪುಸ್ತಕಗಳು ಧೂಳು ತಿಂದವು

ಮೋಡಗಳ ತುಂಬುತ್ತಾ
ಜನರ ಸಮಯವನ್ನು ತಿನ್ನುತ್ತ
ಜನಕ್ಕೆ ಜಗಳದ ಸರಕನೀಡಿ
ಕೆಲಸ ಕಿತ್ತು ಭ್ರಮೆಯ ಹಚ್ಚಿ  ಗುಂಡಿ ಬಂದ್ ಆಗಲು ಎಲ್ಲ ನಿಸ್ತೇಜ
ಕಳೆದದ್ದೇನೆಂದು ಎಂದೂ ತಿಳಿಯದು
ಪಡೆದ ಭ್ರಮೆಯ ಸರಕ ಇಟ್ಟು ಕೊಳ್ಳಲಾಗದೆ ಮಾರಲಾಗದೆ ಮತಿಭ್ರಮಿಸುವ ಮುನ್ನ 

ಎಚ್ಚೆತ್ತು ಕೊಳ್ಳಬೇಕು

ಪುಟ್ಟ ಪ್ರಪಂಚದ ಪುಟಾಣಿ

ಭಾನುವಾರ ಕೆಲಸಕ್ಕೆ ರಜೆ. ತಿಂಡಿ ಮುಗಿಸಿ ಕ್ಯಾಮೆರಾ ಹಿಡಿದು ಮನೆ ಮುಂದಿನ ಹೂಕುಂಡ ಗಳಲ್ಲಿರುವುದನ್ನು ತ್ರಿಪಾದಿ ಸಹಾಯದಿಂದ ಚಿತ್ರಿಸುತ್ತಿದ್ದೆ.  ಆರೋಗ್ಯಕಳೆದು ಕೊಳ್ಳುತ್ತಿರುವ ವೀಳ್ಯದೆಲೆ ಬಳ್ಳಿಯ ಕೊಂಬೆ ಮೇಲೆ ಏನೋ ಓಡಿದಂತಾಯಿತು. ಕ್ಯಾಮೆರಾದಿಂದ ಕಣ್ಣುಕಿತ್ತು ಗಿಡದೆಡೆಗೆ ನೋಡಿದೆ. ಏನೂ ಕಾಣಲಿಲ್ಲ. ಕಣ್ಣಾಮುಚ್ಚಾಲೆಯಾಡುತ್ತಿರಬಹುದೇ ಎಂದು ಎಲೆಗಳನ್ನು ಅತ್ತಿತ್ತ ಸರಿಸಿ ನೋಡಿದೆ. ಟಿಸಿಲಿನಲ್ಲಿ ಈ ಭೂಪ!
 ಚಿತ್ರಿಸಿ ವಿಡಿಯೋ ಮಾಡಿದೆ ಇದರದ್ದು. ಅದೇನು ಚಟುವಟಿಕೇರಿ ಈ ಜೇಡದ್ದು ಅಬ್ಬಾ! ಒಂದು ಕಡೆ ನಿಲ್ಲೋದಿಲ್ಲ. ಅತ್ತಿತ್ತ ಒಡೆಲ್ ಕೆಳಗೆ ಅವಿತು ಬಿಡೋದು ಕೆಲವೊಮ್ಮೆಬಳ್ಳಿಯ ಟಿಸಿಲ ಮೇಲೆ ಓಡಾಡೋದು. , ನಾನು ವರ್ಣ ರಂಜಿತವಾಗಿ ಗೂಗಲ್ ಗಾಗಲ್ ಸಹಾಯದಿಂದ bhageera ಅಂದುಕೊಂಡಿದ್ದೆ. ಗೆಳೆಯ ವಿಪಿನ್  ಇದನ್ನು carrhotus species ಅಂತ ತಿಳಿಸಿದರು.  Carrhotus ನೆಗೆ ಜೇಡದಲ್ಲಿ 32 ವಿವಿಧ ಪ್ರಭೇಧಗಳಿರುವುದಂತೆ. 
ಹಂಬಲಿಸಿ ಪಡೆದ ನೀನು
Humble ಆಗಿಸಲು
ಬೇಡ ಬರಬೇಡ ಎಂದೇಯ

ಒಳಗ ತಿವಿತಿವಿದು 

ಸೋಮವಾರ, ಮಾರ್ಚ್ 15, 2021

ಶಾಯಿ

ಒರೆಸಿಬಿಡು ಅಳಿಸಿಬಿಡು 
ಗುರುತಿರದ ಹಾಗೆ,
ಹುಡುಕಿದರು ಕೆದಕಿದರು ಮತ್ತೆ ಸಿಗದಹಾಗೆ,
ದಂಡವಾದದು ಮತ್ತೆ 
ನೆನಪಾಗದ ಹಾಗೆ

ಬ್ಲಾಗ್ ಆರ್ಕೈವ್

Its blog I have created to enter my day to day search & feel like sharing the same with like minded people. I solicit a comment from all my friends.