ಬುಧವಾರ, ಏಪ್ರಿಲ್ 4, 2018

ನೆನಪಿನ ಶಾಯಿ

ನಾನು ಸಣ್ಣವನಿದ್ದಾಗ ಶಾಲೆಯಲ್ಲಿ ಬರೆಯಲು ನಮಗೆ ಪಾಠಿ ಬಳಪ ಕೊಟ್ಟರು. ದಿನವೂ ಅದರಲ್ಲಿ ಅಕ್ಷರಗಳನ್ನು
ತಿದ್ದುತ್ತಿದ್ದೆವು. ಒಂದನೇ ತರಗತಿ ಮುಗಿಯಿತು. ಎರಡನೇ ತರಗತಿಯಲ್ಲಿ ಪಾಠಿ ಬಳಪ ದೋಡನೆ ನಿತ್ಯ ತರಗತಿಗೆ ಪುಸ್ತಕ ಸೀಸದಕಡ್ಡಿ
ಸೇರಿ ಕೊಂಡವು. ಬೆಳಿಗ್ಗೆ ಶಾಲೆಯಲ್ಲಿ ಪ್ರಾರ್ಥನೆ ಮುಗಿಸಿ ತರಗತಿಗೆ ಹೋದೊಡನೆ ಹಾಜರಿ ಹಾಕುತ್ತಿದ್ದರು, ನಂತರ ಸುಮಾರು ಅರ್ಧ ಗಂಟೆ ಪುಸ್ತಕದಲ್ಲಿ ಇದ್ದ ಪದ್ಯಗಳು ಹಾಗೂ ಮಗ್ಗಿಗಳನ್ನು ಎಲ್ಲರೂ ಒಕ್ಕೊರಲಿನ ಲ್ಲಿ ಹಾಡಿ /ಹೇಳಿ ಪಾಠಿಮೇಲೆ ಬರೆದ ಮನೆಪಾಠ ತೋರಿಸಿ ನೀರು ಹಾಕಿ ಪಾಠಿ ಯನ್ನ ತೊಳೆಯುತ್ತಿದ್ದೆವು.  ಸೀಸದ ಕಡ್ಡಿ ಯಲ್ಲಿ ಬರೆಯುವುದೇ ಒಂದು ತ್ರಾಸು ನನಗೆ. ಅದರ ಮೊನಚು ಬಳು ಬೇಗ ಮೊಂಡಾಗುತ್ತಿ ತ್ತು, ಅಕ್ಷರಗಳು ದೊಡ್ಡ ದೊಡ್ಡ ದಾಗಿರುತ್ತಿದ್ದವು, ತುಂಬಾ ಚಂದ ಕಾಣಲಿ ಎಂದು ಒತ್ತಿ ಬರೆದಾಗೆಲ್ಲ  ಮೂತಿ ಮೂರಿಯುತ್ತಿತ್ತು. ಮೆಂಡರ್ ಗಳು ಕೊಂಡಿದ್ದಷ್ಟೇ ನೆನಪು, ಅದನ್ನು ಉಪಯೋಗಿಸಿದ್ದು ನೆನಪೇ ಇಲ್ಲ,
ಅದಿರುವುದೆ ಕಳೆಯಲು ಎಂಬಂತಾಗಿತ್ತು ಶಾಲಾದಿನಗಳಲ್ಲಿ. ಆವಾಗಲೇ ನನ್ನ ಬ್ಲೇಡ್ ನ ನಂಟು ಶುರುವಾಗಿದ್ದು. ಅಣ್ಣ ನ shaving blade ಗಳಿಗೆ ನನ್ನ ದಾಳಿ ನಿತ್ಯ ಹಾಗೂ ನಿರಂತರ ವಾಗಿತ್ತು. ಅಣ್ಣ ಎಷ್ಟೊ ಬಾರಿ ಬ್ಲೇಡ್ ಯಾರು ತೆಗೆದ್ರಿ ಎಂದು ಬಚ್ಚಲಿನಿಂದ ದನಿ ಮಾಡಿದರೆ ನಾನು ಮನೆಯಿಂದಾಚೆ ಓಡುತ್ತಿದ್ದೆ. ಒಮ್ಮೊಮ್ಮೆ ಅಡುಗೆ ಮನೆಯಲ್ಲಿ ಅಮ್ಮನೆದುರು ಕೂತಿದ್ದರೆ ಏನೂ ಮಾಡಲಾಗದೆ ಮೇಂಡರ್ ಕಳೆದೊಯ್ತು ಅದಕ್ಕೆ ಬ್ಲೇಡ್ ತಗೊಂಡೆ ಅಂತ ಹೇಳೋ ಹೊತ್ತಿಗೆ ಅಳುಬಂದು ಬಿಡುತ್ತಿತ್ತು.
ಹೀಗಿತ್ತು ಸೀಸದಕಡ್ಡಿಯ ಆರಂಭದ ದಿನಗಳು.

ಮೂರನೇ ತರಗತಿ ತಲುಪಿದಾಗ ಪಾಠಿ ಸೀಸದ ಕಡ್ಡಿಯೊಡನೆ ball pen ಉಪಯೋಗಿಸಿ ಬರೆಯುವುದನ್ನು ಕಡ್ಡಾಯ ಮಾಡಿದರು. ಮನೆಯಲ್ಲಿ ಅಣ್ಣ ಎಬಿಸಿಡಿ ಹೇಳಿಕೊಡಲು ಆರಂಭಿಸಿದರು.
ಬಾಲ್ ಪಾಯಿಂಟ್ ಪೆನ್  ನನಗೆ ತರವರಿ ಕಿರಿಕಿರಿ ನೀಡಿದೆ. ಎಂದೂ ಒಂದೂ ದುಂಡು ಅಕ್ಷರ ಬರೆಯದೆ ಇರುವುದು ಅದರಲ್ಲಿ ಪ್ರಮುಖ ತೊಂದರೆ ಉಳಿದವು ಬರೆಯ ಹೋದರೆ ಮಧ್ಯದಲ್ಲಿ ಬಿಟ್ಟು ಹೋಗುವುದು,  ಕಟ್ ಕಟ್ ಬರೆಯುವುದು,
ಜೇಬಿನಲ್ಲಿ ಇಟ್ಟಾಗಲೆ ಶಾಯಿ ಆಚೆ ಬಂದು ಜೇಬೆಲ್ಲ ಬಣ್ಣವಾಗುವುದು, ಮುಚ್ಚಳ ಕಳೆದು ಹೋಗುವುದು, ಗೋಡೆಗಳ ಮೇಲೆ ಮೊದಲು ಮೂಡಿ ನಂತರ ಒಲ್ಲೆ ಎನ್ನುವುದು, ಯಾವ ಮಾಯೆಯಲ್ಲೋ ಗೆಳೆಯರ ಬಳಿ ಸೇರುವುದು,  ಬರೆಯುತ್ತಿಲ್ಲ ಎಂದು ದೂರಿದಾಗ ಪರೀಕ್ಷೆ ಮಾಡುವ ಅಮ್ಮನ ಕೈಯಲ್ಲಿ ಅದ್ಭುತವಾದ ದುಂಡು ದುಂಡು ಅಕ್ಷರಗಳನ್ನು ಹೊರಹಾಕಿ, ಸೋಮಾರಿ ಪಟ್ಟಕಟ್ಟಿ ಹೊಡೆಸುವುದು ಹೀಗೆ ಲೇಖನಿ ಬಹಳ ಕಾಟವನ್ನು ನೀಡಿತು. ಐವತ್ತು ಪೈಸೆ ಯಿಂದ ಶುರುವಾಗುತ್ತಿದ್ದ ಲೇಖನಿಗಳು ಹಲವಾರು ವಿಧಗಳಲ್ಲಿ ಬರುತ್ತಿದ್ದವು (ಬರುತ್ತವೆ) ಉತ್ತಮ ಲೇಖನಿ ಎಂದರೆ ಅದರೊಳಗೊಂದು ಸ್ಪ್ರಿಂಗ್ ಇರುತ್ತಿತ್ತು. ಅಮ್ಮ ಯಾವಾಗಲೂ ಲೆಕ್ಕ ಬರೆಯುವ ಪುಸ್ತಕದೊಳಗೆ ಒಂದು ಲೇಖನಿ ಇಟ್ಟಿರುತ್ತಿದ್ದರು. ನನಗೆ ಪೂಜೆಯಾದನಂತರ ತುರ್ತು ಪರಿಸ್ಥಿತಿ ಯಲ್ಲಿ ಮಾತ್ರ ಅದನ್ನ ಉಪಯೋಗಿಸಲು ಕೊಡುತ್ತಿದ್ದರು .
ಹೀಗೆ ನನಗೂ ಲೇಖನಿಗೂ ತುಂಬಾ ರಂಪಾಟ ಜಟಾಪಟಿ ನಡೆದು ನಾನು ಲೇಖನಿಯ ದ್ವೇಷಿಯಾದೆ.
ನಾಲ್ಕನೇ ತರಗತಿ ಸೇರಿದಾಗ ನಮಗೆಲ್ಲ ಶಾಯಿ ಭರಿತ ಲೇಖನಿ ಉಪಯೋಗಿಸುವುದನ್ನು ಕಡ್ಡಾಯ ಮಾಡಿದರು. ಎರಡು ರೂಪಾಯಿಯಿಂದ ಮೂರು ರೂಪಾಯಿ ಬೆಲೆ ಇತ್ತು. ಹೀರೋ ಪೆನ್ ೧೨ ರೂಪಾಯಿ ! ಮನೆಯಲ್ಲಿ ನೀನು ಮೊದಲ ಸ್ಥಾನ ಬಂದರೆ ಐದನೇ ತರಗತಿಗೆ ಹೀರೋ ಪೆನ್ ಕೊಡಿಸುವೆ ಎಂದು ಅಮ್ಮ ಹೇಳಿದರು.

ಶಾಯಿ ಲೇಖನಿ ಜೊತೆಗೆ ಶಾಯಿ ಕುಡಿಕೆ ಸೇರಿ ಕೊಂಡಿತು. ಶಾಯಿ ಲೇಖನಿಗಳ ಹಣೆಬರಹ ಬಾಲ್ ಪಾಯಿಂಟ್ ಪೆನ್ ಗಿಂತ ಭಯಾನಕವಾಗಿತ್ತು. ಕೈಗೆ ಶಾಯಿ ಹತ್ತದೆ ಎಂದೂ ಲೇಖನಿ ಮೂಡಲೇ ಇಲ್ಲ. ಆಗಾಗ ಬರೆಯಲು ಹೋದಾಗ ಮುಷ್ಕರ ಹೋಗುತ್ತಿದ್ದವು. ಅಲ್ಲಲ್ಲೇ ಒದರಿ ಕೊನೆ ಪುಟ, ಗೋಡೆ , ಸ್ನೇಹಿತರ ಅಂಗಿ ಪಾಠಿ ಚೀಲ ಎಲ್ಲವೂ ಶಾಯಿಮಯ.
ಲೇಖನಿ ಸರಿಯಾಗಿ ಬರೆಯಲಿ ಎಂದು, ನಾಲಿಗೆ ನಿಬ್ ಎಲ್ಲ ತೆಗೆದು ಆಗಾಗ service ಮಾಡುತ್ತಿದ್ದೆವು. ಒಳಗಡೆ ಶಾಯಿ ಹೆಪ್ಪುಗಟ್ಟಿ ಸರಿಯಾಗಿ ಬರೆಯಲಾಗುತ್ತಿಲ್ಲ ಎಂಬ ಗುಮಾನಿ!  ನಮ್ಮ service ಹೊಡೆತಕ್ಕೆ ಲೇಖನಿಗೆ ಯಾವಾಗಲೂ ನೆಗಡಿ!
ಕೈಗಳು ನಿತ್ಯ ಶಾಯಿ ಶಾಯಿ, ಹೆಚ್ಚು leak ಆದರೆ ತಲೆಯೆಲ್ಲಾ ಶಾಯಿಮಯ.
ಹತ್ತು ಪೈಸೆ ನೀಡಿದರೆ ಶಾಯಿ ತುಂಬಿ ಕೊಡುತ್ತಿದ್ದರು. ಆದರೆ ಶಾಯಿ ಚನ್ನಾಗಿರುವುದಿಲ್ಲ ನೀರು ಹಾಕಿರುತ್ತಾರೆ ಎಂದು ಮನೆಗೆ ಶಾಯಿ ಕುಡಿಕೆ ತರುತ್ತಿದ್ದೆವು, ಈಗ ಆ ರೀತಿ ತುಂಬುವ ಪದ್ಧತಿ ಇದೆಯೋ ಇಲ್ಲವೋ ಗೊತ್ತಿಲ್ಲ. ಇಲ್ಲಿಯ ವರೆಗೂ ನಾನು ಕುಡಿಕೆ ಖಾಲಿ ಯಾಗುವವರೆಗು ಶಾಯಿ ಬಳಸಿದ ನೆನಪಿಲ್ಲ. ಒಂದು ಶಾಯಿ ಚೆಲ್ಲಿ ಹೋಗುತ್ತದೆ, ಯಾ ಇಟ್ಟು ಇಟ್ಟು ಹಾಳಾಗುತ್ತದೆ.
ಹೀಗೆ ನಾಲ್ಕನೇ ತರಗತಿಯಲ್ಲಿ ನನ್ನ ಹಾಗೂ ಶಾಯಿ ಲೇಖನಿಯ ಒಡನಾಟ ಆರಂಭವಾಯ್ತು.
ಬಾಲ್ ಪೆನ್ ಗಿಂತ ಈ ಶಾಯಿ ಲೇಖನಿಗಳಲ್ಲಿ ನಮ್ಮ ಕೈ ಬರಹ ಓದಲು ಸಾಧ್ಯ ವಾಗುವುದು. ಬಾಲ್ ಪೆನ್ ಗಳಿಗೆ ಮನೋ ವೇಗವನ್ನು ನೀಡ ಬಹುದೋ ಏನೋ ಶಾಯಿ ಭರಿತ ಲೇಖನಿ ಗಳಿಗೆ ಆ ವೇಗ ನೀಡಲು ಹೋಗಿ ನಾನು ಬೇಕಷ್ಟು nib ಗಳನು ಮುರಿದಿದ್ದೇನೆ . Nib ಗಳನ್ನು ಬದಲಾಯಿಸಲು ಬರುತ್ತಿತ್ತು ಹಾಗೂ ಅಂಗಡಿಯಲ್ಲಿ nib ಗಳು ದೊರೆಯುತ್ತಿದ್ದವು. ಮೈಸೂರಿನ ಸಯ್ಯಾಜಿ ರಾವ್   ರಸ್ತೆಯಲ್ಲಿ ಚಾಮುಂಡಿ ಚಿತ್ರ ಮಂದಿರದ ಬಳಿ ಮೋಹನ್ ಭಂಡಾರ ಹತ್ತಿರ PEN DOCTOR ಎಂಬ ಅಂಗಡಿ ಇತ್ತು. ಎಂದೂ ಅಲ್ಲಿಗೆ ಹೋಗಿ ನಮ್ಮ ಪೆನ್ ನ ಆರೋಗ್ಯ ತಪಾಸಣೆ ಮಾಡಿಸಲಿಲ್ಲ ಅದು ಲೇಖನಿ ಗೆ ಇರುವ ಸಾಮಾಜಿಕ ಸ್ಥಾನಮಾನ ತೋರಿಸುತ್ತದೆ. ಆಕೆ ಸುತ್ತ ಮುತ್ತ ಫುಟ್ ಪಾತಿನಲ್ಲಿ ಗಡಿಯಾರದ ಗಾಜಿನ ಮೇಲಾಗಿರುವ ಗೆರೆಗಳನ್ನು ತೆಗೆದು ಪಾಲಿಶ್ ಮಾಡುವವರು ಕರಿ ಗಾಲಿಯೊಂದಿಗೆ  ಕೂತಿರುತ್ತಿದ್ದರು.  ಈಗ ಪೆನ್ ಡಾಕ್ಟರ್ ಇಲ್ಲ scratch ತೆಗೆದು ಪಾಲಿಶ್ ಮಾಡುವವರೂ ಇಲ್ಲ.

ನಾನು ಪ್ರೌಢಶಾಲೆ ಸೇರಿದಾಗ ನಮ್ಮ ಹಿಂದೀ ಟೀಚರ್ ಹ ಸ್ತ್ತಕ್ಷರಗಳನ್ನು ತುಂಬಾ ಹೀಗೆಳೆಯುತ್ತಿದ್ದರು. ಹಗುರವಾದ ball pen ನಿಮ್ಮ ಅಕ್ಷರ ಗಳನ್ನ ಹಾಳು ಮಾಡಿದೆ. ಕೈಮೇಲೆ ಇಂಕ್ ಪೆನ್ ಕ್ಯಾಪ್ ತೂಕ ಬಿದ್ದರೇನೆ ಅಕ್ಷರಗಳು ದುಂಡಗಾಗುವುದು ಎಂದು ಹೇಳುತ್ತಿದ್ದರು. ಹೀಗೆ ಇಂಕ್ ಪೆನ್ ಬಾಲ್ ಪೆನ್ ಎನ್ನುತ್ತಾ ಹತ್ತನೇ ತರಗತಿ ಹನ್ನೆರಡು, ವಿಶ್ವವಿದ್ಯಾಲಯದ ಹಂತ ತಲುಪಿದೆ. ಈ ಆಯ್ಕೆಗಳು ಒಮ್ಮೊಮ್ಮೆ ಬಹಳ ತಲೆ ಕೆಡಿಸುತ್ತದೆ. ಶಾಯಿ ಲೇಖನಿಯನ್ನು ಉಪಯೋಗಿಸಬೇಕೋ ಬಾಲ್ ಪೆನ್  ಉಪಯೋಗಿಸಬೇಕೋ ಎಂಬ ಕಳವಳಳ ಉಂಟಾಗಿ ಒಮ್ಮೆ ಪರೀಕ್ಷೆ ಬರೆಯಲು ಎರಡು ಇಂಕ್ ಪೆನ್ ಒಂದು ಬಾಲ್ ಪೆನ್ ತೆಗೆದುಕೊಂಡು ಹೋದೆ. ಏನು ಓದಿರದ ವಿಷಯ, ಪುಟಕ್ಕೆ ಒಂದು ಅಂಕ ನೀಡಿದರೂ ಪಾಸ್ ಆಗಬೇಕು ಎಂದು ಬರೋಬರಿ ೪೫ಪುಟ ತುಂಬಿಸಿದೆ. ಬರೆಯಲು ಜೊತೆಗಿದ್ದ ಎರಡು ಹೀರೋಗಳು ಝೀರೋ ಆಗಿ ಬಾಲ್ ಪೆನ್ ಗೆ ಬದಲಾಯಿಸಿ ಇನ್ವಿಜೀಲೇಟರ್ ಸಹಿ ಪಡೆದೆ.
೧೯೯೮ ರಲ್ಲಿ ಓದು ಮುಗಿದು ಮೈಸೂರಿಗೆ ಬಂದೆ. ಒಮ್ಮೆ ಮೈಸೂರಿನಿಂದ ಚಿಕಿತ್ಸಾಲಯಕ್ಕೆ ಪ್ರಯಾಣಿಸುವಾಗ ಜೊತೆಯಲ್ಲಿದ್ದ ಹಿರಿಯ ವೈದ್ಯರಿಬ್ಬರು ನನ್ನ ಜೇಬಿನಲ್ಲಿದ್ದ ಹೀರೋ ಲೇಖನಿಯನ್ನು ಎರವಲು ಪಡೆದರು. ಚಿಕಿತ್ಸಾಲಯಕ್ಕೆ ಹೋಗಿ ಮತ್ತೆ ಚೀಟಿ ಬರೆಯಲು ಪೆನ್ ತೆಗೆದಾಗ nib ಮುರಿದಿದೆ ಎಂದು ತಿಳಿಯಿತು. ಆ ವೈದ್ಯರು Nib ಮುರಿದಿದ್ದಕ್ಕಿಂತ ಹೆಚ್ಚಾಗಿ ಅದನ್ನು ತಿಳಿಸದೆ ಹಿಂತಿರಿಗಿಸಿದ್ದು ಖೇದವಾಯಿತು. ಅಲ್ಲಿಗೆ ನನ್ನ ಶಾಯಿ ಲೇಖನಿ ಪರ್ವ ಕೊನೆಯಾಯಿತು.

ಮುಖ ಪುಟದಲ್ಲಿ ಈ ವಾಣಿಜ್ಯ ಜಾಹೀರಾತು. medium nib, gold plated,7 horses carved ಎಂದು ನೋಡಿದೆ. ಹಳೆಯ ನೆನಪುಗಳನ್ನು ಶಾಯಿಯಂತೆ ತುಂಬಿ ಕೊಂಡಿರುವ FOUNTAIN PEN 20 ವರ್ಷಗಳ ನಂತರ ಕೊಂಡು ಉಪಯೋಗಿಸುತ್ತಿರುವೆ. ಅದರ ಪಕ್ಕದಲ್ಲೇ ಒಂದು ಬಾಲ್ ಪಾಯಿಂಟ್ ಪೆನ್ ಕೂಡ ಇದೆ, ಯಾರಾದರೂ ಎರವಲು ಕೇಳಿದರೆ ಬೇಕಲ್ಲವೇ!
ದೀಪಕ್ ಭದ್ರ

ಕಾಮೆಂಟ್‌ಗಳಿಲ್ಲ:

ಬ್ಲಾಗ್ ಆರ್ಕೈವ್

Its blog I have created to enter my day to day search & feel like sharing the same with like minded people. I solicit a comment from all my friends.