ಬುಧವಾರ, ಮೇ 25, 2016

ಶತ ಮಾನ

ಹೆದರೆದರಿಯೆ ಇಣುಕು
ನೋಟ
ಕದ, ಸಂದಿಗಳಲೆ ಜಗ,
ಅದ್ಭುತ!

ಸಂಕೊಲೆಗಳು
ಮತ್ತೆ...
ಬಿಗಿದು ಕೊಂದವು,
ಗೂಟದ
ಹಗ್ಗ ದೂರವಷ್ಟೆ
ಕ್ರಮಿಸಲವಕಾಶ
ನಂತರ ಪಾಶ!

ಮೂಕ ರೋಧನ ...
ಕೇಳುವವರೆಲ್ಲ
ಏನು ಬೇಕು...
ಬೆಳ್ಳಿ,ವಜ್ರ , ಬಂಗಾರ
ಪಚ್ಛೆ ಮುತ್ತು ರತ್ನ?
ಕೋ,
ವೈಭವಿಸು

ನೀಡುವುದಾದರೆ
ಒಮ್ಮೆ ಮನ ಬಿಚ್ಚಿ
ನಗಲು ಬಿಡಿ
ಬಂಗಾರ ಪಂಜರವ
ತೊರೆಯಬಿಡಿ,
ತೊರೆ ನೀರೆ ಸಾಕೆನಗೆ;
ಕಬಂಧಗಳು
ಹದ್ದು ಕಾವಲು
ಪ್ರಶ್ನೆಗಳ ಸುರಿಮಳೆ
ನನಗೆ ಬೇಡ
ಹಕ್ಕಿಯಂತೆ ಸ್ವಚ್ಚಂದ
ಚಿಲಿಪಿಲಿಸುತ
ಸುತ್ತಬೇಕೀ ಜಗವ
ಮೌನದ ಮಾತು
ಅರ್ಥವಾಯಿತೆ
ನಿಮಗೆ
ಶತ(ಮಾನ)ಗಳಿಂದ
ಕಾಪಿಟ್ಟ ಮಾನವಿದು!
*ದೀಪಕ್

ಕಾಮೆಂಟ್‌ಗಳಿಲ್ಲ:

ಬ್ಲಾಗ್ ಆರ್ಕೈವ್

Its blog I have created to enter my day to day search & feel like sharing the same with like minded people. I solicit a comment from all my friends.